ವಾಹನ ಸವಾರರ ಗಮನಕ್ಕೆ: ಮೇ 6ರಂದು ಬೆಂಗಳೂರಿನಲ್ಲಿ 38 ಕಿಮೀ ಮೋದಿ ರ‍್ಯಾಲಿ: ಈ ರಸ್ತೆಗಳು ಬಂದ್
ಪ್ರಧಾನಿ ನರೇಂದ್ರ ಮೋದಿಯವರು ಮೇ 6ರಂದು ಬೆಂಗಳೂರಿನಲ್ಲಿ ಕರ್ನಾಟಕ ಸಂಕಲ್ಪ ಹೆಸರಿನಲ್ಲಿ ರ್ಯಾಲಿ ನಡೆಸಲಿದ್ದಾರೆ. ನಗರದಲ್ಲಿ ಒಟ್ಟು 38 ಕಿ.ಮೀ ರೋಡ್ ಶೋ ಮಾಡಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯದ ಚುಕ್ಕಾಣಿ ಹಿಡಿಯಲು ಕಂಕಣ ಕಟ್ಟಿಕೊಂಡಿದ್ದಾರೆ. ಈ ಸಂಬಂಧ ಕಾಲಿಗೆ ಚಕ್ರ ಕಟ್ಟಿಕೊಂಡು ಕರುನಾಡಿನ ಮೂಲೆ ಮೂಲೆ ಸುತ್ತುತ್ತಿದ್ದಾರೆ. ಅದರಂತೆ ಪ್ರಧಾನಿ ಮೋದಿಯವರು ಮೇ 6ರಂದು ಬೆಂಗಳೂರಿನಲ್ಲಿ (Bengaluru) ಕರ್ನಾಟಕ ಸಂಕಲ್ಪ ಹೆಸರಿನಲ್ಲಿ ರ್ಯಾಲಿ ನಡೆಸಲಿದ್ದಾರೆ. ನಗರದಲ್ಲಿ ಒಟ್ಟು 38 ಕಿ.ಮೀ ರೋಡ್ ಶೋ ಮಾಡಲಿದ್ದಾರೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ. ಮೋಹನ್ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೇ 6 ರಂದು ಕರ್ನಾಟಕ ಸಂಕಲ್ಪ ಹೆಸರಿನಲ್ಲಿ ರ್ಯಾಲಿ ನಡೆಸಲಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಂತ ಶನಿವಾರ ರೋಡ್ ಶೋ ನಡೆಯಲಿದೆ. ರ್ಯಾಲಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು, ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಮೊದಲ ರೋಡ್ ಶೋ ಸಿ.ವಿ. ರಾಮನ್ ನಗರದಿಂದ ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ತಲುಪಲಿದೆ. ಒಟ್ಟು ಎರಡು ರೋಡ್ ಶೋ ನಡೆಯಲಿದ್ದು, ಬೆಳಗ್ಗೆ 10.1 ಕಿ.ಮೀ, ಸಂಜೆ 26.5 ಕಿ.ಮೀ. ರೋಡ್ ಶೋ ನಡೆಯಲಿದೆ ಎಂದು ಪಿಸಿ ಮೋಹನ್ ಹೇಳಿದರು.
ಇದನ್ನೂ ಓದಿ: ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಕಾಂಗ್ರೆಸ್ ಮ್ಯಾನಿಫೆಸ್ಟೋ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಸಂಜೆ ಜೆ.ಪಿ. ನಗರದ ಆರ್ಬಿಐನಿಂದ ರೋಡ್ ಶೋ ಆರಂಭವಾಗಿ ಬೊಮ್ಮನಹಳ್ಳಿ, ಜೆ.ಪಿ ನಗರ, ಜಯನಗರ, ಅರಬಿಂದೋ ಮಾರ್ಗ, ಕೂಲ್ ಜಾಯಿಂಟ್, ಮಯ್ಯಾಸ್, ಕರಿಸಂದ್ರ, ಸೌತ್ ಎಂಡ್ ಸರ್ಕಲ್, ನೆಟ್ಟ ಕಲ್ಲಪ್ಪ ಸರ್ಕಲ್, ಎನ್.ಆರ್. ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಟಿ.ಆರ್. ಮಿಲ್, ಸಿರ್ಸಿ ಸರ್ಕಲ್, ಈಟಾ ಮಾಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೋದಿ ಆಸ್ಪತ್ರೆ, ನವರಂಗ್ ಸರ್ಕಲ್, ಸಂಪಿಗೆ ರಸ್ತೆ, ಮಲ್ಲೇಶ್ವರ, ಮಾರಮ್ಮ ದೇವಸ್ಥಾನ ಬಳಿ ಅಂತ್ಯ ಆಗಲಿದೆ ಈ ಮಾರ್ಗದಲ್ಲಿ ವಾಹನ ಸಂಚಾರ ಇರುವುದಿಲ್ಲ. ಬದಲಿ ಮಾರ್ಗದಲ್ಲಿ ಸಂಚಾರ ಮಾಡಲು ಅವಕಾಶ ಮಾಡಲಾಗಿದೆ ಎಂದು ತಿಳಸಿದರು.
ಮೇ 5, 6 ಮತ್ತು 7 ಪ್ರಧಾನಿ ಮೋದಿ ರಾಜ್ಯ ಪ್ರವಾಸ
ಮೇ. 05 ರಂದು ಮಧ್ಯಾಹ್ನ 2.30 ಕ್ಕೆ ಬಳ್ಳಾರಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ತುಮಕೂರಿನಲ್ಲಿ ಮತಯಾಚಿಸಲಿದ್ದಾರೆ. ಅಂದು ರಾತ್ರಿ ಬೆಂಗಳೂರಿನ ರಾಜ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೇ 6 ರಂದು ಇಡೀ ದಿನ ಬೆಂಗಳೂರಿನಲ್ಲಿ 2 ರೋಡ್ ಶೋ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೊದಲ ರೋಡ್ ಶೋ ನಡೆಯಲಿದ್ದು, ಸಿ.ವಿ. ರಾಮನ್ ನಗರದ ಕೆಂಪೇಗೌಡ ಪ್ರತಿಮೆಯಿಂದ ಬ್ರಿಗೇಡ್ ರೋಡ್ ವಾರ್ ಮೆಮೋರಿಯಲ್ವರೆಗೆ ಮೆರವಣಿಗೆ ಸಾಗುತ್ತದೆ.
ಮಧ್ಯಾಹ್ನ 3 ಗಂಟೆಗೆ ಎರಡನೇ ರೋಡ್ ಶೋ ಆರಂಭವಾಗಲಿದ್ದು, ರಾತ್ರಿ 8.30 ರವರೆಗೆ ನಡೆಯುತ್ತದೆ. ಕೋಣನಕುಂಟೆ, ಬ್ರಿಗೇಡ್ ಮಿಲೇನಿಯಂನಿಂದ, ಸ್ಯಾಂಕಿ ಟ್ಯಾಂಕ್ವರೆಗೆ ನಡೆಯಲಿದೆ. ಐದೂವರೆ ಗಂಟೆಗಳ ಕಾಲ ರೋಡ್ ಶೋ ನಡೆಯಲಿದೆ. ಮೇ 6 ರಂದು ರಾತ್ರಿ ರಾಜಭವನದಲ್ಲಿ ತಂಗಲಿದ್ದಾರೆ.
ಮೇ 7 ರಂದು ಬೆಳಗ್ಗೆ 11 ಗಂಟೆಗೆ ಬಾದಾಮಿಯಲ್ಲಿ ನಡೆಯುವ ಸಾರ್ವಜನಿಕ ಸಾಮೇಶದಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 1 ಗಂಟೆಗೆ ಹಾವೇರಿಯಲ್ಲಿ, 3 ಗಂಟೆಗೆ ಶಿವಮೊಗ್ಗ ಗ್ರಾಮಾಂತರ, ಸಂಜೆ 5.45ಕ್ಕೆ ನಂಜನಗೂಡಿನಲ್ಲಿ ಮತಯಾಚಿಸಲಿದ್ದಾರೆ. ರಾತ್ರಿ 7 ಗಂಟೆಗೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಮೈಸೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Wed, 3 May 23