ಗುಜರಾತ್ ವಿಧಾನಸಭೆ ಚುನಾವಣೆ: ಒಂದೆಡೆ ಮೋದಿ ರೋಡ್ ಶೋ, ಮತ್ತೊಂದೆಡೆ ಬಂಡಾಯ, 7 ಶಾಸಕರು ಸಸ್ಪೆಂಡ್

ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಇದರ ಮಧ್ಯೆ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ.

ಗುಜರಾತ್ ವಿಧಾನಸಭೆ ಚುನಾವಣೆ: ಒಂದೆಡೆ ಮೋದಿ ರೋಡ್ ಶೋ, ಮತ್ತೊಂದೆಡೆ ಬಂಡಾಯ, 7 ಶಾಸಕರು ಸಸ್ಪೆಂಡ್
Narendra Modi
Updated By: ರಮೇಶ್ ಬಿ. ಜವಳಗೇರಾ

Updated on: Nov 20, 2022 | 8:23 PM

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ (Gujarat Assembly Elections 2022) ರಂಗೇರಿದ್ದು, ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ರಣತಂತ್ರ ರೂಪಿಸಿದೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಹಲವೆಡೆ ರೋಡ್​ ಶೋ ನಡೆಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಇದರ ಮಧ್ಯೆ ಬಿಜೆಪಿ ಹಾಲಿ ಶಾಸಕರೇ ಪಕ್ಷಕ್ಕೆ ಕಂಟಕವಾಗಿದ್ದಾರೆ.

ಗುಜರಾತ್ ಚುನಾವಣಾ ರ್ಯಾಲಿಗಳಿಗೆ ಮುಂಚಿತವಾಗಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಮೋದಿ

ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ಸಿಗದಿದ್ದರಿಂದ ಹಾಲಿ ಶಾಸಕರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ 7 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನಿಂದ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಏಳು ಬಂಡಾಯ ನಾಯಕರನ್ನು ಅಮಾನತುಗೊಳಿಸಿ ಗುಜರಾತ್‌ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಏಳು ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಸಿಆರ್ ಪಾಟೀಲ್ ತಿಳಿಸಿದ್ದಾರೆ.

ಹರ್ಸಾದ್ ವಾಸವ (ನಾಂದೋಡ್ ಕ್ಷೇತ್ರ- ನರ್ಮದಾ ಜಿಲ್ಲೆ), ಅರವಿಂದಭಾಯ್ ಲಡಾನಿ (ಕೇಶೋದ್-ಜುನಾಗಢ), ಛತ್ರಸಿನ್ಹ್ ಗುಂಜರ್ಸಾರಿಯಾ (ಧೃಂಗಧ್ರ – ಸುರೇಂದ್ರನಗರ), ಕೇತನ್ ಪಟೇಲ್ (ಪರ್ಡಿ – ವಲ್ಸಾದ್), ಭರತ್ ಚಾವ್ಡಾ (ರಾಜ್‌ಕೋಟ್ ಗ್ರಾಮಾಂತರ – ರಾಜ್‌ಕೋಟ್), ಉದಯ್ ಶಾ (ವೆರಾವಲ್ – ಗಿರ್ ಸೋಮನಾಥ್) ಮತ್ತು ಅಮ್ರೇಲಿ ಜಿಲ್ಲೆಯ ರಾಜುಲಾದಿಂದ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕರಣ್ ಬರಯ್ಯ ಎಂಬುವವರನ್ನು ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಮಾಧ್ಯಮ ಸಂಯೋಜಕ ಯಜ್ಞೇಶ್ ದವೆ ಮಾಹಿತಿ ನೀಡಿದ್ದಾರೆ.

ಗುಜರಾತ್ ತಲುಪಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಚಾರ ರ್ಯಾಲಿ ಆರಂಭಿಸುವ ಮುನ್ನ ಸೋಮನಾಥ ದೇವಾಲಯಕ್ಕೆ (Somnath temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಗುಜರಾತ್ ನಲ್ಲಿ ಎರಡು ಹಂತಗಳಾಗಿ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ