Ramesh Jarkiholi: ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನೂ ಸ್ಪರ್ಧಿಸಲ್ಲ; ರಮೇಶ್ ಜಾರಕಿಹೊಳಿ ಎಚ್ಚರಿಕೆ

ಮುಂಬರುವ ವಿಧಾನಸಭೆ ಚುನಾವಣೆಗೆ ಅಥಣಿ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡದಿದ್ದರೆ ನಾನೂ ಕಣಕ್ಕಿಳಿಯುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

Ramesh Jarkiholi: ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನೂ ಸ್ಪರ್ಧಿಸಲ್ಲ; ರಮೇಶ್ ಜಾರಕಿಹೊಳಿ ಎಚ್ಚರಿಕೆ
ರಮೇಶ್ ಜಾರಕಿಹೊಳಿ
Follow us
Ganapathi Sharma
|

Updated on: Mar 11, 2023 | 2:42 PM

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಅಥಣಿ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಟಿಕೆಟ್ ನೀಡದಿದ್ದರೆ ನಾನೂ ಕಣಕ್ಕಿಳಿಯುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ (Ramesh Jarkiholi) ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್​​ ಮೈತ್ರಿ ಸರ್ಕಾರ ಇದ್ದಾಗ ರಾಜೀನಾಮೆ ನೀಡಿ ಬಿಜೆಪಿ ಸೇರಿದ 17 ಶಾಸಕರಲ್ಲಿ ಕುಮಟಳ್ಳಿ ಸಹ ಒಬ್ಬರಾಗಿದ್ದಾರೆ. ವಿಜಯಪುರದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಶುಕ್ರವಾರ ಮಾತನಾಡಿದ್ದ ಅವರು, ಕುಮಟಳ್ಳಿಗೆ ಟಿಕೆಟ್ ನೀಡಲೇಬೇಕು ಎಂದು ಹೇಳಿದ್ದಾರೆ. ಕುಮಟಳ್ಳಿ ನನ್ನ ಸ್ನೇಹಿತ. ಅವರಿಗೆ ಪಕ್ಷ ಟಿಕೆಟ್ ನೀಡಬೇಕು. ಹಾಗಿದ್ದರೆ ಮಾತ್ರ ನಾನು ಗೋಕಾಕ್​​ನಿಂದ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದ್ದಾರೆ. ನಾಲ್ಕರಿಂದ ಆರು ಮಂದಿ ಶಾಸಕರಿಗೆ ಈ ಬಾರಿ ಟಿಕೆಟ್​ ನಿರಾಕರಿಸುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂಪ್ಪ ಇತ್ತೀಚೆಗೆ ಹೇಳಿದ್ದರು. ಆ ಕುರಿತು ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಮರಳಿ ಸಂಪುಟಕ್ಕೆ ಮರಳಿ ಸೇರಿಸಿಕೊಳ್ಳದಿರುವುದಕ್ಕೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದಾರೆ.

ಸಚಿವನಾಗಿದ್ದಾಗಲೇ ಕಾಂಗ್ರೆಸ್ ತ್ಯಜಿಸಿದ್ದೆ. ಸಚಿವ ಸ್ಥಾನಕ್ಕಾಗಿ ಬಿಜೆಪಿ ಸೇರಿಲ್ಲ. ಸಿದ್ಧಾಂತದ ಕಾರಣಕ್ಕೆ ಆ ಪಕ್ಷ ಸೇರ್ಪಡೆಯಾಗಿದ್ದೆ. ಹೀಗಾಗಿ ಮತ್ತೆ ಸಚಿವ ಸ್ಥಾನಕ್ಕೆ ಸೇರಿಸದ್ದಕ್ಕೆ ಬೇಸರಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಚಿವರು ಪ್ರಕರಣದಲ್ಲಿ ಸಿಲುಕಿದ್ದರಿಂದ ಬಿಜೆಪಿಗೂ ತೀವ್ರ ಮುಜುಗರ ಉಂಟಾಗಿತ್ತು.

ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಕನಸಿನ‌ ಕೂಸು: ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ

2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಕುಮಟಳ್ಳಿ ವಿರುದ್ಧ ಪರಾಭವಗೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಕೂಡ ಪಕ್ಷದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. 2018ರಲ್ಲಿ ಕುಮಟಳ್ಳಿ ಕಾಂಗ್ರೆಸ್​​ನಿಂದ ಗೆದ್ದಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿಯೂ ಜಯ ಗಳಿಸಿದ್ದರು. ಸವದಿ ಪ್ರಸ್ತುತ ಬಿಜೆಪಿಯಿಂದ ಪರಿಷತ್ ಸದಸ್ಯರಾಗಿದ್ದಾರೆ.

ಸಚಿವ ಕೆಸಿ ನಾರಾಯಣ ಗೌಡ ಕಾಂಗ್ರೆಸ್​ ಸೇರಲಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. ಅವರು ಒಳ್ಳೆಯ ಸ್ನೇಹಿತರಾಗಿರುವುದರಿಂದ ಅವರಿಗೆ ಕರೆ ಮಾಡಿ ಮುಳುಗುತ್ತಿರುವ ಹಡಗಾಗಿರುವ ಕಾಂಗ್ರೆಸ್ ಸೇರಬೇಡಿ ಎಂದು ಕೇಳಿಕೊಳ್ಳುತ್ತೇನೆ. ಅವರು ಆ ತಪ್ಪನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಬಿಜೆಪಿ 13ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಲು ಹೆಚ್ಚು ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ