ಹಾಸನ: ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯಲ್ಲಿ(Hassan District) ಗೊಂದಲ ನಿರ್ಮಾಣವಾಗಿದೆ. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ (Arasikere) ರಾಜಕೀಯ ನಿಗೂಢ ನಡೆಯಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ನ ಮೊದಲ ಪಟ್ಟಿಯಲ್ಲಿ ಹಾಸನ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಆದ್ರೆ, ಇದೀಗ ಕಾರ್ಯಕರ್ತರು ರೊಚ್ಚಿಗೆದ್ದಿದ್ದು, ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವಂತೆ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ನನಗೆ ವೋಟ್ ಹಾಕದಿದ್ದರೆ ನಿಮ್ಮ ಕೆಲಸ ಮಾಡಿಕೊಡಲ್ಲ: ಮುಸ್ಲಿಮರಿಗೆ ಶಾಸಕ ಪ್ರೀತಂಗೌಡ ಎಚ್ಚರಿಕೆ!
ಇಂದು(ಡಿಸೆಂಬರ್ 30) ಅರಸೀಕೆರೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಸನ ಸಂಸದ ಕಚೇರಿ ಬಳಿ ಜಮಾಯಿಸಿದ್ದು, ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವಂತೆ ಆಗ್ರಹಿಸಿದರು. ಶಿವಲಿಂಗೇಗೌಡರು ನಮ್ಮನ್ನ ಕಡೆಗಣಿಸಿ ,ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಕಾರ್ಯಕ್ರಮಗಳಿಗೆ ಆಹ್ವಾನ ಮಾಡುತ್ತಿದ್ದಾರೆ. ನಮ್ಮ ಜೆಡಿಎಸ್ ಕಾರ್ಯಕರ್ತರ ಕೆಲಸವನ್ನೇ ಮಾಡಿ ಕೊಡುತ್ತಿಲ್ಲ. ಇತ್ತಿಚೆಗೆ ಜೆಡಿಎಸ್ ಅಡಿಯಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿಲ್ಲ. ನಮ್ಮ ಕಣ್ಣ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದಾರೆ. ಆದಷ್ಟು ಬೇಗ ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಿ ಎಂದು ಜೆಡಿಎಸ್ ಕಾರ್ಯಕರ್ತರು ಬಿಗಿಪಟ್ಟು ಹಿಡಿದರು.
ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಎಂದು ಪಟ್ಟು ಹಿಡಿದ ಕಾರ್ಯಕರ್ತರಿಗೆ ಸಮಾದಾನ ಮಾಡಿದ ಹೆಚ್.ಡಿ. ರೇವಣ್ಣ, ಜನವರಿ 15ರವರೆಗೆ ಡೆಡ್ಲೈನ್ ಕೊಡೋಣ. ಬೇರೆಡೆ ಅನುಕೂಲವಾದ್ರೆ ತೀರ್ಮಾನ ತತೋ ಎಂದು ಹೇಳಿದ್ದೇನೆ. ಜ.20ರೊಳಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸುತ್ತೇವೆ. ಸಮಯ ಕೊಡೋಣ ಎಂದು ಹೆಚ್ಡಿಡಿ, ಹೆಚ್ಡಿಕೆ ಸಹ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರೇವಣ್ಣ ಶಾಸಕ ಶಿವಲಿಂಗೇಗೌಡ ಗೆ ಪರೋಕ್ಷವಾಗಿ ಜನವರಿ 15 ಡೆಡ್ ಲೈನ್ ಕೊಟ್ಟರು.
ಹದಿನೈದರವರೆಗೆ ಸಮಯ ಕೊಡೋಣ ಎಂದು ಕುಮಾರಸ್ವಾಮಿ ದೇವೇಗೌಡರು ಕೂಡ ಹೇಳಿದಾರೆ. ಹಾಗಾಗಿ ಅವರಿಗೆ ಟೈಂ ಕೊಡೋಣ ಆಮೇಲೆ ನಮ್ಮಿಂದ ಹಿಂಗಾಯ್ತು ಎಂದು ಅಪವಾದ ಬರುವುದು ಬೇಡ. ಹೊಳೆನರಸೀಪುರ ನನಗೆ ಒಂದು ಕಣ್ಣಾದ್ರೆ ನಾನು ಜೀವ ಇರುವವರೆಗೆ ಅರಸೀಕೆರೆ ಮರೆಯಲ್ಲ. ರಾತ್ರಿ ಹನ್ನೆರಡು ಗಂಟೆಗೆ ಬರಲಿ ನಿಮಗಾಗಿ ದುಡಿಯದೆ ಹೋದರೆ ನಾನು ದೇವೇಗೌಡದ ಮಗ ಅಲ್ಲ. ಎಲ್ಲವನ್ನು ಅವರಿಗೆ ಬಿಡೋಣ ಹದಿನೈದರ ಮೇಲೆ ತೀರ್ಮಾನ ಮಾಡೋಣ ಎಂದು ಹೇಳಿದರು.
ಹೌದು…ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಲಿಂಗೇಗೌಡ ಅವರು ಜೆಡಿಎಸ್ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಹಲವು ಸುತ್ತಿನ ಮಾತುಕತೆ ಮುಗಿದಿದ್ದು, ಫೆಬ್ರವರಿಯಲ್ಲಿಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:43 pm, Fri, 30 December 22