ಜಾರಕಿಹೊಳಿ ಕುಟುಂಬಕ್ಕೆ ಮತ್ತೆ ಪವರ್: ಲಾಬಿ ಮಾಡದಿದ್ದರೂ ಹುಡುಕಿಕೊಂಡು ಮನೆಗೆ ಬಾಗಿಲಿಗೆ ಬಂದ ಅಧಿಕಾರ
ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಎನ್ನುವ ಹೆಸರು ಚಿರಪರಿಚಿತ. ಸರ್ಕಾರವನ್ನ ಹುಟ್ಟು ಹಾಕುವ, ಸರ್ಕಾರವನ್ನ ಬೀಳಿಸುವ ಶಕ್ತಿ ಈ ಕುಟುಂಬಕ್ಕಿದೆ ಎನ್ನುವುದದು ಎರಡು ಬಾರಿ ಸಾಬೀತಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ (Jarkiholi Family) ಎನ್ನುವ ಹೆಸರು ಚಿರಪರಿಚಿತ. ಸರ್ಕಾರವನ್ನ ಹುಟ್ಟು ಹಾಕುವ, ಸರ್ಕಾರವನ್ನ ಬೀಳಿಸುವ ಶಕ್ತಿ ಈ ಕುಟುಂಬಕ್ಕಿದೆ ಎನ್ನುವುದದು ಎರಡು ಬಾರಿ ಸಾಬೀತಾಗಿದೆ. ಇಷ್ಟೊಂದು ಪವರ್ ಫುಲ್ ಇರುವ ಈ ಕುಟುಂಬ ಯಾವ ಪಕ್ಷ ಸರ್ಕಾರಕ್ಕೆ ಬಂದ್ರೂ ಹಿಡಿತ ಇರುತ್ತೆ ಎನ್ನುವುದಕ್ಕೆ ಇಂದಿಗೂ ಸಾಬೀತು ಮಾಡಿದೆ. ಹೌದು.. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಛಾಪು ಮೂಡಿಸಿ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಜಾರಕಿಹೊಳಿ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಅಧಿಕಾರ ಒಲಿದು ಬಂದಿದೆ. ಲಾಬಿ ಮಾಡದೆ ಮನೆಯಲ್ಲಿದ್ದರೂ ಸಚಿವ ಸ್ಥಾನ ಮನೆಗೆ ಹುಡುಕಿಕೊಂಡು ಬಂದಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಸಿರುವ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಮಿನಿಸ್ಟರ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಷ್ಟೇ ಅಲ್ಲ.. ರಾಜ್ಯ ಮಟ್ಟದಲ್ಲೂ ಜಾರಕಿಹೊಳಿ ಕುಟುಂಬ ಹೆಸ್ರು ಮಾಡಿದೆ. ಈ ಕುಟುಂಬದ ಐದು ಜನ ಅಣ್ತಮ್ಮಂದಿರ ಪೈಕಿ ನಾಲ್ವರು ಬ್ರದರ್ಸ್ ಒಂದೊಂದು ಸ್ಥಾನದಲ್ಲಿದ್ದಾರೆ. ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಾಸಕರಾಗಿ ಆಯ್ಕೆಯಾಗಿದ್ರೆ, ಲಖನ್ ಜಾರಕಿಹೊಳಿ ಎಂಎಲ್ಸಿ ಆಗಿದ್ದಾರೆ. ಈ ನಾಲ್ವರ ಪೈಕಿ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಸರ್ಕಾರದಲ್ಲಿ ಮಿನಿಸ್ಟರ್ ಆಗಿದ್ದಾರೆ. ಈ ಮೂಲಕ ಯಾವುದೇ ಸರ್ಕಾರ ಬಂದ್ರೂ ಅದ್ರಲ್ಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಇರುತ್ತಾರೆ ಎನ್ನುವುದು ಮತ್ತೆ ರುಜುವಾಗಿದೆ.
ಜಾರಕಿಹೊಳಿ ಅಣ್ಣ ತಮ್ಮಂದಿರ ರಾಜಕೀಯ ಇತಿಹಾಸ ನೋಡೋದಾದರೆ, ಧರ್ಮಸಿಂಗ್ ಮತ್ತು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಂಎಲ್ಸಿ ಆಗಿದ್ದ ಸತೀಶ್ ಜಾರಕಿಹೊಳಿ ಜವಳಿ ಖಾತೆ ಸಚಿವರಾಗಿದ್ದರು. ಕುಮಾರಸ್ವಾಮಿ-ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಸಚಿರಾಗಿದ್ದರು. ನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಸಚಿವರಾಗಿದ್ದಾರೆ. ಸತೀಶ್ ಜಾರಕಿಹೊಳಿ ನಾಲ್ಕನೇ ಬಾರಿಗೆ ಸಚಿವರಾಗಿ ಆಯ್ಕೆಯಾದ್ದರೆ ಇತ್ತ ರಮೇಶ್ ಜಾರಕಿಹೊಳಿ ಈವರೆಗೂ ಮೂರು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಾಲಚಂದ್ರ ಜಾರಕಿಹೊಳಿ ನಾಲ್ಕು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗೆ 2004ರಿಂದ ಈ ವರೆಗೂ ಯಾವುದೇ ಸರ್ಕಾರ ಇದ್ದರೂ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಸಚಿವರಾಗುತ್ತಾ ಬಂದಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನವನ್ನ ಬೆಳಗಾವಿಯಲ್ಲಿ ಗೆಲ್ಲಿಸಿಕೊಂಡು ಬಂದ ಸತೀಶ್ ಜಾರಕಿಹೊಳಿಯನ್ನ ಸಿದ್ದರಾಮಯ್ಯ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಒಟ್ಟಾರೆ ರಾಜ್ಯ ರಾಜಕೀಯದಲ್ಲಿ ಜಾರಕಿಹೊಳಿ ಕುಟುಂಬ ಪವರ್ ಫುಲ್ ಎನಿಸಿಕೊಂಡಿದೆ.
Published On - 7:12 am, Mon, 22 May 23