ಸಿದ್ದರಾಮಯ್ಯ ಗುಡುಗಿದರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗುತ್ತೆ: ವಿ ಶ್ರೀನಿವಾಸ ಪ್ರಸಾದ್ ವ್ಯಂಗ್ಯ
ಸಿದ್ದರಾಮಯ್ಯ ಗುಡುಗಿದರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣದ ಬಗ್ಗೆ ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಮೈಸೂರು: ಸಿದ್ದರಾಮಯ್ಯ ಗುಡುಗಿದರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣದ ಬಗ್ಗೆ ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್ (V Srinivasa Prasad) ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮುಳುಗಿ ಹೋದರೆಂದು ರಾಹುಲ್ ಗಾಂಧಿ ಗುಡುಗಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗೆದ್ದಿದ್ದು 1 ಕ್ಷೇತ್ರ. ಸಿದ್ದರಾಮಯ್ಯ ಗುಡುಗಿ 36,000 ಮತಗಳ ಅಂತರದಿಂದ ಸೋತರು. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೊರಗಿನವರು ಎನ್ನುವ ಸಿದ್ದರಾಮಯ್ಯ, 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿಗೆ ಹೋಗಿದ್ಯಾಕೆ? ಈ ಚುನಾವಣೆಯಲ್ಲಿ ಎಲ್ಲಾ ಕಡೆ ಸುತ್ತಾಡಿ ವರುಣ ಕ್ಷೇತ್ರಕ್ಕೆ ಬಂದಿದ್ದಾರೆ. ವರುಣ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲಲು ಸಾಧ್ಯಾನಾ ಎಂದು ಪ್ರಶ್ನಿಸಿದರು.
ಲಿಂಗಾಯತ ಸಿಎಂ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ
ಲಿಂಗಾಯತ ಸಿಎಂಗಳು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಸವರಾಜ ಬೊಮ್ಮಾಯಿ ಮಾತ್ರ ಭ್ರಷ್ಟರು, ಸಿಎಂ ಆಗಿದ್ದ ಲಿಂಗಾಯತರೆಲ್ಲರೂ ಭ್ರಷ್ಟರಲ್ಲ ಎಂದು ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ ಎಂದರು. ಸಿಎಂ ಬಗ್ಗೆ ಹೊಸದಾಗಿ ಆಯ್ಕೆಯಾದ ಶಾಸಕರು, ವರಿಷ್ಠರು ನಿರ್ಧರಿಸುತ್ತಾರೆ. ಇಂಥವರೇ ಸಿಎಂ ಆಗುತ್ತಾರೆಂದು ಹೇಳಿಕೆ ನೀಡದಂತೆ ಸೂಚಿಸಿದ್ದಾರೆ. ಬಿಜೆಪಿ ಅಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ. ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ನಡ್ಡಾ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಮುಂದೆ ಸಿಎಂ ಯಾರಾಗುತ್ತಾರೆಂದು ಚರ್ಚಿಸುವುದು ಅಪ್ರಸ್ತುತ ಎಂದು ಹೇಳಿದರು.
ಇದನ್ನೂ ಓದಿ: ಲಿಂಗಾಯತ ಸಿಎಂ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು
ಅನುಕಂಪವನ್ನು ಅಭಿವೃದ್ಧಿಗೆ ತಳುಕು ಹಾಕುವುದು ಸರಿಯಲ್ಲ
ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕಂಪ ವಿಚಾರವಾಗಿ ಮಾತನಾಡಿದ ಅವರು, ಧ್ರುವನಾರಾಯಣ್ ಹಾಗೂ ಅವರ ಪತ್ನಿ ಸಾವನ್ನಪ್ಪಿದ ಬಗ್ಗೆ ನಮಗೂ ಅನುಕಂಪವಿದೆ. ನಿಮಗೂ ಅನುಕಂಪವಿದೆ, ಎಲ್ಲರಿಗೂ ಅನುಕಂಪವಿದೆ. ಈ ಬಗ್ಗೆ ಪಕ್ಷಾತೀತವಾಗಿ ಅನುಕಂಪ ವ್ಯಕ್ತವಾಗಿದೆ. ಸಂಸದ ಪ್ರತಾಪ್ ಸಿಂಹ ಹಾಗೂ ನಾನು ಸಹ ಹೋಗಿ ಸಂತಾಪ ವ್ಯಕ್ತಪಡಿಸಿದ್ದೇವೆ.
ಅನುಕಂಪದಿಂದಾಗಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮಾಯವಾಗಿ ಹೋಗುತ್ತವೆಯಾ ಎಂದು ಪ್ರಶ್ನಿಸಿದರು. ಹರ್ಷವರ್ಧನ್ 500 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಸ್ವತಃ ಮುಖ್ಯಮಂತ್ರಿ ಹೇಳಿದ್ದಾರೆ. ಅನುಕಂಪದ ನಡುವೆ, ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಲು ಆಗುತ್ತಾ ಹೇಳಿ ಎಂದರು. ಅನುಕಂಪವನ್ನು ಅಭಿವೃದ್ಧಿಗೆ ತಳುಕು ಹಾಕುವುದು ಸರಿಯಲ್ಲ. ಹಾಗಾದರೆ ಅಭಿವೃದ್ಧಿ ಕಾರ್ಯಗಳು ಲೆಕ್ಕಕ್ಕೇ ಬರಲ್ವಾ ಎಂಬ ಪ್ರಶ್ನೆಗೆ ನಾವು ಎಲ್ಲವನ್ನೂ ಜನರಿಗೆ ಬಿಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಟಿಕೆಟ್ ಕೈ ತಪ್ಪಿದಕ್ಕೆ ಜೆಡಿಎಸ್ಗೆ ಹೋಗುತ್ತೇನೆ ಎಂದಿದ್ದ ನೆಹರು ಓಲೇಕಾರ ಬಿಜೆಪಿಗೆ ಯುಟರ್ನ್
ಬಿಜೆಪಿಯವರು ಯಾವಾಗ ಸತ್ಯ ಹೇಳುತ್ತಾರೆ: ಹೆಚ್.ಸಿ.ಮಹದೇವಪ್ಪ
ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿಯವರು ಯಾವಾಗ ಸತ್ಯ ಹೇಳುತ್ತಾರೆ ಎಂದು ಕಿಡಿಕಾರಿದರು. ಬಿಜೆಪಿಯವರು ಯಾವಾಗಲೂ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತಾಡ್ತಾರೆ. ಗಾಳಿ ಸುದ್ದಿ ಹರಡಿ ಜನರ ಮನಸು ಕೆಡಿಸುವುದೇ ಬಿಜೆಪಿಯ ಉದ್ದೇಶ. ಯಾರು ಸಿಎಂ ಆಗಬೇಕೆಂದು ತೀರ್ಮಾನಿಸುವ ಶಕ್ತಿ ಜನರಿಗೆ ಇದೆ. ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದೇ ಬಿಜೆಪಿಯವರ ಕೆಲಸ. ರೈತರು, ಬಡವರ ಪರ ಬಿಜೆಪಿ ಇಲ್ಲ ಎಂದು ಗುಡುಗಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 pm, Sun, 23 April 23