CM Siddaramaiah: ಐದು ಗ್ಯಾರಂಟಿಗಳಿಗೆ ಇಂದೇ ಅನುಮೋದನೆ; ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಇಂದು(ಮೇ.20)ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ‘ಐದು ಗ್ಯಾರಂಟಿಗಳಿಗೆ ಇಂದೇ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ(Siddaramaiah)ನವರು ಇಂದು(ಮೇ.20)ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ‘ ಕರ್ನಾಟಕದ ಜನರ ಆಶೀರ್ವಾದಿಂದ ನಮ್ಮ ಸರ್ಕಾರ ಬಂದಿದೆ. ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕಾ ಸೇರಿ ಅನೇಕರು ಪ್ರಚಾರ ಮಾಡಿದರು, ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ ಎಲ್ಲರಿಗೂ ಧನ್ಯವಾದಗಳು ಹೇಳುತ್ತೇನೆ. ಜೊತೆಗೆ ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಇಂದೇ ಅನುಮೋದನೆ ನೀಡುತ್ತೇನೆ ಎನ್ನುವ ಮೂಲಕ ರಾಜ್ಯದ ಜನರಿಗೆ ಕೊಟ್ಟ ಭರವಸೆಯನ್ನ ಈಡೇರಿಸಿದ್ದಾರೆ.
ಇನ್ನು ಇದೇ ವೇಳೆ ವಿವಿಧ ರಾಜ್ಯಗಳ ನಾಯಕರು ನಮಗೆ ಶುಭ ಹಾರೈಸಲು ಬಂದಿದ್ದಾರೆ. ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ನಾವು ಆಡಳಿತ ನಡೆಸುತ್ತೇವೆ. ಇಂದೇ 5 ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಕರ್ನಾಟಕದ ಜನರಿಗೆ ನಾವು ನೀಡಿದ ಭರವಸೆ ಈಡೇರಿಸುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬಳಿಕ ಸಿಎಂ, ಡಿಸಿಎಂ ಇಬ್ಬರು ಒಂದೇ ಕಾರಿನಲ್ಲಿ ವಿಧಾನಸೌಧಕ್ಕೆ ತೆರೆಳಿದರು.
ಇನ್ನು ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಉಪ ಮುಖ್ಯಮಮತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜತೆಗೆ ಎಂಟು ಮಂದಿ ಶಾಸಕರು ಸಚಿವರಾಗಿಯೂ ಪದಗ್ರಹಣ ಮಾಡಿದರು. ಇದರೊಂದಿಗೆ, ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಂತಾಗಿದೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ನಾಯಕರು, ರಾಜ್ಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಸೇರಿದಂತೆ ಲಕ್ಷಾಂತರ ಮಂದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: DK Shivakumar: ಉಪ-ಮುಖ್ಯಮಂತ್ರಿಯಾಗಿ ಗಂಗಾಧರ ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್!
ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರೆ, ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದವರು ಯಾರೆಲ್ಲ?
ಡಾ. ಜಿ ಪರಮೇಶ್ವರ, ಕೆಹೆಚ್ ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ ಹಾಗೂ ಬಿಝಡ್ ಜಮೀರ್ ಅಹ್ಮದ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವನಚನಕ್ಕೆ ಸಾಕ್ಷಿಯಾದವರು ಯಾರೆಲ್ಲ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಹಾಗೂ ಇತರರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನೆರವೇರಿತು. ಜತೆಗೆ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಬಿಹಾರ ಸಿಎಂ ನಿತೀಶ್, ಹಿಮಾಚಲಪ್ರದೇಶದ ಸಿಎಂ ಸುಖ್‌ವಿಂದರ್ ಸಿಂಗ್ ಸುಖು, ಪುದುಚೆರಿ ಸಿಎಂ ರಂಗಸ್ವಾಮಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹಾಗೂ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಬಿಟ್ಟು ಉಳಿದವರು ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿರಲಿಲ್ಲ. ಒಂದು ಹಂತದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಸಹ ನಂತರ ಪ್ರಚಾರಕ್ಕೆ ಬಂದಿರಲಿಲ್ಲ. ಇದೀಗ ಅವರೆಲ್ಲ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Sat, 20 May 23