ಗುಜರಾತ್ನಲ್ಲಿ ಓಲೈಕೆ ರಾಜಕಾರಣ: ಮುಸ್ಲಿಮರು ಮಾತ್ರ ದೇಶ-ಪಕ್ಷವನ್ನು ಕಾಪಾಡಬಲ್ಲರು ಎಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ವಾಗ್ದಾಳಿ
‘ಎನ್ಆರ್ಸಿಯನ್ನು ಕಾಂಗ್ರೆಸ್ ಮಾತ್ರ ವಿರೋಧಿಸಿತ್ತು. ದೇಶಾದ್ಯಂತ ಕಾಂಗ್ರೆಸ್ ಮಾತ್ರ ಮುಸ್ಲಿಮರ ಹಿತ ಕಾಪಾಡುತ್ತಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ.
ಗಾಂಧಿನಗರ: ‘ಕೇವಲ ಮುಸ್ಲಿಮರು ಮಾತ್ರ ಕಾಂಗ್ರೆಸ್ ಪಕ್ಷವನ್ನು ಉಳಿಸಬಲ್ಲರು’ ಎಂದು ಗುಜರಾತ್ನ ಸಿದ್ಧಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದನ್ ಠಾಕೂರ್ ಹೇಳಿಕೆಯು ಇದೀಗ ದೊಡ್ಡ ವಿವಾದವಾಗಿದೆ. ಈ ಹೇಳಿಕೆಯನ್ನೇ ಪ್ರಸ್ತಾಪಿಸಿ ಬಿಜೆಪಿಯು ‘ಕಾಂಗ್ರೆಸ್ ಪಕ್ಷವು ಓಲೈಕೆ ರಾಜಕಾರಣ ಮಾಡುತ್ತಿದೆ’ ಎಂದು ಆಕ್ಷೇಪಿಸಿದೆ. ಈ ಹೇಳಿಕೆಯನ್ನು ಪ್ರಸ್ತಾಪಿಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹ್ನಾಜ್ ಪೂನಾವಾಲಾ, ‘ಕಾಂಗ್ರೆಸ್ ಎಷ್ಟು ಕೀಳುಮಟ್ಟದಲ್ಲಿ ಯೋಚಿಸುತ್ತಿದೆ ಎಂಬುದು ಈಗ ಬಹಿರಂಗವಾಗಿದೆ. ಮುಸ್ಲಿಂ ತುಷ್ಟೀಕರಣವನ್ನು ಯಾವುದೇ ಮಿತಿಯಿಲ್ಲದೇ ಬಹಿರಂಗವಾಗಿ ಶುರು ಮಾಡಿದೆ. ಕಾಂಗ್ರೆಸ್ಗೆ ಕೋಮುವಾದ ಬೇಕಿದೆ’ (! INC = I Need Communalism) ಎಂದು ಟೀಕಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ‘ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕು ಮುಸ್ಲಿಮರಿಗೆ ಸೇರಿದ್ದು’ ಎಂಬ ಹೇಳಿಕೆ ನೀಡಿದ ನಂತರ ಇಂಥ ಹೇಳಿಕೆಗಳು ಹೆಚ್ಚಾಗಿವೆ ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಟೀಕಿಸಿದ್ದಾರೆ. ಕರ್ನಾಟಕದ ಸತೀಶ್ ಜಾರಕಿಹೊಳಿ ಹಿಂದೂ ಪದಕ್ಕೆ ಹೀನಾರ್ಥವಿದೆ ಎಂದು ಹೇಳಿದ್ದನ್ನೂ ಪ್ರಸ್ತಾಪಿಸಿರುವ ಅವರು, ಬಿಜೆಪಿ ಸರ್ಕಾರವು ನಿಮ್ಮ ತ್ರಿವಳಿ ತಲಾಖ್ ಮತ್ತು ಹಜ್ ಸಬ್ಸಿಡಿಗೆ ಕಡಿವಾಣ ಹಾಕಿದೆ ಎಂದು ತಿಳಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯು ಡಿಸೆಂಬರ್ 1ರಿಂದ ಆರಂಭವಾಗಲಿದ್ದು, ಎಲ್ಲ ಪಕ್ಷಗಳೂ ಪ್ರಚಾರ ಚುರುಕುಗೊಳಿಸಿವೆ. ಶನಿವಾರ ನಡೆದ ಬಹಿರಂಗ ಸಭೆಯಲ್ಲಿ ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದನ್ ಠಾಕೂರ್, ‘ಅವರು ಇಡೀ ದೇಶವನ್ನು ಹಾಳು ಮಾಡಿದ್ದಾರೆ. ದೇಶವನ್ನು ಉಳಿಸುವ ಸಾಮರ್ಥ್ಯ, ಕಾಂಗ್ರೆಸ್ ಪಕ್ಷವನ್ನು ಉಳಿಸುವ ಸಾಮರ್ಥ್ಯ ಇರುವುದು ಕೇವಲ ಮುಸ್ಲಿಮರಿಗೆ ಮಾತ್ರ’ ಎಂದು ಅವರು ಹೇಳಿದ್ದರು.
‘ಎನ್ಆರ್ಸಿಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತ್ರ ಬೀದಿಗೆ ಬಂದು ಹೋರಾಡಿದರು. ಬೇರೆ ಯಾವುದೇ ಪಕ್ಷವು ಮುಸ್ಲಿಮರ ಪರವಾಗಿ ಮಾತನಾಡಲಿಲ್ಲ. ದೇಶಾದ್ಯಂತ ಕಾಂಗ್ರೆಸ್ ಮಾತ್ರ ಮುಸ್ಲಿಮರ ಹಿತ ಕಾಪಾಡುತ್ತಿದೆ’ ಎಂದು ಠಾಕೂರ್ ತಿಳಿಸಿದರು.
ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ ಅವರು, ‘ಬಿಜೆಪಿಯು ನಿಮಗೆ ಹಲವು ರೀತಿಯಲ್ಲಿ ತೊಂದರೆ ನೀಡಲಿ ಯತ್ನಿಸಿತು. ತ್ರಿವಳಿ ತಲಾಖ್ ವಿಚಾರವಾಗಿ ಅವರೇ ಸುಪ್ರೀಂಕೋರ್ಟ್ಗೆ ಹೋಗಿದ್ದರು, ಹೊಸ ಕಾನೂನು ತಂದರು. ಕಾಂಗ್ರೆಸ್ ಪಕ್ಷವು ಮುಸ್ಲಿಮರ ಹಜ್ ಯಾತ್ರೆಗೆ ಸಹಾಯಧನ ನೀಡುತ್ತಿತ್ತು. ಆದರೆ ಬಿಜೆಪಿ ಅದನ್ನು ಕೊನೆಗೊಳಿಸಿತು. ನಿಮ್ಮ ಸಣ್ಣಪುಟ್ಟ ವ್ಯಾಪಾರಗಳಿಗೆ ಸಿಗುತ್ತಿದ್ದ ಸುಲಭದ ಸಾಲ-ಸಹಾಯಧನವನ್ನೂ ಅವರು ಕೊನೆಗೊಳಿಸಿದರು. ಮುಂದಿನ ದಿನಗಳಲ್ಲಿ ಅವರು ನಿಮ್ಮನ್ನು ಹತ್ತಿಕ್ಕಲು ಇನ್ನಷ್ಟು ಪ್ರಯತ್ನ ಮಾಡದೆ ಸುಮ್ಮನಾಗುವುದಿಲ್ಲ. ನಮ್ಮನ್ನು ಅಧಿಕಾರಕ್ಕೆ ತಂದರೆ ನಿಮ್ಮನ್ನು ಕಾಪಾಡುತ್ತೇವೆ’ ಎಂದು ಅವರು ವಿವರಿಸಿದರು.
Congress candidate Sidhpur candidate Chandanji Thakor saying “only Muslims can save Congress!! BJP govt stopped your Triple Talaq & Hajj Subsidy” – After PM MMS saying 1st right on resources belongs to Muslims & after attacks on Hindu Astha by Jarkiholi & others, Congress 1/n pic.twitter.com/9iPsJ59JsK
— Shehzad Jai Hind (@Shehzad_Ind) November 19, 2022
ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ, ಬಲಾಬಲ
ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಗುಜರಾತ್ ರಾಜ್ಯದಲ್ಲಿ ಕಳೆದ 27 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷವು ಸಂಘಟನೆ ಚುರುಕುಗೊಳಿಸಿದ್ದು, ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.
ಗುಜರಾತ್ನಲ್ಲಿ 2.53 ಕೋಟಿ ಪುರುಷ ಮತದಾರರು, 2.37 ಕೋಟಿ ಮಹಿಳಾ ಮತದಾರರು ಇದ್ದಾರೆ. 4.61 ಲಕ್ಷ ಮತದಾರರು ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಆಡಳಿತಾರೂಢ ಬಿಜೆಪಿ 111, ಕಾಂಗ್ರೆಸ್ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ.
Published On - 10:12 am, Sun, 20 November 22