ಕಾರ್ಕಳದಲ್ಲಿ ನಿಲ್ಲದ ಗುರು-ಶಿಷ್ಯರ ಸಂಘರ್ಷ: ಭ್ರಷ್ಟಾಚಾರ ಆರೋಪ, ಬಹಿರಂಗ ಚರ್ಚೆಗೆ ಆಹ್ವಾನಿಸಿದ ಪ್ರಮೋದ್​​ ಮುತಾಲಿಕ್​

|

Updated on: May 16, 2023 | 12:54 PM

ನಾನು ಕೇವಲ ಆರೋಪ ಮಾಡಿಲ್ಲ ದಾಖಲೆ ಬಹಿರಂಗಗೊಳಿಸಿದ್ದೇನೆ. ಅಭಿವೃದ್ಧಿ ಜೊತೆ ಕಮಿಷನ್ ಮತ್ತು ಕಲೆಕ್ಷನ್ ಕೂಡ ಮಾಡಿದ್ದೀರಿ. ಕಾರ್ಕಳಕ್ಕೆ ಬಂದು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಕಾರ್ಕಳದಲ್ಲಿ ನಿಲ್ಲದ ಗುರು-ಶಿಷ್ಯರ ಸಂಘರ್ಷ: ಭ್ರಷ್ಟಾಚಾರ ಆರೋಪ, ಬಹಿರಂಗ ಚರ್ಚೆಗೆ ಆಹ್ವಾನಿಸಿದ ಪ್ರಮೋದ್​​ ಮುತಾಲಿಕ್​
ಪ್ರಮೋದ್ ಮುತಾಲಿಕ್​ (ಎಡಚಿತ್ರ) ಸುನಿಲ್​ ಕುಮಾರ್​ (ಬಲಚಿತ್ರ)
Follow us on

ಉಡುಪಿ: ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಮತ್ತು ಶಿಷ್ಯ, ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಮಧ್ಯದ ಕಾಳಗ ಅಂತ್ಯವಾಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಶಿಷ್ಯನ ವಿರುದ್ಧ ಗುರು ಪ್ರಮೋದ್ ಮುತಾಲಿಕ್ ತೊಡೆ ತಟ್ಟಿದ್ದರು. ಈ ವೇಳೆ ಗುರುವಿನ ವಿರುದ್ಧ ತುಟಿ ಪಿಟಿಕ್ ಎನ್ನದ ಸುನಿಲ್​ ಕುಮಾರ್​​, ನಿನ್ನೆ (ಮೇ.15) ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರಮೋದ್ ಮುತಾಲಿಕ್ ಅವರು ಕಾಂಗ್ರೆಸ್​ನವರಿಂದ ಹಣ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಆರೋಪ ಮಾಡಿದ್ದರು. ಇದಕ್ಕೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದಾರೆ. ತನ್ನ ವಿರುದ್ಧದ ಆರೋಪಕ್ಕೆ ಮಾರಿಗುಡಿಯಲ್ಲಿ ಪ್ರಮಾಣ ಮಾಡಿ ಬಂದ ಪ್ರಮೋದ್ ಮುತಾಲಿಕ್, ನಾನು ಕೇವಲ ಆರೋಪ ಮಾಡಿಲ್ಲ ದಾಖಲೆ ಬಹಿರಂಗಗೊಳಿಸಿದ್ದೇನೆ. ಅಭಿವೃದ್ಧಿ ಜೊತೆ ಕಮಿಷನ್ ಮತ್ತು ಕಲೆಕ್ಷನ್ ಕೂಡ ಮಾಡಿದ್ದೀರಿ ಎಂದು ಸುನಿಲ್​ ಕುಮಾರ್​ ವಿರುದ್ಧ ಆರೋಪಿಸಿದರು.

ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ ಅವರು ನನ್ನನ್ನು ಡೀಲ್ ಮಾಸ್ಟರ್ ಎಂದು ಕರೆದಿದ್ದೀರಿ. ಹಣ ಗಳಿಸುವ ಉದ್ದೇಶ ಇದ್ದಿದ್ದರೇ ಧಾರವಾಡದಿಂದ ಕಾರ್ಕಳಕ್ಕೆ ಬರಬೇಕಾಗಿರಲಿಲ್ಲ. 48 ವರ್ಷ ಹೋರಾಟ ಮಾಡಬೇಕಾಗಿ ಇರಲಿಲ್ಲ. ನಾನು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಯಾವುದೇ ಉತ್ತರ ನೀಡಿಲ್ಲ. ಕಾರ್ಕಳಕ್ಕೆ ಬಂದು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುತಾಲಿಕ್ ವಿರುದ್ದ ಸುನಿಲ್ ಕುಮಾರ್ ವಾಗ್ದಾಳಿ

ಸುನಿಲ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಕನ್ನಡಿ ಮುಂದೆ ನಿಂತು ಸುನಿಲ್ ಕುಮಾರ್ ಅವಲೋಕನ ಮಾಡಿಕೊಳ್ಳಬೇಕು. ಮಾಜಿ ಸಚಿವ ಈಶ್ವರಪ್ಪ ಇಂಧನ ಇಲಾಖೆ ಭ್ರಷ್ಟಾಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದರು. ಕಾರ್ಕಳದ ಅಧಿಕಾರಿಗಳು ಕೂಡ ಆರೋಪ ಮಾಡಿದ್ದರು. ಕಾರ್ಕಳದ ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡಿ ಬಂದಿದ್ದೇನೆ. ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡುವ ನೈತಿಕತೆ ನಿಮಗೆ ಇದೆಯಾ? ಭ್ರಷ್ಟತೆ, ವಂಚನೆ, ಮೋಸದಿಂದ ಗೆದ್ದಿದ್ದೀರಿ ನಿಮಗೆ ಅಭಿನಂದನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾನದಲ್ಲಿ ಸೋತಿರಬಹುದು ಹೋರಾಟ, ಹಿಂದುತ್ವ, ಸತ್ಯದಲ್ಲಿ ನಾನು ಸೋತಿಲ್ಲ. ನೀವು ನನಗೆ ಬುದ್ಧಿ ಕಲಿಸುವ ಅವಶ್ಯಕತೆ ಇಲ್ಲ ಆರ್‌ಎಸ್‌ಎಸ್‌ ಕಲಿಸಿದೆ. ತಾಕತ್ತಿದ್ದರೆ ನನ್ನ ಸವಾಲು ಸ್ವೀಕಾರ ಮಾಡಿ. ಮಾರಿಗುಡಿಗೆ ಹೋಗಿ ಪ್ರಮಾಣ ಮಾಡಿ. ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ ಮಾಡಿ ಎಂದು ಸವಾಲು ಹಾಕಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Tue, 16 May 23