ಮಂಗಳೂರು: ವಿಧಾನಸಭೆ ಚುನಾವಣೆಗೆ(Karnataka Assembly Election) ದಿನಾಂಕ ನಿಗದಿಯಾಗಿದೆ. ಈಗಾಗಲೇ ಬಿಜೆಪಿ 212 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಡಪಕ್ಷಗಳು ನಿರ್ಧಿರಿಸಿವೆ. ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಡೆಯಲು ಕರಾವಳಿ ಜಿಲ್ಲೆಗಳ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸದಿರಲು ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳು ನಿರ್ಧರಿಸಿವೆ. ಹೌದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ಪ್ರದೇಶದಲ್ಲಿ ಜಾತ್ಯತೀತ ಮತಗಳನ್ನು ಕ್ರೋಢೀಕರಿಸಬೇಕು ಎಂದು ಉಭಯ ಪಕ್ಷಗಳು ತೀರ್ಮಾನಿಸಿವೆ.
ಸಾಕಷ್ಟು ಪ್ರಭಾವ ಹೊಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲು ಖಚಿತವಾಗಲು ಎಡಪಕ್ಷಗಳು ಚುನಾವಣಾ ಕಣದಿಂದ ದೂರ ಉಳಿಯಲು ನಿರ್ಧರಿಸಿವೆ. ಈ ಬಗ್ಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ, ಜಾತ್ಯತೀತ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಸಕ್ರಿಯರಾಗಿದ್ದೇವೆ. ಎರಡು ಪಕ್ಷಗಳು ತಮ್ಮ ಚುನಾವಣಾ ಕಾರ್ಯತಂತ್ರವನ್ನು ರೂಪಿಸಲು ಏಪ್ರಿಲ್ 18 ರಂದು ಇಲ್ಲಿನ ಟೌನ್ ಹಾಲ್‌ನಲ್ಲಿ ಸಭೆ ಕರೆದಿದ್ದೇವೆ. ಈ ಸಂದರ್ಭದಲ್ಲಿ ಜಾತ್ಯಾತೀತ ಪಕ್ಷಗಳಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಚುನಾವಣೆಯಲ್ಲಿ ಒಳ ಮೀಸಲಾತಿ ಕಿಚ್ಚು; ಬಿಜೆಪಿಗೆ ಮತ ಹಾಕದಂತೆ ಪ್ರಮಾಣ ಮಾಡಿಸಿದ ಸ್ವಾಮೀಜಿ
1962 ರಲ್ಲಿ ಸಿಪಿಐ ನಾಯಕ ಎ ಕೃಷ್ಣ ಶೆಟ್ಟಿ ಅವರು ಹಿಂದಿನ ಉಳ್ಳಾಲ (ಈಗ ಮಂಗಳೂರು) ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್‌ನ ಬಿ ಎಂ ಇದ್ದಿನಬ್ಬ ಅವರನ್ನು ಸೋಲಿಸಿದಾಗ ಕರಾವಳಿ ಕರ್ನಾಟಕವು ಎಡಪಕ್ಷಗಳ ದೃಢವಾದ ನೆಲೆಯಾಗಿತ್ತು. ಎಡಪಕ್ಷಗಳ ಯುವ ಘಟಕಗಳು ಕರಾವಳಿ ಜಿಲ್ಲೆಗಳಲ್ಲಿ ವಿವಿಧ ಸಾಮಾಜಿಕ ಸಮಸ್ಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಮತ್ತು ಅದರ ಜನವಿರೋಧಿ ನೀತಿಗಳನ್ನು ಸೋಲಿಸುವುದೇ ಎಡಪಕ್ಷಗಳ ಗುರಿಯಾಗಿದೆ ಎಂದರು.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 am, Fri, 14 April 23