AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಥಣಿ ಟಿಕೆಟ್ ಫೈಟ್: ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣ, ಆರಾಮವಾಗಿರು ಎಂದ ರಮೇಶ್ ಜಾರಕಿಹೊಳಿ

Karnataka Elections 2023: ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಗೊಂದಲ ಇದೆ. ಒಂದೆಡೆ ಎಂಎಲ್​ಸಿ ಲಕ್ಷ್ಮಣ ಸವದಿ ಟಿಕೆಟ್​ಗಾಗಿ ಕಾಯುತ್ತಿದ್ದು, ಇನ್ನೊಂದೆಡೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದು ಕುಳಿತಿದ್ದಾರೆ.

ಅಥಣಿ ಟಿಕೆಟ್ ಫೈಟ್: ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣ, ಆರಾಮವಾಗಿರು ಎಂದ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ
Rakesh Nayak Manchi
|

Updated on:Apr 09, 2023 | 4:32 PM

Share

ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದ (Athani Constituency) ಬಿಜೆಪಿ ಟಿಕೆಟ್ ಯಾರಿಗೆ ಎಂಬ ಗೊಂದಲ ಇದೆ. ಒಂದೆಡೆ ಎಂಎಲ್​ಸಿ ಲಕ್ಷ್ಮಣ ಸವದಿ (Laxman Savadi) ಟಿಕೆಟ್​ಗಾಗಿ ಕಾಯುತ್ತಿದ್ದು, ಇನ್ನೊಂದೆಡೆ ಮಹೇಶ್ ಕುಮಟಳ್ಳಿಗೆ (Mahesh Kumathalli) ಟಿಕೆಟ್ ನೀಡಲು ರಮೇಶ್ ಜಾರಕಿಹೊಳಿ (Ramesh Jarkiholi) ಪಟ್ಟು ಹಿಡಿದು ಕುಳಿತಿದ್ದಾರೆ. ಈ ನಡುವೆ ಮಹಾರಾಷ್ಟ್ರದಲ್ಲಿ ಹೇಳಿಕೆ ನೀಡಿದ ಮಾಜಿ ಸಚಿವರೂ ಆಗಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್​ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಶಿನೋಳಿ ಗ್ರಾಮದಲ್ಲಿ ಹೇಳಿಕೆ ನೀಡಿದ ಅವರು, ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಆಗಲ್ಲ ಎಂದರು.

ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿ ಸೋತರೆ ಅದರ ಹಣೆಪಟ್ಟಿ ಕಟ್ಟಲು ಷಡ್ಯಂತ್ರ ನಡೆಯುತ್ತಿದೆ ಎಂಬ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಶ್ರೀಮಂತ ಪಾಟೀಲ್ ಸೇರಿದಂತೆ ಬಿಜೆಪಿಗೆ ಸೇರಿದ ಎಲ್ಲರಿಗೂ ಟಿಕೆಟ್ ಸಿಗುತ್ತದೆ. ಈ ಹಿಂದೆ ಬಿಜೆಪಿ ಸೇರಿದ 17 ಶಾಸಕರಿಗೂ ಹೈಕಮಾಂಡ್ ಆಶೀರ್ವಾದ ಮಾಡುತ್ತದೆ. ಲಕ್ಷ್ಮಣ ಸವದಿ ಏಕೆ ಹತಾಶರಾಗಿ ಮಾತಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ. ನಾನು ಹಾಗೂ ಎಂಎಲ್​​ಸಿ ಲಕ್ಷ್ಮಣ ಸವದಿ ಸಣ್ಣ ಗಿಡ. ರಾಷ್ಟ್ರೀಯ ನಾಯಕರು ಹೆಮ್ಮರ, ಅವರು ನಿರ್ಣಯ ಮಾಡುತ್ತಾರೆ. ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣ, ಆರಾಮವಾಗಿರು ಎಂದು ಹೇಳಿದರು.

ಇದನ್ನೂ ಓದಿ: ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ: ಕಾಂಗ್ರೆಸ್-ದಳ ಟಿಕೆಟ್ ಫೈನಲ್, ಬಿಜೆಪಿ ಟಿಕೆಟ್​ಗಾಗಿ ಮುಂದುವರಿದಿದೆ ಸರ್ಕಸ್!

ಕಾಂಗ್ರೆಸ್, ಜೆಡಿಎಸ್​​ ಮೈತ್ರಿ ಸರ್ಕಾರ ಇದ್ದಾಗ ರಾಜೀನಾಮೆ ನೀಡಿ ಬಿಜೆಪಿ ಸೇರಿದ 17 ಶಾಸಕರಲ್ಲಿ ಕುಮಟಳ್ಳಿ ಸಹ ಒಬ್ಬರಾಗಿದ್ದಾರೆ. ಹೀಗಾಗಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ, ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಕುಮಟಳ್ಳಿ ನನ್ನ ಸ್ನೇಹಿತ. ಅವರಿಗೆ ಪಕ್ಷ ಟಿಕೆಟ್ ನೀಡಬೇಕು. ಹಾಗಿದ್ದರೆ ಮಾತ್ರ ನಾನು ಗೋಕಾಕ್​​ನಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಕುಮಟಳ್ಳಿ ವಿರುದ್ಧ ಪರಾಭವಗೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಕೂಡ ಪಕ್ಷದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. 2018ರಲ್ಲಿ ಕುಮಟಳ್ಳಿ ಕಾಂಗ್ರೆಸ್​​ನಿಂದ ಗೆದ್ದಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿಯೂ ಜಯ ಗಳಿಸಿದ್ದರು. ಸವದಿ ಪ್ರಸ್ತುತ ಬಿಜೆಪಿಯಿಂದ ಪರಿಷತ್ ಸದಸ್ಯರಾಗಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Sun, 9 April 23