Goa Assembly Election 2022: ಗೋವಾದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಮಿತ್ ಪಾಲೇಕರ್; ಅರವಿಂದ್ ಕೇಜ್ರಿವಾಲ್ ಘೋಷಣೆ
Amit Palekar: ಅಮಿತ್ ಪಾಲೇಕರ್ ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. 2021ರ ಆಗಸ್ಟ್ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಗೋವಾದ ಸೇಂಟ್ಕ್ರೂಜ್ ನಿವಾಸಿ.
ಫೆ.10ರಿಂದ ಪ್ರಾರಂಭವಾಗಲಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ನಿನ್ನೆಯಷ್ಟೇ ಪಂಜಾಬ್ನಲ್ಲಿ ಆಪ್ ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆಯಾಗಿತ್ತು. ಹಾಗೇ, ಇಂದು ಗೋವಾದಲ್ಲಿ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅದರಂತೆ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್. ಇಂದು ಸುದ್ದಿಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದು, ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಲಿದೆ ಎಂದೂ ಹೇಳಿದ್ದಾರೆ. ಅಂದಹಾಗೆ, ಈ ಪಕ್ಷ 2017ರ ಗೋವಾ ಚುನಾವಣೆಯಲ್ಲಿ ಒಂದೇ ಒಂದೂ ಕ್ಷೇತ್ರವನ್ನೂ ಗೆದ್ದಿರಲಿಲ್ಲ.
ಅಮಿತ್ ಪಾಲೇಕರ್ ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. 2021ರ ಆಗಸ್ಟ್ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಗೋವಾದ ಸೇಂಟ್ಕ್ರೂಜ್ ನಿವಾಸಿ. ಮೊದಲಿನಿಂದಲೂ ಸಾಮಾಜಿಕ ಕಾರ್ಯಕರ್ತನಾಗಿದ್ದ ಅವರು, ಆಮ್ ಆದ್ಮಿ ಪಕ್ಷಕ್ಕೆ ನಾನು ಸೇರ್ಪಡೆಯಾಗಲು ಕಾರಣ, ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ಕೊಡುವ ಏಕೈಕ ಪಕ್ಷ ಇದು ಎಂದು ಹೇಳಿದ್ದರು. ಹಾಗೇ ಅರವಿಂದ್ ಕೇಜ್ರಿವಾಲ್ರನ್ನು ಶ್ಲಾಘಿಸಿದ್ದರು.
ಗೋವಾದ ಕೊರ್ಟಾಲಿಮ್ ಎಂಬ ಹಳ್ಳಿಯಲ್ಲಿ ಭಾನುವಾರ ಮನೆಮನೆ ಪ್ರಚಾರ ನಡೆಸಿದ್ದ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಆಪ್ ಸದಸ್ಯರು, ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ಗೋವಾದ ಜನರು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಲು ಉತ್ಸುಕರಾಗಿದ್ದಾರೆ. ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಬದಲಾವಣೆ ಬೇಕಾಗಿದೆ. ದೆಹಲಿಯಲ್ಲಿ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಇಲ್ಲಿನ ಜನರಿಗೆ ಗೊತ್ತಿದೆ. ಈ ರಾಜ್ಯದಲ್ಲಿ ಕೂಡ ಹಾಗೇ ಅಭಿವೃದ್ಧಿಯಾಗಬೇಕು ಎಂಬುದು ಇಲ್ಲಿನವರ ಬಯಕೆ ಎಂದು ಹೇಳಿದ್ದರು. ಗೋವಾದಲ್ಲಿ ಫೆ.14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತಎಣಿಕೆ ನಡೆಯಲಿದೆ.
ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ಉದ್ಯಮ, ವ್ಯಾಪಾರ, ಗಣಿಗಾರಿಕೆ, ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಅರವಿಂದ್ ಕೇಜ್ರಿವಾಲ್ ಈಗಾಗಲೇ ಭರವಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ನಿರುದ್ಯೋಗಿಗಳಿಗೆ, ಉದ್ಯೋಗ ಸಿಗುವವರೆಗೂ ಮಾಸಿಕ 3 ಸಾವಿರ ರೂಪಾಯಿ ಭತ್ಯೆ ನೀಡುವ ಘೋಷಣೆಯನ್ನೂ ಹಿಂದೆಯೇ ಮಾಡಿದ್ದಾರೆ. ಪಂಜಾಬ್, ಉತ್ತರಾಖಂಡ್ಗಳಲ್ಲೂ ಕೂಡ ಇಂಥ ಹತ್ತು-ಹಲವು ಆಕರ್ಷಕ ಭರವಸೆಯನ್ನು ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ. ಇನ್ನು ಪಂಜಾಬ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಭಗವಂತ್ ಮಾನ್ ಅವರನ್ನು ಆಪ್ ಆಯ್ಕೆ ಮಾಡಿದೆ.
ಇದನ್ನೂ ಓದಿ: ಒಂದು ಹುಡುಗಾಟದಿಂದ ಜಗತ್ತಿನಾದ್ಯಂತ ಸುದ್ದಿಯಾದ ಹಳದಿ ಕಾರಿನ ಹುಡುಗಿ; ಎಚ್ಚರತಪ್ಪಿದ್ದರೆ ಜೀವ ಹೋಗುತ್ತಿತ್ತು !
Published On - 12:32 pm, Wed, 19 January 22