ಕಲಬುರ್ಗಿ: ಇಂದು ಕಾಂಗ್ರೆಸ್ ಕಲ್ಯಾಣ ಕ್ರಾಂತಿ ಸಮಾವೇಶ, ಮತದಾರರ ಸೆಳೆಯಲು ಕಾಂಗ್ರೆಸ್ ತಂತ್ರ
ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಕಲ್ಯಾಣ ಕ್ರಾಂತಿ ಸಮಾವೇಶವನ್ನು ಆಯೋಜಿಸಿದೆ.
ಕಲಬುರ್ಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ (All India Congress Committee – AICC) ಸ್ಥಾನವು ಕನ್ನಡಿಗ, ಕಲಬುರ್ಗಿ ಕುವರ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಒಲಿದ ನಂತರ ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಎಐಸಿಸಿ ಅಧ್ಯಕ್ಷರಾದ ನಂತರ ಖರ್ಗೆ ಮೊದಲ ಬಾರಿಗೆ ಶನಿವಾರ ತವರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಖರ್ಗೆ ಅವರ ಅದ್ದೂರಿ ಸ್ವಾಗತಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಕಲ್ಯಾಣ ಕ್ರಾಂತಿ ಸಮಾವೇಶವನ್ನು ಆಯೋಜಿಸಿದೆ.
ನಗರದಲ್ಲಿ ಎಲ್ಲೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟೌಟ್ ಹಾಗೂ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿವೆ. ಸಮಾವೇಶಕ್ಕೆ ಬೃಹತ್ ವೇದಿಕೆ ಹಾಗೂ ಸ್ವಾಗತ ಕಮಾನು ಸಹ ಸಿದ್ಧವಾಗಿದೆ. ಹಲವು ವರ್ಷಗಳ ನಂತರ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತವರು ಜಿಲ್ಲೆ ಕಲಬುರಗಿ ಜನರ ಸಂತಸ ಹೆಚ್ಚಾಗಿತ್ತು. ಅವರಿಗೆ ಶುಭ ಹಾರೈಸಲು ಅನೇಕರು ಕಾಯುತ್ತಿದ್ದರು. ಆದರೆ ಖರ್ಗೆ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರಿಂದ ಕಲಬುರ್ಗಿಗೆ ಬರಲು ಆಗಿರಲಿಲ್ಲ.
ಖರ್ಗೆ ಅವರಿಗೆ ಅದ್ದೂರಿ ಸ್ವಾಗತ ಕೋರಲು ಕೆಪಿಸಿಸಿ ವತಿಯಿಂದ ಸಿದ್ದತೆ ನಡೆದಿದೆ. ವಿಶೇಷ ವಿಮಾನದ ಮೂಲಕ ಮುುಂಜಾನೆ 10.30ಕ್ಕೆ ಕಲಬುರಗಿಗೆ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರಗೆ ಬೃಹತ್ ಮೆರವಣಿಗೆ ಮೂಲಕ ಖರ್ಗೆ ಅವರನ್ನು ಕರೆದುಕೊಂಡು ಬರಲಾಗುತ್ತಿದೆ. ಮಧ್ಯಾಹ್ನ ಹನ್ನೆರಡು ಗಂಟೆಗೆ ಎನ್ವಿ ಮೈದಾನದಲ್ಲಿ ಕಲ್ಯಾಣ ಕ್ರಾಂತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಖರ್ಗೆ ಅವರಿಗೆ ಸಮಾವೇಶದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ.
ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ಸಾಧ್ಯತೆಯಿದ್ದು, ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಬಾಗಿಯಾಗಲಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಕ್ಕು, ಹತ್ತು ವರ್ಷಗಳು ಕಳೆದಿವೆ. ಈ ಬಾಗಕ್ಕೆ ವಿಶೇಷ ಸ್ಥಾನಮಾನ ಸಿಗಲು ಪ್ರಮುಖ ಕಾರಣಕರ್ತರು ಅವರು. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು, ಕಾಂಗ್ರೆಸ್ ಮತ್ತು ಮಲ್ಲಿಕಾರ್ಜುನ ಖರ್ಗೆ. ಆದರೆ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಬಾಗಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುವುದನ್ನು ತೋರಿಸುವ ಉದ್ದೇಶದಿಂದ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೊಂಡಿದೆ.
ಆ ಮೂಲಕ ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ, ತವರು ಭಾಗದಲ್ಲಿ ಖರ್ಗೆ ಅವರ ಇಮೆಜ್ ಹೆಚ್ಚಾಗುತ್ತದೆ. ಹೀಗಾಗಿ ಅನೇಕ ತಂತ್ರಗಾರಿಕೆಯನ್ನು ಕೈ ನಾಯಕರು ಮಾಡಿದ್ದಾರೆ.
ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಮರಳಿ ಕಾಂಗ್ರೆಸ್ ಸೇರಲು ವಿಶ್ವನಾಥ್ ತೆರೆಮರೆಯ ಕಸರತ್ತು: ಖರ್ಗೆ, ಸಿದ್ದು ಬಳಿಕ ಡಿಕೆಶಿ ಭೇಟಿಯಾದ ಹಳ್ಳಿಹಕ್ಕಿ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 am, Sat, 10 December 22