ಅಖಾಡಕ್ಕಿಳಿದ ವಿ. ಸೋಮಣ್ಣ: ಇಂದಿನಿಂದ 5 ದಿನ ವರುಣಾದಲ್ಲಿ ಅಬ್ಬರದ ಪ್ರಚಾರ
ವಿ. ಸೋಮಣ್ಣ ಅವರು ಇಂದಿನಿಂದ 5 ದಿನ ವರುಣಾ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ. ಕ್ಷೇತ್ರದ ಭೂಗತಗಳ್ಳಿ, ವಾಜಮಂಗಲ, ಹಲಗಯ್ಯನಹುಂಡಿ, ವರುಣಾ, ದಂಡಿಕೆರೆ, ಪಿಲ್ಲಹಳ್ಳಿ, ಚಿಕ್ಕಳ್ಳಿ, ಚೋರನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ವರುಣಾದತ್ತ ರಾಜ್ಯದ ಚಿತ್ತ ನೆಟ್ಟಿದೆ. ವರುಣಾದಲ್ಲಿ (Varuna) ಕಾಂಗ್ರೆಸ್ನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುತ್ತಿದ್ದು, ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ (BJP) ವಿ ಸೋಮಣ್ಣ (V Somanna) ಕಣಕ್ಕೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರದಲ್ಲಿ ತೀರ್ವ ಪೈಪೋಟಿ ಎದುರಾಗಿದ್ದು, ಸೋಮಣ್ಣ ಪರ ಈಗಾಗಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಪ್ರಚಾರಕ್ಕೆ ಇಳಿದಿದ್ದಾರೆ. ಇದಲ್ಲದೇ ಕಣದ ಹೊರಕ್ಕೆ ಕುಳಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Sandtosh) ಅವರು ರಣತಂತ್ರ ಹೆಣೆಯುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದಲ್ಲೇ ಕಟ್ಟಿ ಹಾಕಲು ಮತ್ತು ಈ ಬಾರಿ ಸೋಲಿಸಲು ಬಿಜೆಪಿ ನಾಯಕರು ಸಾಕಷ್ಟು ಮಸ್ಟರ್ ಪ್ಲಾನ್ಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆ ನಿನ್ನೆ (ಏ.22) ಸಿದ್ದರಾಮಯ್ಯ ಅವರು ತವರು ಕ್ಷೇತ್ರಕ್ಕೆ ಭೇಟಿ ನೀಡಿ ಬೆಳಿಗ್ಗೆಯಿಂದ ಸಾಯಂಕಾಲದವರೆಗು ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡಿದರು. ಅದರಂತೆ ಈಗ ವಿ. ಸೋಮಣ್ಣ ಅವರು ಕೂಡ ಇಂದಿನಿಂದ 5 ದಿನ ವರುಣಾ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ.
ಕ್ಷೇತ್ರದ ಭೂಗತಗಳ್ಳಿ, ವಾಜಮಂಗಲ, ಹಲಗಯ್ಯನಹುಂಡಿ, ವರುಣಾ, ದಂಡಿಕೆರೆ, ಪಿಲ್ಲಹಳ್ಳಿ, ಚಿಕ್ಕಳ್ಳಿ, ಚೋರನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ವಿ ಸೋಮಣ್ಣ ಅವರಿಗೆ ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ನಾಯಕರು ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ: Siddaramaiah: ನನ್ನನ್ನು ಸೋಲಿಸಲೆಂದೇ ವರುಣಾಕ್ಕೆ ಬಂದ ಬಿಎಲ್ ಸಂತೋಷ್; ಸಿದ್ದರಾಮಯ್ಯ
ಸೋಮಣ್ಣ ಗೆಲ್ಲಲು ಇರುವ ಕಾರಣಗಳು
1. ವಿ. ಸೋಮಣ್ಣ ಅವರು ರಾಜ್ಯ ಬಿಜೆಪಿಯ ಹಿರಿಯ ಹಾಗೂ ಪ್ರಬಲ ಲಿಂಗಾಯತ ಸಮುದಾಯದ ನಾಯಕ. ವರುಣಾದಲ್ಲಿ ಲಿಂಗಾಯತ ಮತಗಳು ಅಧಿಕವಿದ್ದು, ಲಿಂಗಾಯತ ಸಮುದಾಯದ ನಾಯಕರಾಗಿರುವ ವಿ ಸೋಮಣ್ಣ ಅವರಿಗೆ ಈ ಸಮುದಾಯ ಕೈಹಿಡಿದರೆ ಗೆಲ್ಲಬಹುದು.
2. ಹಳೆ ಮೈಸೂರಿನಲ್ಲಿ ಜೆಡಿಎಸ್ ತನ್ನದೇ ಮತದಾರರನ್ನು ಹೊಂದಿದೆ. ಹೀಗಾಗಿ ಒಂದು ವೇಳೆ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡರೆ ವರುಣಾದಲ್ಲಿ ಸೋಮಣ್ಣ ಗೆಲ್ಲಬಹುದು. ಆದರೆ ಇದು ಕಷ್ಟಸಾಧ್ಯ.
3. ಇನ್ನು ಬೂತ್ ಮಟ್ಟದಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದ್ದು, ಮತದಾರರನ್ನು ಸೆಳೆಯಲು ಬಹುದು. ಈಗಾಗಲೇ ರಾಜಕೀಯ ವಲಯದಲ್ಲಿ ಲಿಂಗಾಯತ ಸಿಎಂ ಚರ್ಚೆ ಜೋರಾಗಿದ್ದು, ಇದು ಸೋಮಣ್ಣ ಅವರಿಗೆ ಪಾಸಿಟಿವ್ ಆಗಬಹುದು.
4. ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವರುಣಾ ಮಾತ್ರವಲ್ಲದೆ ಜಿಲ್ಲಾದ್ಯಂತ ಪರಿಚಿತರಾಗಿದ್ದರು. ಮೈಸೂರು ಜಿಲ್ಲೆಯಲ್ಲಿ ಅವರು ಈಗಾಗಲೇ ಮಾಡಿ ಹೋಗಿರುವ ಅಭಿವೃದ್ದಿ ಕೆಲಸಗಳು ಅವರಿಗೆ ಪ್ಲಸ್ ಆಗಬಹುದು.
5. ಇನ್ನು ಬಿವೈ ವಿಜಯೇಂದ್ರ ಸೋಮಣ್ಣ ಪರ ಪ್ರಚಾರ ಮಾಡುತ್ತಿರುವುದರಿಂದ ಮೈಸೂರು ಭಾಗದಲ್ಲಿ ವಿಜಯೇಂದ್ರ ಅವರ ಪ್ರಭಾವ ಇದೆ. ಇದು ಕೂಡ ಸೋಮಣ್ಣ ಗೆಲುವಿಗೆ ನೆರವಾಗಬಹುದು. ಮುಖ್ಯವಾಗಿ ಯಡಿಯೂರಪ್ಪ ಅವರ ಶಿಷ್ಯ ಕಾಪು ಸಿದ್ದಲಿಂಗಸ್ವಾಮಿ ಕೂಡ ಸೋಮಣ್ಣ ಬೆಂಬಲಕ್ಕೆ ನಿಂತಿದ್ದು ಸೋಮಣ್ಣ ಗೆಲವಿಗೆ ನೆರವಾಗಬಹುದು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ