ಮೋದಿ ಸಂಚರಿಸುವ ರಸ್ತೆ ಮಾರ್ಗದಲ್ಲಿ ಕೆಟ್ಟು ನಿಂತ ಕಸದ ಲಾರಿ, ಬಸ್: ಸಮಾವೇಶದಲ್ಲಿ ಮಹಿಳೆಯರ ಮೇಕಪ್ ಕಿಟ್ಗೆ ನೋ ಎಂಟ್ರಿ
ಮೋದಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಸಮಾವೇಶಕ್ಕೆ ಆಗಮಿಸುವ ಮಹಿಳೆಯರ ಮೇಕಪ್ ಕಿಟ್ಗೂ ಬ್ರೇಕ್ ಹಾಕಲಾಗಿದೆ. ಜೊತೆಗೆ ಮೋದಿ ಸಾಗೂ ಮಾರ್ಗದಲ್ಲಿ ಬಿಬಿಎಂಪಿ ಕಸದ ಲಾರಿ, ಖಾಸಗಿ ಬಸ್ ಕೆಟ್ಟು ನಿಂತಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸಿದ ಘಟನೆ ನಡೆದಿದೆ.

ಕೋಲಾರ: ರಾಜ್ಯ ರಾಜಕೀಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ರಾಷ್ಟ್ರ ನಾಯಕರು ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ಹಿನ್ನೆಲೆ ಚಿನ್ನದ ನಾಡು ಕೋಲಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ. ಇನ್ನು ಕೋಲಾರ ಹೊರವಲಯದಲ್ಲಿ ನಡೆಯುತ್ತಿರುವ ಮೋದಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಸಮಾವೇಶಕ್ಕೆ ಆಗಮಿಸುವ ಮಹಿಳೆಯರ ಮೇಕಪ್ ಕಿಟ್ಗೂ ಬ್ರೇಕ್ ಹಾಕಲಾಗಿದೆ. ಜೊತೆಗೆ ಮೋದಿ ಸಾಗೂ ಮಾರ್ಗದಲ್ಲಿ ಬಿಬಿಎಂಪಿ ಕಸದ ಲಾರಿ, ಖಾಸಗಿ ಬಸ್ ಕೆಟ್ಟು ನಿಂತಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸಿದ ಘಟನೆ ನಡೆದಿದೆ.
ರಸ್ತೆ ಮಧ್ಯೆ ಕೆಟ್ಟುನಿಂತ ಕಸದ ಲಾರಿ, ಖಾಸಗಿ ಬಸ್
ಮೋದಿ ಸಾಗೋ ಮಾರ್ಗದಲ್ಲಿ ಪೊಲೀಸರಿಗೆ ಡಬಲ್ ಡಬಲ್ ಟೆನ್ಶನ್ ಶುರುವಾಗಿತ್ತು. ಏಕೆಂದರೆ ಬಿಬಿಎಂಪಿ ಕಸದ ಲಾರಿ ರಸ್ತೆ ಮಧ್ಯೆ ಕೆಟ್ಟು ನಿಂತಿತ್ತು. ಮೋದಿ ರಾಜಭವನದಿಂದ ಸಾಗುವ ಮಾರ್ಗದಲ್ಲಿಯೇ ಅಂದರೆ ಐಟಿಸಿ ವಿಂಡ್ಸರ್ ಮ್ಯಾನರ್ ಬಳಿ ಕಸದ ಲಾರಿ ಹಾಗೂ ಕಾವೇರಿ ಜಂಕ್ಷನ್ ಬಳಿ ಖಾಸಗಿ ಬಸ್ ಕೆಟ್ಟು ನಿಂತಿತ್ತು. ಪೊಲೀಸರು ಹರಸಾಹಸಪಟ್ಟು ಕಸದ ಲಾರಿಯನ್ನೇ ಗುದ್ದಾಡಿ ತಳ್ಳಿ ಬದಿಗೆ ನಿಲ್ಲಿಸಿದರು. ಮತ್ತೊಂದೆಡೆ ಕೆಟ್ಟು ನಿಂತಿದ್ದ ಖಾಸಗಿ ಬಸ್ನಿಂದ ಟ್ರಾಫಿಕ್ ತಲೆ ನೋವು ಶುರುವಾಗಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸುವಂತಾಯಿತು. ಕೊನೆಗೆ ಎರಡೆರಡು ಕ್ರೇನ್ ತರಿಸಿ ಕಸರತ್ತು ನಡೆಸಿ ಬಸ್ ತೆರವು ಮಾಡಲಾಯಿತು.
ಇದನ್ನೂ ಓದಿ: 50 ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ; ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಕ್ಕೆ ಧ್ವನಿಗೂಡಿಸಿದ ಕುಮಾರಸ್ವಾಮಿ
ಮೋದಿ ಸಮಾವೇಶಕ್ಕೆ ಬರುವ ಮಹಿಳೆಯರು ಮೇಕಪ್ ಕಿಟ್ ತರುವಂತಿಲ್ಲ
ಕೋಲಾರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಸಮಾವೇಶಕ್ಕೆ ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಇನ್ನು ಮೋದಿ ಸಮಾವೇಶಕ್ಕೆ ಬರುವವರನ್ನು ಪರಶೀಲಿಸಲಾಗುತ್ತಿದ್ದು ಅವರ ಬಳಿ ಇದ್ದ ವಾಟರ್ ಬಾಟಲ್, ಬೆಂಕಿ ಪಟ್ಟಣ, ಲೈಟರ್, ಬ್ಲಾಕ್ ಶರ್ಟ್ ಎಲ್ಲವನ್ನೂ ತೆಗೆಸಲಾಗುತ್ತಿದೆ. ಜೊತೆಗೆ ಮಹಿಳೆಯರು ತಮ್ಮ ಬ್ಯಾಂಗ್ನಲ್ಲಿ ಇಟ್ಟುಕೊಂಡು ಬಂದ ಮೇಕಪ್ ಕಿಟ್ ಗೂ ಬ್ರೇಕ್ ಹಾಕಲಾಗಿದೆ. ಸೋಪ್ ಸ್ನೋ ಸೆಂಟ್ ಸೇರಿದಂತೆ ಮೇಕಪ್ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಿಷೇಧ ಹೇರಲಾಗಿದೆ. ಚೆಕಿಂಗ್ ಪಾಯಿಂಟ್ ನಲ್ಲೆ ಎಲ್ಲವನ್ನು ತೆಗೆದುಹಾಕಲಾಗುತ್ತಿದೆ.
ಪರಿಪರಿಯಾಗಿ ಕೇಳಿಕೊಂಡ್ರು ಪೊಲೀಸರು ಬಿಡದ ಹಿನ್ನೆಲೆ ಕೆಲ ಮಹಿಳೆಯರು ಸಮಾವೇಶಕ್ಕೆ ತೆರಳದೆ ಮನೆ ಕಡೆ ಹೊರಟಿದ್ದಾರೆ. ಮೇಕಪ್ ಕಿಟ್ ಕಿತ್ತುಕೊಂಡಿದಕ್ಕೆ ಕೆಲ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:27 am, Sun, 30 April 23