ಶಾಸಕ ಅನಿಲ್ ಬೆನಕೆ ಬೆಂಬಲಿಗರಿಂದ ಮುತ್ತಿಗೆ: ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆ ರದ್ದು
ಟಿಕೆಟ್ ವಂಚಿತ ಬಿಜೆಪಿ ಶಾಸಕರು, ಆಕಾಂಕ್ಷಿಗಳೊಂದಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನಡೆಸಬೇಕಿದ್ದ ಸಭೆ ರದ್ದು ಮಾಡಲಾಗಿದೆ. ಸಭೆ ನಡೆಯಬೇಕಿದ್ದ ಖಾಸಗಿ ಹೋಟೆಲ್‌ಗೆ ಶಾಸಕ ಅನಿಲ್ ಬೆನಕೆ ಬೆಂಬಲಿಗರಿಂದ ಮುತ್ತಿಗೆ ಹಾಕಲಾಗಿದೆ.
ಬೆಳಗಾವಿ: ಟಿಕೆಟ್ ವಂಚಿತ ಬಿಜೆಪಿ ಶಾಸಕರು, ಆಕಾಂಕ್ಷಿಗಳೊಂದಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ (Dharmendra Pradhan) ನಡೆಸಬೇಕಿದ್ದ ಸಭೆ ರದ್ದು ಮಾಡಲಾಗಿದೆ. ಸಭೆ ನಡೆಯಬೇಕಿದ್ದ ಖಾಸಗಿ ಹೋಟೆಲ್‌ಗೆ ಶಾಸಕ ಅನಿಲ್ ಬೆನಕೆ (MLA Anil Benake) ಬೆಂಬಲಿಗರಿಂದ ಮುತ್ತಿಗೆ ಹಾಕಲಾಗಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯಸಭಾ ಈರಣ್ಣಾ ಕಡಾಡಿಗೆ ತರಾಟೆ ತೆಗೆದುಕೊಂಡಿದ್ದು, ಅನಿಲ್ ಬೆನಕೆ ಬೆಂಬಲಿಗರು ಹಾಗೂ ನಿರ್ಮಲ ಕುಮಾರ್ ಸುರಾನಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಬದಲಾವಣೆಗೆ ಬೆನಕೆ ಬೆಂಬಲಿಗರು ಪಟ್ಟು ಹಿಡಿದರು. ಕಾರ್ಯಕರ್ತರ ಮನವೊಲಿಸಲು ಸುರಾನಾ, ಈರಣ್ಣಾ ಕಡಾಡಿ ಹರಸಾಹಸ ಪಟ್ಟಿದ್ದು, ಹೈಕಮಾಂಡ್ ನಾಯಕರು ಸೂಕ್ತ ತೀರ್ಮಾನ ಮಾಡುತ್ತಾರೆಂದು ಹೇಳಿ ತೆರಳಿದ್ದಾರೆ.
ಬಿ-ಫಾರ್ಮ್ ಪಡೆದ ನಾಯಕರು ಸಭೆಗೆ ಬರುವಂತೆ ಸೂಚನೆ
ವಿಶೇಷವೆಂದರೆ, ಈಗಾಗಲೇ ಬಿ-ಫಾರ್ಮ್ ಪಡೆದ ನಾಯಕರು ಅದನ್ನು ತೆಗೆದುಕೊಂಡೇ ಸಭೆಗೆ ಬರುವಂತೆ ಸೂಚಿಸಲಾಗಿದೆ. ರಾಮದುರ್ಗ ಕ್ಷೇತ್ರದ ಹಾಲಿ ಶಾಸಕ ಮಹದೇವಪ್ಪ ಯಾದವಾಡ ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಅನಿಲ್ ಬೆನಕೆ ಟಿಕೆಟ್ ದೊರೆಯದಿರುವುದಕ್ಕೆ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 2-3 ದಿನಗಳ ಕಾಲ ಕಾಯುವುದಾಗಿಯೂ ಪಕ್ಷವು ತಮ್ಮ ಉಮೇದುವಾರಿಕೆಯನ್ನು ಮರುಪರಿಶೀಲಿಸದಿದ್ದರೆ ಸೋಮವಾರ ರಾಮದುರ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಯಾದವಾಡ ಶುಕ್ರವಾರ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿ ಬಂಡಾಯ ಶಮನಕ್ಕೆ ಹೈಕಮಾಂಡ್ ಎಂಟ್ರಿ; ಅತೃಪ್ತರ ಜತೆ ಧರ್ಮೇಂದ್ರ ಪ್ರಧಾನ್ ಸಭೆ
ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ತನಗೆ ಆಫರ್
ಏತನ್ಮಧ್ಯೆ, ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ತನಗೆ ಆಫರ್‌ಗಳಿವೆ ಎಂದು ಬೆನಕೆ ಒಪ್ಪಿಕೊಂಡಿದ್ದಾರೆ ಮತ್ತು ಪ್ರಧಾನ್ ಅವರನ್ನು ಭೇಟಿಯಾದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ಅಥಣಿಯಲ್ಲಿ ಮಹೇಶ ಕುಮಠಳ್ಳಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಇದನ್ನೂ ಓದಿ: ಬಿಜೆಪಿ, ಜೆಡಿಎಸ್ನ 25 ನಾಯಕರು ಕಾಂಗ್ರೆಸ್ಗೆ ಬರುತ್ತಾರೆ: ಡಿಕೆ ಶಿವಕುಮಾರ್
ಈ ಮೂರು ಸ್ಥಾನಗಳ ಹೊರತಾಗಿ ಬೈಲಹೊಂಗಲದಲ್ಲಿಯೂ ಬಂಡಾಯ ಎದ್ದಿದ್ದು, ಯಡಿಯೂರಪ್ಪನವರ ನಿಷ್ಠಾವಂತ ಡಾ. ವಿಶ್ವನಾಥ ಪಾಟೀಲ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:13 pm, Fri, 14 April 23