ಪ್ರಚಾರದ ಕಣದಲ್ಲಿ ಒಂದಷ್ಟು ಗಮ್ಮತ್ತು; ಡೇಟ್ ಆಫ್ ಬರ್ತೇ ಗೊತ್ತಿಲ್ಲ ಎಂದ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಕೊಟ್ರು ಹಸಿ ಮೀನು
ಗುರುವಾರದ (ಏಪ್ರಿಲ್ 27) ಪ್ರಚಾರದ ಕಣದಲ್ಲಿ ಹಲವು ಸ್ವಾರಸ್ಯಕರ ವಿದ್ಯಮಾನಗಳು ನಡೆದಿವೆ. ಅವುಗಳ ಮಾಹಿತಿ ಇಲ್ಲಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಪ್ರಚಾರದ ಭರಾಟೆ ಜೋರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರಚಾರದ ಬಿರುಸು ಜೋರಾಗಿದ್ದರೆ, ನಟ ಕಿಚ್ಚ ಸುದೀಪ್, ನಟಿ ಶ್ರುತಿ ಸೇರಿದಂತೆ ಚಿತ್ರ ತಾರೆಯರೂ ಪ್ರಚಾರದ ಕಣದಲ್ಲಿ ಹವಾ ಸೃಷ್ಟಿಸಿದ್ದಾರೆ. ಮತ್ತೊಂದೆಡೆ ಕೇಂದ್ರ ನಾಯಕರೂ ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ನಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ಕಣಕ್ಕೆ ಧುಮುಕಿದ್ದರೆ ಬಿಜೆಪಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಚಿವರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮತ್ತಿತರರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಮಧ್ಯೆ, ಗುರುವಾರದ (ಏಪ್ರಿಲ್ 27) ಪ್ರಚಾರದ ಕಣದಲ್ಲಿ ಹಲವು ಸ್ವಾರಸ್ಯಕರ ವಿದ್ಯಮಾನಗಳು ನಡೆದಿವೆ. ಅವುಗಳ ಮಾಹಿತಿ ಇಲ್ಲಿದೆ.
ಡೇಟ್ ಆಫ್ ಬರ್ತ್ ಗೊತ್ತಿಲ್ಲ ಎಂದ ಸಿದ್ದರಾಮಯ್ಯ
ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಸಿದ್ದರಾಮಯ್ಯ ಬರ್ತಿದ್ದಂತೆ ಕೈ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಡೊಳ್ಳು ಬಾರಿಸಿ ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಅವರು ಗಮನ ಸೆಳೆದರು. ಇದೇ ವೇಳೆ, ‘ನಾನು ಕಾನೂನು ಓದಿದ್ದರೂ ನನ್ನ ಡೇಟ್ ಆಫ್ ಬರ್ತ್ ನನಗೆ ಗೊತ್ತಿಲ್ಲ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ನೆರೆದಿದ್ದವರನ್ನು ನಗೆಗಡಲಲ್ಲಿ ಮುಳುಗಿಸಿದರು.
ಮುಸ್ಲಿಂ ಕಾರ್ಯಕರ್ತನ ಜತೆ ಬೊಮ್ಮಾಯಿ ಆತ್ಮೀಯ ಮಾತುಕತೆ
ಹಾನಗಲ್ ಕ್ಷೇತ್ರದ ಬೊಮ್ಮನಹಳ್ಳಿ ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ ನಡೆಸಿದ್ದು, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರವಾಗಿ ಮತಯಾಚನೆ ಮಾಡಿದ್ದಾರೆ. ರೋಡ್ ಶೋ ಮೂಲಕ ಮತಯಾಚನೆ ಮಾಡಿದ ಬೊಮ್ಮಾಯಿ ಮುಸ್ಲಿಂ ಕಾರ್ಯಕರ್ತನ ಜತೆ ಆತ್ಮೀಯವಾಗಿ ಮಾತನಾಡುತ್ತಿರುವುದು ಕಂಡುಬಂತು.
ಆಜಾನ್ ನಡುವೆ ಸಿಎಂ ಬೊಮ್ಮಾಯಿ ಭಾಷಣ
ಹಾವೇರಿಯಲ್ಲಿ ಬೊಮ್ಮಾಯಿ ಮಾತನಾಡುತ್ತಿರುವಾಗ ಆಜಾನ್ ಸದ್ದು ಜೋರಾಯಿತು. ಧ್ವನಿವರ್ಧಕದ ಸದ್ದು ಜೋರಾದರೂ ಬೊಮ್ಮಾಯಿ ಭಾಷಣ ಮುಂದುವರಿಸಿದರು.
ಆಜಾನ್ ವೇಳೆ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ
ಮಂಗಳೂರಿನ ಅಡ್ಯಾರು ಬಳಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುವುದು ಎಂದು ಘೋಷಿಸಿದರು. ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಾಗ ಆಜಾನ್ ಕೂಗುವುದು ಕೇಳಿಬಂತು. ಕೂಡಲೇ ಕೆಲ ಕಾಲ ಭಾಷಣ ನಿಲ್ಲಿಸಿದ ಅವರು, ಆಜಾನ್ ಮುಗಿದ ಬಳಿಕ ಭಾಷಣ ಮುಂದುವರಿಸಿದರು. ಇದೇ ವೇಳೆ ವೇದಿಕೆಯಲ್ಲಿ ಸುಸ್ತಾದಂತೆ ಕಂಡುಬಂದ ಡಿಕೆ ಶಿವಕುಮಾರ್ ಅವರನ್ನು, ಆರ್ ಯೂ ಆಲ್ರೈಟ್ ಎಂದು ರಾಹುಲ್ ಗಾಂಧಿ ವಿಚಾರಿಸಿದ್ದು ಕಂಡುಬಂತು.
ರಾಹುಲ್ಗೆ ಹಸಿ ಮೀನು ಗಿಫ್ಟ್
ಮಂಗಳೂರಿನ ಸಮಾವೇಶಕ್ಕೂ ಮುನ್ನ ಉಡುಪಿಯ ಕಾಪು ಉಚ್ಚಿಲದಲ್ಲಿ ಅವರು ಮೀನುಗಾರರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಅವರಿಗೆ ಮಹಿಳೆಯೊಬ್ಬರು ಆಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು.
ಉತ್ತರ ಕರ್ನಾಟಕದಲ್ಲಿ ಕಿಚ್ಚನ ಹವಾ
ನಟ ಕಿಚ್ಚ ಸುದೀಪ್ ಅವರು ಬಳ್ಳಾರಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಅಲೆ ಎಬ್ಬಿಸಿದ್ದಾರೆ. ರೋಡ್ ಶೋ ವೇಳೆ ಜನರು ತೋರಿದ ಅಭಿಮಾನಕ್ಕೆ ಕಿಚ್ಚ ತಲೆಬಾಗಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ