ಕುಂದಗೋಳ ಕ್ಷೇತ್ರದಿಂದ ಎಂಆರ್ ಪಾಟೀಲ್ಗೆ ಟಿಕೆಟ್ ಪಕ್ಕಾ: ಜಗದೀಶ್ ಶೆಟ್ಟರ್ ಹಳೆ ವಿಡಿಯೋ ವೈರಲ್
ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಫೈಟ್ ನಡೆದಿದೆ. ಎಂ ಆರ್ ಪಾಟೀಲ್ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ, ಎಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹಳೆ ವಿಡಿಯೋ ಒಂದು ವೈರಲ್ ಆಗಿದೆ.
ಹುಬ್ಬಳ್ಳಿ: ಧಾರವಾಡ (Dharwad) ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ (Kundgol Assembly Constituency) ಬಿಜೆಪಿಯಲ್ಲಿ ಬಣ ರಾಜಕೀಯ ಶುರುವಾಗಿದೆ. ಮಾಜಿ ಶಾಸಕ ಎಸ್ಐ ಚಿಕ್ಕನಗೌಡರ (SI Chikkanagoudar) ಮತ್ತು ಎಂ ಆರ್ ಪಾಟೀಲ್ (MR Patil) ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆ ಇಬ್ಬರ ನಡುವೆ ತಿಕ್ಕಾಟ ಶುರುವಾಗಿದ್ದು, ಬೀದಿ ರಂಪಾಟವಾಗಿದೆ. ಟಿಕೆಟ್ ಸಂಬಂಧ ಎಂ.ಆರ್ ಪಾಟೀಲ್ ಬೆಂಬಲಿಗರು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದು, ತಮ್ಮ ನಾಯಕನಿಗೆ ಟಿಕೆಟ್ ನೀಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರ ಹಳೆ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಎಂ ಆರ್ ಪಾಟೀಲ್ ಅವರಿಗೆ ಟಿಕೆಟ್ ನೀಡಲು ಕೋರ್ ಟೀಂ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಕಳೆದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಕೂಡ ಚಿಕ್ಕನಗೌಡರ ಮತ್ತು ಎಂ ಆರ್ ಪಾಟೀಲ್ ಮಧ್ಯೆ ಟಿಕೆಟ್ ವಿಚಾರವಾಗಿ ಫೈಟ್ ಶುರುವಾಗಿತ್ತು. ಈ ವೇಳೆ ಕೋರ್ ಟೀಂ ಇಬ್ಬರು ನಡುವೆ ಸಂಧಾನ ಮಾಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ, ಸಂಬಂಧಿ ಎಸ್ ಐ ಚಿಕ್ಕನಗೌಡರ ಅವರಿಗೆ ಟಿಕೆಟ್ ನೀಡಲಾಗಿತ್ತು.
ಇದನ್ನೂ ಓದಿ: ಜನಾರ್ದನ ರೆಡ್ಡಿ ನೀಡಿದ್ದ ಉಚಿತ ಆ್ಯಂಬುಲೆನ್ಸ್ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಜಗದೀಶ್ ಶೆಟ್ಟರ್ ಈ ಬಾರಿ ಚಿಕ್ಕನಗೌಡರ ಅವರಿಗೆ ಟಿಕೆಟ್ ನೀಡಲಾಗಿದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂ.ಆರ್ ಪಾಟೀಲ್ ಅವರಿಗೆ ಟಿಕೆಟ್ ನೀಡಲು ಕೋರ್ ಟೀಂ ನಿರ್ಧರಿಸಿದೆ ಎಂದಿದ್ದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇನ್ನು ಎಂ.ಆರ್ ಪಾಟೀಲ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಪ್ತರಾಗಿದ್ದಾರೆ.
ಇಬ್ಬರ ನಡುವಿನ ಪೈಪೋಟಿ ಎಷ್ಟರ ಮಟ್ಟಿಗೆ ಇದೆ ಎಂದರೆ ಕುಂದಗೋಳದಲ್ಲಿ ಇತ್ತೀಚೆಗೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಇಬ್ಬರು ಮುಖಂಡರ ಬೆಂಬಲಿಗರು ಬಹಿರಂಗವಾಗಿಯೇ ಕೈ ಕೈ ಮಿಲಾಯಿಸಿ ಗದ್ದಲಕ್ಕೆ ಮುಂದಾಗಿದ್ದು ತೀವ್ರತರ ಪೈಪೋಟಿಗೆ ಸಾಕ್ಷಿಯಾಗಿತ್ತು.
ಕುಂದಗೋಳ ಕ್ಷೇತ್ರದ ಇತಿಹಾಸದಲ್ಲಿಯೇ 2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಾಡಿತ್ತು. ಕ್ಷೇತ್ರ ಪುನರ್ ವಿಂಗಡಣೆ ಹಿನ್ನೆಲೆಯಲ್ಲಿ ಕಲಘಟಗಿ ಕ್ಷೇತ್ರದಿಂದ ವಲಸೆ ಬಂದಿದ್ದ ಎಸ್.ಐ.ಚಿಕ್ಕಗೌಡ್ರ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರಲ್ಲದೆ, ಅನಂತರ ಬಿಜೆಪಿಗೆ ಬಂದು 2018ರಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇನ್ನು ಯಾರಿಗೆ ಟಿಕೆಟ್ ತಪ್ಪಿದರೂ ಪಕ್ಷಾಂತರ ಪಕ್ಕಾ ಎನ್ನಲಾಗುತ್ತಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 am, Sun, 2 April 23