ವಿಧಾನಸಭೆಯಲ್ಲಿ ಯಾವ ಪಕ್ಷದ ಶಾಸಕರ ಹಾಜರಾತಿ ಅತಿಹೆಚ್ಚು? ಇಲ್ಲಿದೆ ಆಸಕ್ತಿದಾಯಕ ಮಾಹಿತಿ
2018ರಿಂದ ಆರಂಭಗೊಂಡಲ್ಲಿಂದ ಮೊದಲ್ಗೊಂಡು ಪ್ರಸಕ್ತ ವಿಧಾನಸಭೆ ಕಲಾಪಗಳಲ್ಲಿ ಅತಿಹೆಚ್ಚು ಹಾಜರಾಗಿರುವ ಶಾಸಕರು ಯಾವ ಪಕ್ಷದವರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿಶ್ಲೇಷಣೆ ಪ್ರಕಾರ, ಜೆಡಿಎಸ್ ಶಾಸಕರು ಅತಿಹೆಚ್ಚು ಹಾಜರಾತಿ ಹೊಂದಿದ್ದಾರೆ. ಕಾಂಗ್ರೆಸ್ ಶಾಸಕರು ಅತಿಕಡಿಮೆ ಹಾಜರಾತಿ ಹೊಂದಿದ್ದಾರೆ.
ಬೆಂಗಳೂರು: ಪ್ರಸಕ್ತ ವಿಧಾನಸಭೆಯ ಅವಧಿ (Karnataka Assembly) ಮುಕ್ತಾಯವಾಗಿದ್ದು ಹೊಸ ಸರ್ಕಾರದ ಆಯ್ಕೆಗಾಗಿ ಚುನಾವಣೆ ನಿಗದಿಯಾಗಿದೆ. ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶವೂ ಪ್ರಕಟಗೊಳ್ಳಲಿದೆ. ಈ ಮಧ್ಯೆ, 2018ರಿಂದ ಆರಂಭಗೊಂಡಲ್ಲಿಂದ ಮೊದಲ್ಗೊಂಡು ಪ್ರಸಕ್ತ ವಿಧಾನಸಭೆ ಕಲಾಪಗಳಲ್ಲಿ ಅತಿಹೆಚ್ಚು ಹಾಜರಾಗಿರುವ ಶಾಸಕರು ಯಾವ ಪಕ್ಷದವರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವಿಶ್ಲೇಷಣೆ ಪ್ರಕಾರ, ಜೆಡಿಎಸ್ ಶಾಸಕರು ಅತಿಹೆಚ್ಚು ಹಾಜರಾತಿ ಹೊಂದಿದ್ದಾರೆ. ಕಾಂಗ್ರೆಸ್ ಶಾಸಕರು ಅತಿಕಡಿಮೆ ಹಾಜರಾತಿ ಹೊಂದಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಎಡಿಆರ್ ವರದಿ ಬಿಡುಗಡೆ ಮಾಡಿದ್ದು, ಉಪಚುನಾವಣೆಗಳಲ್ಲಿ ಗೆದ್ದು ಶಾಸಕರಾದವರನ್ನೂ ಒಳಗೊಂಡಂತೆ 224 ಕ್ಷೇತ್ರಗಳ ಶಾಸಕರ ಹಾಜರಾತಿ ವರದಿಯನ್ನೂ ವಿಶ್ಲೇಷಿಸಿದೆ. ಕರ್ನಾಟಕ ವಿಧಾನಸಭೆಯ ವೆಬ್‌ಸೈಟ್‌ನಲ್ಲಿರುವ ದತ್ತಾಂಶಗಳು ಮತ್ತು ಕರ್ನಾಟಕ ವಿಧಾನಸಭೆ ಸೆಕ್ರೆಟರಿಯೇಟ್‌ನಿಂದ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿ ಪಡೆದ ಮಾಹಿತಿಗಳನ್ನು ಬಳಸಿಕೊಂಡು ವರದಿ ಸಿದ್ಧಪಡಿಸಲಾಗಿದೆ.
ಕರ್ನಾಟಕ ವಿಧಾನಸಭೆಯು ವರ್ಷಕ್ಕೆ ಸರಾಸರಿ 25 ದಿನಗಳ ಕಾಲ ಅಧಿವೇಶನ ನಡೆಸುತ್ತಿದೆ ಎಂದು ಎಡಿಆರ್ ಹೇಳಿದೆ. 2022 ಫೆಬ್ರವರಿ 14ರಿಂದ 2022 ರ ಮಾರ್ಚ್ 30 ರವರೆಗೆ 26 ಕಲಾಪಗಳನ್ನೊಳಗೊಂಡ 12ನೇ ಅಧಿವೇಶನ ಸುದೀರ್ಘ ಅವಧಿಯಾದ್ದಾಗಿದೆ ಎಂದು ಎಡಿಆರ್ ತಿಳಿಸಿದೆ. ಪ್ರಸಕ್ತ ವಿಧಾನಸಭೆಯ ಅವಧಿಯಲ್ಲಿ ಒಟ್ಟು 150 ದಿನಗಳ ಅಧಿವೇಶನ ನಡೆಸಲಾಗಿತ್ತು.
ಬಿಜೆಪಿ ಶಾಸಕರದ್ದೂ ಮೇಲುಗೈ
ಬಿಜೆಪಿ ಶಾಸಕರು ಕೂಡ ಹಾಜರಾತಿಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಜೆಡಿಎಸ್ನ ಕೆಎಲ್ ಲಿಂಗೇಶ್ ಹಾಗೂ ಬಿಜೆಪಿಯ ಚನ್ನಪ್ಪ ಮಲ್ಲಪ್ಪ ನಿಂಬನ್ನವರ್ ಶೇ 100ರಷ್ಟು ಹಾಜರಾತಿ ಹೊಂದಿದ್ದಾರೆ. ಬಿಜೆಪಿಯ ಇನ್ನಿಬ್ಬರು ಶಾಸಕರಾದ ಜಿಬಿ ಜ್ಯೋತಿಗಣೇಶ್ ಹಾಗೂ ಸಂಜೀವ ಮಠಂದೂರು ಶೇ 99ರಷ್ಟು ಹಾಜರಾತಿ ಹೊಂದಿದ್ದಾರೆ. ಜೆಡಿಎಸ್ನ 35 ಶಾಸಕರ ಸರಾಸರಿ ಹಾಜರಾತಿ 107 ದಿನಗಳಾಗಿದ್ದರೆ ಬಿಜೆಪಿಯ 122 ಶಾಸಕರ ಸರಾಸರಿ ಹಾಜರಾತಿ 99 ದಿನಗಳಾಗಿವೆ. ಕಾಂಗ್ರೆಸ್ನ 76 ಶಾಸಕರ ಸರಾಸರಿ ಹಾಜರಾತಿ 95 ದಿನಗಳಾಗಿವೆ. ಪಕ್ಷೇತರ ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ಹೆಚ್ ನಾಗೇಶ ಅವರ ಸರಾಸರಿ ಹಾಜರಾತಿ 93 ದಿನ ಆಗಿದೆ.
ಇದನ್ನೂ ಓದಿ: DK Shivakumar: ತಡವಾಗಿ ಬಂದದ್ದಕ್ಕೆ ಪತ್ರಿಕಾಗೋಷ್ಠಿ ಬಹಿಷ್ಕಾರ; ಪತ್ರಕರ್ತರ ವಿರುದ್ಧ ಡಿಕೆ ಶಿವಕುಮಾರ್ ಗರಂ
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಏಕೈಕ ಶಾಸಕ ಆರ್ ಶಂಕರ್ ಅವರು ಕೇವಲ ನಾಲ್ಕು ದಿನಗಳ ಕಾಲ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದರು.
ಹೆಚ್ಚು ಪ್ರಶ್ನೆ ಕೇಳಿದ್ದು ಕಾಂಗ್ರೆಸ್ನ ಎನ್‌ಎ ಹ್ಯಾರಿಸ್
ಪ್ರಸ್ತುತ ಕರ್ನಾಟಕ ವಿಧಾನಸಭೆಯ ಅಧಿವೇಶನಗಳಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಎನ್‌ಎ ಹ್ಯಾರಿಸ್ ಅತಿ ಹೆಚ್ಚು ಪ್ರಶ್ನೆಗಳನ್ನು (591) ಕೇಳಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ. 218 ಶಾಸಕರು ಒಟ್ಟು 27,583 ಪ್ರಶ್ನೆಗಳನ್ನು ಕೇಳಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳು ಸಾಮಾನ್ಯ ಆಡಳಿತ, ಹಣಕಾಸು ಅಥವಾ ಕಂದಾಯ, ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಜಲ ಶಕ್ತಿ ವಿಭಾಗಕ್ಕೆ ಸಂಬಂಧಿಸಿವೆ ಎಂದು ಎಡಿಆರ್ ತಿಳಿಸಿದೆ.
2018ರಿಂದೀಚೆಗೆ 202 ಮಸೂದೆಗಳಿಗೆ ಅನುಮೋದನೆ
ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ 214 ಮಸೂದೆಗಳನ್ನು ಮಂಡಿಸಲಾಗಿದ್ದು, ಅದರಲ್ಲಿ 202 (ಶೇ. 94) ಅಂಗೀಕಾರಗೊಂಡಿವೆ ಎಂದು ಎಡಿಆರ್ ತಿಳಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ