ಕಾಂಗ್ರೆಸ್ನಲ್ಲಿ ಗರಿಗೆದರಿದ ‘ತಂತ್ರಗಾರಿಕೆ’:ಫಲಿತಾಂಶಕ್ಕೂ ಮುನ್ನವೇ ಪಕ್ಷೇತರರಿಗೆ ಜಗದೀಶ್ ಶೆಟ್ಟರ್ ಮೂಲಕ ಗಾಳ
ಬಹುತೇಕ ಸಮೀಕ್ಷೆಗಳು ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರದ ಗದ್ದುಗೆ ಎಂಬ ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳು ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ ಎಂದಿವೆ. ಕೆಲ ಕೆಲ ಸಮೀಕ್ಷೆಗಳು ಈ ಬಾರಿ ಅತಂತ್ರ ಫಲಿತಾಂಶ ಎಂದು ಸರ್ವೇ ರಿಪೋರ್ಟ್ ನೀಡಿವೆ. ಮತದಾನೋತ್ತರ ಸಮೀಕ್ಷೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಚಟುವಟಿಕೆ ಗರಿಗೆದರುವಂತೆ ಮಾಡಿದೆ. ಹೀಗಾಗಿ ಪ್ಲ್ಯಾನ್ಗಳ ಮೇಲೆ ಪ್ಲ್ಯಾನ್ ಮಾಡುತ್ತಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ (Karnataka Assembly Election Result 2023) ಕೌಂಟ್ಡೌನ್ ಶುರುವಾಗಿದೆ. ಫಲಿತಾಂಶ ಏನಿರಲಿದೆ ಎನ್ನುವ ಕುತೂಹಲ ಮೂಡಿಸಿದೆ. ಅದರಲ್ಲೂ ಮತದಾನೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷಾ ಸಂಸ್ಥೆಗಳು ಕಾಂಗ್ರೆಸ್‌ಗೆ (Congress) ಬಹುಪರಾಕ್ ಹೇಳಿರುವುದು ಕೈ ಪಾಳಯದಲ್ಲಿ ಹುರುಪು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಭೆಗಳ ಮೇಲೆ ಸಭೆಗಳು ನಡೆಯುತ್ತಿವೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೂ ಅದಕ್ಕೆ ಕೈ ಪಡೆ ಭರ್ಜರಿಯಾಗೇ ಪ್ಲ್ಯಾನ್ ರೂಪಿಸಿದೆ. ಹೌದು..ಬಹುಮತಕ್ಕೆ ಕೆಲ ಸೀಟುಗಳು ಬೇಕಾಗಹುದು ಎಂದು ಫಲಿತಾಂಶ ಪ್ರಕಟಕ್ಕೂ ಮೊದಲೇ ಅರಿತುಕೊಂಡಿರುವ ಕಾಂಗ್ರೆಸ್, ಗೆಲ್ಲುವ ಅಭ್ಯರ್ಥಿಗಳಿಗೆ ಗಾಳ ಹಾಕಿದೆ. ಈಗ ಕಾಂಗ್ರೆಸ್‌ಗೆ ಸರಿಯಾದ ಬಹುಮತ ಸಿಗದೆ ಹೋದರೆ ಪಕ್ಷೇತರರನ್ನ ಕರೆತಂದು ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಪ್ಲ್ಯಾನ್.
ಇದನ್ನೂ ಓದಿ: ಚುನಾವಣಾ ಫಲಿತಾಂಶ ಅತಂತ್ರ: ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿ-ದೇವೇಗೌಡ ತಂತ್ರ
ನಾಳೆ ಮತದಾರನ ತೀರ್ಪು ಹೊರಬೀಳಲಿದೆ. ಏನ್ ಬೇಕಾದ್ರೂ ಆಗುವ ಸಾಧ್ಯತೆ ಇದೆ. ಹೀಗಾಗಿ ಕೈ ಪಡೆ ಫುಲ್ ಅಲರ್ಟ್ ಆಗಿದ್ದು, ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ ಅವರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸಿದ್ದಾರೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ತಮ್ಮ ಜೊತೆ ಕೈ ಜೋಡಿಸಬೇಕೆಂದು ಬೆಂಬಲ ಕೇಳಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಮತ್ತು ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ನಡುವೆ ನೇರಾನೇರ ಫೈಟ್ ಇದ್ದು, ಚಿಕ್ಕನಗೌಡ ಗೆಲ್ಲುವ ಸಾಧ್ಯತೆಗಳಿವೆ. ಹೀಗಾಗಿ ಫಲಿತಾಂಶ ಮುನ್ನವೇ ಪಕ್ಷೇತರ ಚಿಕ್ಕನಗೌಡ್ರ ಗೆದ್ದರೇ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಮುಂದಾಗಿದೆ. ಅದು ಇತ್ತೀಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದಿಶ್ ಶೆಟ್ಟರ್ ಅವರ ಮೂಲಕ ಕಾಂಗ್ರೆಸ್ ಚಿಕ್ಕನಗೌಡರಿಗೆ ಗಾಳ ಹಾಕಿದೆ. ಎಸ್.ಐ.ಚಿಕ್ಕನಗೌಡರ ಜಗದೀಶ್ ಶೆಟ್ಟರ್ ಬೆಂಬಲಿಗ ಕೂಡ ಹೌದು. ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕುಕ್ಕರ್ ಗುರುತಿನೊಂದಿದೆ ಚಿಕ್ಕನಗೌಡರು ಸ್ಪರ್ಧಿಸಿದ್ದರು.
ಇನ್ನು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ದಿವಂಗತ ಎಂಪಿಪ್ರಕಾಶ ಪುತ್ರ ಎಂ ಪಿಲತಾ ಮಲ್ಲಿಕಾರ್ಜುನ ಗೆಲ್ಲುವ ಸಾಧ್ಯತೆಗಳಿವೆ. ಇದರಿಂದ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ , ಎಂ ಪಿಲತಾ ಅವರನ್ನು ಸಂಪರ್ಕಿಸಿ ಬೆಂಬಲ ಕೇಳಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ ಪಕ್ಷೇತರ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ.ಪಿ ಲತಾ ಮಲ್ಲಿಕಾರ್ಜುನಗೆ ಸಿಎಂ ಬೊಮ್ಮಾಯಿ ದೂರವಾಣಿ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಇದಾದ ಬಳಿಕ ಕೆಲ ಹೊತ್ತಿನಲ್ಲೇ ಕಾಂಗ್ರೆಸ್ ಮುಖಂಡರು ಸಹ ಲತಾ ಮಲ್ಲಿಕಾರ್ಜುನ ಅವರಿಗೆ ಪೋನ್ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ಮೂಲಕ ಗಾಳ ಹಾಕಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ