ನಿಮ್ಮ ಮನಸ್ಸು ಗೆದ್ದು ಮತ ಕೇಳ್ತಿವಿ, ಬಿಹಾರ್ ರಾಜಕಾರಣ ಮಾಡುವುದಿಲ್ಲ; ಪರೋಕ್ಷವಾಗಿ ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭವಾನಿ ರೇವಣ್ಣ ಪರೋಕ್ಷವಾಗಿ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಸನ: ರಾಜ್ಯ ಚುನಾವಣೆಗೆ ಅಖಾಡ ಸಿದ್ಧವಾಗಿದೆ(Karnataka Assembly Elections 2023). ಕೆಲವೇ ದಿನಗಳಲ್ಲಿ ಮತದಾರ ಪ್ರಭುಗಳು ರಾಜಕೀಯ ಭವಿಷ್ಯ ನಿರ್ಧಾರ ಮಾಡಲಿದ್ದಾರೆ. ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು ರಾಜಕೀಯ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಮತ್ತೊಂದೆಡೆ ಆರೋಪ-ಪ್ರತ್ಯಾರೋಪ, ವಾಗ್ದಾಳಿಗಳು ಹೆಚ್ಚಾಗಿವೆ. ಸದ್ಯ ಕರವೇ ವತಿಯಿಂದ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ(HP Swaroop) ಬೆಂಬಲ ಘೋಷಣೆ ಹಾಗೂ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಪ್ರೀತಂಗೌಡ(Preetham Gowda) ವಿರುದ್ಧ ಪರೋಕ್ಷವಾಗಿ ಭವಾನಿ ರೇವಣ್ಣ(Bhavani Revanna) ವಾಗ್ದಾಳಿ ನಡೆಸಿದ್ದಾರೆ.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭವಾನಿ ರೇವಣ್ಣ, ನೀವೆಲ್ಲಾ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಕೊಡ್ತಿನಿ ಅಂಥ ಹೇಳಿದ್ದೀರಾ. ಒಬ್ಬೊಬ್ಬರು ನೂರು ಓಟು ಹಾಕಿಸುವ ಶಕ್ತಿ ಇದೆ ಅನ್ಕೊತ್ತೀನಿ. ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕೆ ನಾವೆಲ್ಲರೂ ಚಿರಋಣಿ ಆಗಿರ್ತಿವಿ. ಜೆಡಿಎಸ್ ಪಕ್ಷದವರೆಲ್ಲಾ ನಿಮಗೆ ಚಿರಋಣಿ ಆಗಿರ್ತಿವಿ. ಅದರ ಜೊತೆ ನಮ್ಮ ಕುಟುಂಬ, ಪ್ರಕಾಶಣ್ಣನ ಕುಟುಂಬ ನಿಮ್ಮ ಜೊತೆಗೆ ಇರುತ್ತೆ. ರಾಮ ಸೇತುವೆ ಕಟ್ಟುವಾಗ ಅಳಿಲು ಕೂಡ ಸಹಾಯ ಮಾಡಿತ್ತು.
ಅದರಿಂದ ಅಳಿಲು ಸೇವೆ ಅಂತ ಹೆಸರು ಬಂತು ಅಂತ ಮಾತನಾಡುತ್ತಾರೆ. ಸ್ವರೂಪ್‌ಗೆ ಸಹಾಯಮಾಡಿ ಸಹೋದರ, ಸಹೋದರಿಯರಾಗಿ ನಿಂತಿದ್ದೀರಾ. ಮುಂದಿನ ದಿನಗಳಲ್ಲಿ ನೀವು ನಮ್ಮ ಜೊತೆ ಇರ್ತಿರಾ, ನಿಮ್ಮ ಜೊತೆ ನಾವು ಇರ್ತಿವಿ. ಯಾವುದೇ ಧಮ್ಕಿಗೆ ನೀವ್ಯಾರು ಹೆದರಬಾರದು. ನಿಮ್ಮ ಎಲ್ಲಾ ಟೈಂನಲ್ಲೂ ಜೊತೆಗೆ ಇರ್ತಿವಿ. ನಾವೆಂದೂ ಗೂಂಡಾಗಿರಿ ರಾಜಕಾರಣ ಮಾಡ್ದವ್ರಲ್ಲಾ. ವಿಶ್ವಾಸ ಬೆಳೆಸಿ, ವಿಶ್ವಾಸದಿಂದ ನಿಮ್ಮ ಮನಸ್ಸು ಗೆದ್ದು ನಿಮ್ಮನ್ನು ಮತ ಕೇಳ್ತಿವಿ ಹೊರತು ಬಿಹಾರ್ ಅಂತಹ ರಾಜಕಾರಣ ನಾವು ಮಾಡುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ಹರಿಹಾಯ್ದರು.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:48 am, Tue, 2 May 23




