AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರುಣ ಕ್ಷೇತ್ರ ಗೆಲಲ್ಲು ವಾಸ್ತವ್ಯ ಬದಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಕಳೆದ ಮೂರು ದಿನಗಳಿಂದ ಮೈಸೂರಿನಲ್ಲಿದ್ದರೂ ಟಿ‌.ಕೆ.ಬಡಾವಣೆ ಮನೆಗೆ ಹೋಗದೆ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ತಂತ್ರಗಾರಿಕೆ ಮಾಡುತ್ತಿದ್ದಾರೆ. ವರುಣ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ.

ವರುಣ ಕ್ಷೇತ್ರ ಗೆಲಲ್ಲು ವಾಸ್ತವ್ಯ ಬದಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಪ್ರಚಾರ(ಸಂಗ್ರಹ ಚಿತ್ರ)
ಆಯೇಷಾ ಬಾನು
|

Updated on: May 08, 2023 | 9:29 AM

Share

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ(Karnataka Assembly Elections 2023). ಇಂದು ಸಂಜೆಯಿಂದಲೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದರ ನಡುವೆ ವರುಣ ಕ್ಷೇತ್ರದಲ್ಲಿ ಗೆಲ್ಲಲು ಸಿದ್ದರಾಮಯ್ಯ(Siddaramaiah) ವಾಸ್ತವ್ಯ ಬದಲಾಯಿಸಿ ರಣತಂತ್ರ ಹೆಣೆಯುತ್ತಿದ್ದಾರೆ. ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi), ಅಮಿತ್ ಶಾ(Amit Shah) ಪ್ರಚಾರ ಹಿನ್ನೆಲೆ ಬಿಜೆಪಿ ಕೇಂದ್ರ ನಾಯಕರ ಪ್ರಭಾವ ತನ್ನ ಕ್ಷೇತ್ರಕ್ಕೆ ಬೀಳದಂತೆ ನೋಡಿಕೊಳ್ಳಲು ಸಿದ್ದರಾಮಯ್ಯನವರು ಮನೆಯಲ್ಲಿ ಉಳಿಯದೇ ಹೋಟೆಲ್‌ನಲ್ಲಿ ಕುಳಿತು ರಣತಂತ್ರ ಹೆಣೆಯುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಮೈಸೂರಿನಲ್ಲಿದ್ದರೂ ಟಿ‌.ಕೆ.ಬಡಾವಣೆ ಮನೆಗೆ ಹೋಗದೆ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ತಂತ್ರಗಾರಿಕೆ ಮಾಡುತ್ತಿದ್ದಾರೆ. ವರುಣ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಹೋಟೆಲ್​ಗೆ ಕರೆಸಿಕೊಂಡು ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ವರುಣ ಕ್ಷೇತ್ರದ ಪ್ರಮುಖ ಮುಖಂಡರ ಜೊತೆ ಚರ್ಚೆಗಳನ್ನು ಮಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಿದ್ದಾರೆ.

ಇನ್ನು ಇಂದು ಕೊನೆ ಹಂತದ ಪ್ರಚಾರ ಹಿನ್ನೆಲೆ ಹಳೇ ಮೈಸೂರು ಭಾಗದಲ್ಲಿ ಅಬ್ಬರ ಹೆಚ್ಚಲಿದೆ. ತವರು ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತಬೇಟೆ ಮಾಡಲಿದ್ದು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ಸಭೆ ನಡೆಸಲಿದ್ದಾರೆ. ನಿನ್ನೆಯಷ್ಟೇ ನಂಜನಗೂಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ರು. ಇದೀಗ ಮೋದಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಮತಯಾಚಿಸಲಿದ್ದಾರೆ. ಹಳೇ ಮೈಸೂರು ಭಾಗ ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಮುಖ್ಯವಾಗಿದೆ. ಈ ಬಾರಿ ಹಳೇ ಮೈಸೂರನ್ನು ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲಾ ಪಕ್ಷಗಳು ಮಾಸ್ಟರ್ ಪ್ಲ್ಯಾನ್ ಮಾಡಿವೆ.

ಇದನ್ನೂ ಓದಿ: ಇಷ್ಟು ದಿನ ರಾಜ್ಯವೆಲ್ಲ ಸುತ್ತಾಡಿ ಕೊನೆ ದಿನ ಸ್ವಕ್ಷೇತ್ರಗಳಲ್ಲಿ ಮತ ಬೇಟೆಗಿಳಿದ  ಘಟಾನುಘಟಿ ನಾಯಕರು

ಹಳೇ ಮೈಸೂರು ಭಾಗದಲ್ಲಿ 30ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಕಸರತ್ತು

ಬಿಜೆಪಿ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಕನಿಷ್ಠ 30ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದರಲ್ಲೂ ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಹೆಚ್ಚು ಕಮಲ ಅರಳಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಫೀಲ್ಡಿಗಿಳಿದಿದ್ದರು. ಚಿತ್ರದುರ್ಗದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವುದು ಜೊತೆಗೆ ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಸನದಲ್ಲಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ರಣತಂತ್ರ ಮಾಡಿದೆ. ರಾಮನಗರ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದಲ್ಲಿ ಖಾತೆ ತೆರೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ.

ಕಾಂಗ್ರೆಸ್ ಸಹಾ ಹಳೇ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿದೆ. ಅದರಲ್ಲೂ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ ಹಾಗೂ ಕೋಲಾರದಲ್ಲಿ ಶತಾಯಗತಾಯ ಅತಿ ಹೆಚ್ಚು ಸ್ಥಾನ ಗಳಿಸಲೇಬೇಕೆಂದು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ. ಇದರ ಜೊತೆಗೆ ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗದಲ್ಲೂ ಕೈ ಬಲಪಡಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ.

ಇನ್ನು ಜೆಡಿಎಸ್ ಪಕ್ಷ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಹಳೇ ಮೈಸೂರು ಭಾಗದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನವನ್ನು ಗಳಿಸುವುದಕ್ಕೆ ಎಲ್ಲಾ ರೀತಿಯಾದಂತಹ ಪ್ರಯತ್ನವನ್ನು ಮುಂದುವರೆಸಿದೆ. ಇನ್ನು ಈ ಚುನಾವಣೆ ಜೆಡಿಎಸ್ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಅದಕ್ಕಾಗಿಯೇ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡು ಪಂಚರತ್ನ ಯಾತ್ರೆಯನ್ನ ನಡೆಸಿದ್ದರು. ಇದೀಗ ದೊಡ್ಡಗೌಡರು ಮಂಡ್ಯದಲ್ಲಿ 7ಕ್ಕೆ 7 ಸ್ಥಾನ ಗೆಲ್ಲುವ ಶಪಥ ಮಾಡಿದ್ದಾರೆ. ಉಳಿದಂತೆ ಮೈಸೂರು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮ ಪ್ರಾಬಲ್ಯ ಮುಂದವರಿಸುವುದು. ಕೋಲಾರ, ತುಮಕೂರಿನಲ್ಲಿ ಕಳೆದು ಹೋಗಿರುವ ಹಿಡಿತವನ್ನು ಮತ್ತೆ ಸಾಧಿಸುವುದು ಜೆಡಿಎಸ್ ಗುರಿಯಾಗಿದೆ. ಈ ಮೂಲಕ ಜೆಡಿಎಸ್ ಹಳೇ‌ ಮೈಸೂರು ಭಾಗದಲ್ಲೇ ಅತಿ ಹೆಚ್ಚು ಸ್ಥಾನಗಳಿಸುವುದಕ್ಕೆ ಎಲ್ಲಾ ರಣತಂತ್ರಗಳನ್ನು ಮಾಡುತ್ತಿದೆ.

ಕರ್ನಾಟಕದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ