ನವದೆಹಲಿ, ಜೂನ್ 2: ಲೋಕಸಭೆ ಚುನಾವಣೆಯೊಟ್ಟಿಗೆ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳ ಪೈಕಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ (Assembly elections 2024) ಇಂದು ಪ್ರಕಟವಾಗುತ್ತಿದೆ. ಈ ಎರಡೂ ಈಶಾನ್ಯ ರಾಜ್ಯಗಳಲ್ಲಿ ಆಡಳಿತಾರೂಡ ಪಕ್ಷಗಳೇ ಗೆಲುವು ಸಾಧಿಸುತ್ತಿವೆ. ಅರುಣಾಚಲಪ್ರದೇಶದಲ್ಲಿ ಬಿಜೆಪಿ ದೊಡ್ಡ ಬಹುಮತ ಪಡೆಯುತ್ತಿದೆ. ಸಿಕ್ಕಿಂನಲ್ಲಿ ಎಸ್ಕೆಎಂ (ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ) ಕ್ಲೀನ್ ಸ್ವೀಪ್ಗೆ ಬಹಳ ಸಮೀಪ ಇದೆ.
ಸಿಕ್ಕಿಂನಲ್ಲಿ ಇರುವ 32 ಸ್ಥಾನಗಳ ಪೈಕಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಬರೋಬ್ಬರಿ 32 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆ ಪಡೆದುಕೊಂಡಿದೆ. 2019ರ ಚುನಾವಣೆಯಲ್ಲಿ ಎಸ್ಕೆಎಂಗಿಂತ ಹೆಚ್ಚು ಶೇಕಡಾವಾರು ಮತ ಪಡೆದಿದ್ದ ಮತ್ತು 1992ರಿಂದ 27 ವರ್ಷ ಕಾಲ ಸತತವಾಗಿ ಆಡಳಿತ ನಡೆಸಿದ್ದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಪಕ್ಷ ಕೇವಲ ಒಂದು ಸ್ಥಾನ ಪಡೆಯುವ ಸಾಧ್ಯತೆ ಕಾಣುತ್ತಿದೆ.
ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ ನಿಜವಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಎಎಪಿ ಅಭ್ಯರ್ಥಿ
ಈ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳಿಗೆ ಠೇವಣಿ ಕೂಡ ಸಿಗುತ್ತಿಲ್ಲ. ಪ್ರೇಮ್ ಸಿಂಗ್ ತಮಾಂಗ್ ಅವರೇ ಸಿಎಂ ಆಗಿ ಮುಂದುವರಿಯುವ ನಿರೀಕ್ಷೆ ಇದೆ.
ಅರುಣಾಚಲಪ್ರದೇಶ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿವೆ. ಬಹುಮತಕ್ಕೆ 31 ಬೇಕಾಗುತ್ತದೆ. ಆಡಳಿತಾರೂಡ ಬಿಜೆಪಿ ಪಕ್ಷ 46 ಸ್ಥಾನಗಳಲ್ಲಿ ಗೆಲುವು ಅಥವಾ ಮುನ್ನಡೆ ಪಡೆದಿದೆ. ಇದರೊಂದಿಗೆ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸತತವಾಗಿ ಸರ್ಕಾರ ರಚಿಸಲಿದೆ.
2019ರ ಚುನಾವಣೆಯಲ್ಲಿ ಪಡೆದುದಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಈ ಬಾರಿ ಬಿಜೆಪಿ ಪಡೆಯುತ್ತಿರುವಂತಿದೆ. ಕಳೆದ ಬಾರಿ 41 ಸ್ಥಾನಗಳನ್ನು ಬಿಜೆಪಿ ಜಯಿಸಿತ್ತು. ಜೆಡಿಯು ಏಳು, ಎನ್ಪಿಪಿ ಐದು ಮತ್ತು ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿ ಕಾಂಗ್ರೆಸ್ ಶೂನ್ಯ ಗಳಿಕೆ ಸಾಧಿಸಬಹುದು. ಎನ್ಪಿಪಿಗೆ ಐದು ಸ್ಥಾನಗಳು ಉಳಿಯಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ