AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ನಗರದ ಬಹುತೇಕೆ ಕೆಲಸಗಳು ಸ್ಥಗಿತ; ಪಕ್ಷಗಳ ಪ್ರಚಾರಕ್ಕೆ ದಿನಗೂಲಿ ಕಾರ್ಮಿಕರ ಬಳಕೆ

ಹುಬ್ಬಳ್ಳಿಯ ಎಲ್ಲ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಕಾರ್ಯಕರ್ತರ ರೂಪದಲ್ಲಿ ದಿನಗೂಲಿ ಕಾರ್ಮಿಕರನ್ನೇ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಲಾಗಿದೆ.

ಹುಬ್ಬಳ್ಳಿ: ನಗರದ ಬಹುತೇಕೆ ಕೆಲಸಗಳು ಸ್ಥಗಿತ; ಪಕ್ಷಗಳ ಪ್ರಚಾರಕ್ಕೆ ದಿನಗೂಲಿ ಕಾರ್ಮಿಕರ ಬಳಕೆ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: May 03, 2023 | 1:59 PM

Share

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಗೆ (Hubli) ಪ್ರತಿದಿನ ದಿನಗೂಲಿ ಲೆಕ್ಕದಲ್ಲಿ ನೂರಾರು ಜನರು ಹಳ್ಳಿಗಳಿಂದ ಆಗಮಿಸುತ್ತಾರೆ. ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಈ ಕಾರ್ಮಿರನ್ನೇ ನಿಯೋಜಿಸಲಾಗುತ್ತದೆ. ಆದರೆ ಈ ಬಾರಿ ನರೇಗಾ ಕೆಲಸಗಳಿಗೆ ಕಾರ್ಮಿಕರು (Workers) ಸಿಗದೆ ಸಮಸ್ಯೆಯಾಗಿದೆ. ಏಕೆಂದರೇ ನಗರದ ಎಲ್ಲ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಕಾರ್ಯಕರ್ತರ ರೂಪದಲ್ಲಿ ದಿನಗೂಲಿ ಕಾರ್ಮಿಕರನ್ನೇ ಪಕ್ಷಗಳು ಬಳಸಿಕೊಳ್ಳುತ್ತಿವೆ. ದಿನಗೂಲಿ ಕಾರ್ಮಿಕರು ಊಟ, ಚಹಾ, ಉಪಾಹಾರದ ಜೊತೆಗೆ ಸಂಬಳವನ್ನು 500ರಿಂದ 800 ರೂ. ಬೇಡುತ್ತಿದ್ದಾರೆ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳು ದಿನನಿತ್ಯದ ಕೂಲಿ ಕಾರ್ಮಿಕರನ್ನು ಪ್ರಚಾರ ಕಾರ್ಯಗಳಲ್ಲಿ ಬಳಸಿಕೊಳ್ಳುತ್ತಿವೆ. ಇದರಿಂದ ಹೋಟೆಲ್ ಮತ್ತು ಇತರೆ ವಾಣಿಜ್ಯ ಸಂಸ್ಥೆಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ.

ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಉಚ್ಚಿಲ ಮಾತನಾಡಿ, ಚುನಾವಣೆಯಿಂದಾಗಿ ಹೋಟೆಲ್ ಉದ್ಯಮವು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಅಲ್ಪಾವಧಿಗೆ, ಕೂಲಿಕಾರರು ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಬದಲು ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ರಾಜಕೀಯ ಪಕ್ಷದ ನಾಯಕ, ಎಲ್ಲಾ ಪಕ್ಷಗಳು ಹೆಚ್ಚಿನ ಮತದಾರರನ್ನು ತಲುಪಲು ಕಾರ್ಮಿಕರನ್ನು ಅವಲಂಬಿಸಬೇಕು. “ಕಳೆದ ಚುನಾವಣೆಯ ಸಮಯದಲ್ಲಿ, ಕಾರ್ಮಿಕರು 300 ರೂ.ಗೆ ಬೇಡಿಕೆ ಇಡುತ್ತಿದ್ದರು. ಆದರೆ ಈ ಬಾರಿ, ಅವರು ಚಹಾ, ಮಧ್ಯಾಹ್ನದ ಊಟ ಮತ್ತು ಇತರ ಸೌಲಭ್ಯಗಳೊಂದಿಗೆ ಕನಿಷ್ಠ 500 ರೂ. ನೀಡಿ ಎನ್ನುತ್ತಿದ್ದಾರೆ.

ಎಎಪಿ ಹುಬ್ಬಳ್ಳಿ-ಧಾರವಾಡ ಅಭ್ಯರ್ಥಿ ವಿಕಾಸ ಸೊಪ್ಪಿನ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಸಾಕಷ್ಟು ಹಣ ಖರ್ಚು ಮಾಡುತ್ತಿವೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೂ ಪಕ್ಷಗಳಿಗೆ ಕಾರ್ಯಕರ್ತರಿಲ್ಲ. ಹೀಗಾಗಿ ಪ್ರಚಾರಕ್ಕಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.

ಹಳೇ ಹುಬ್ಬಳ್ಳಿ ನಿವಾಸಿ ಪರಮೇಶ್ವರಿ ಪಾಟೀಲ ಮಾತನಾಡಿ, ‘ಕಳೆದ 10 ದಿನಗಳಿಂದ ಹೋಟೆಲ್‌ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ. ಕೆಲಸವು 8 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12 ಅಥವಾ 1 ಗಂಟೆಗೆ ಕೊನೆಗೊಳ್ಳುತ್ತದೆ. ಇದಕ್ಕಾಗಿ ಅವರು ನನಗೆ 500 ರೂಪಾಯಿಗಳನ್ನು ನೀಡುತ್ತಾರೆ ಮತ್ತು ಊಟ, ಕೂಲ್ ಡ್ರಿಂಕ್ಸ್ ಮತ್ತು ನೀರಿಗೆ 300 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ದಿನಕ್ಕೆ 400 ರಿಂದ 700 ರೂ.ವರೆಗೆ ಕೂಲಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಪ್ರಯಾಣದ ವೆಚ್ಚ ಕೂಡ ಪಡೆಯುತ್ತಿದ್ದಾರೆ. ಇದರಿಂದ ಕಾರ್ಮಿಕರ ಕೊರತೆ ಉಂಟಾಗಿದ್ದು, ಎಂಎನ್‌ಆರ್‌ಇಜಿಎ ಕಾಮಗಾರಿಗೆ ತೊಡಕಾಗಿದೆ. ಗದಗದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಾತನಾಡಿ, ಕಾರ್ಮಿಕರು ಎಂಎನ್‌ಆರ್‌ಇಜಿಎ ಕಾಮಗಾರಿಗೆ ಸೇರಲು ಆಸಕ್ತಿ ತೋರಿಸುತ್ತಿಲ್ಲ, ಏಕೆಂದರೆ ಅವರು ಪ್ರಚಾರದಲ್ಲಿ ತೊಡಗಿದ್ದಾರೆ.

ಹಿರೇಕೆರೂರು ತಾಲೂಕಿನ ದಮ್ಮಳ್ಳಿಯ ಎಂಎನ್‌ಆರ್‌ಇಜಿಎ ಕಾರ್ಯಕರ್ತೆ ಗುಟ್ಟೆಮ್ಮ ಸುಣಗಾರ್ ಮಾತನಾಡಿ, ಕೆಲಸಕ್ಕಾಗಿ 4.5 ಕಿಮೀ ದೂರದ ಬೆಟಗೇರಿ ಗ್ರಾಮ ಪಂಚಾಯಿತಿಗೆ ಹೋಗುತ್ತೇವೆ ಆದರೆ ಅಧಿಕಾರಿಗಳು ಚುನಾವಣಾ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು. “ಚುನಾವಣೆ ನಂತರ ಬರಲು ಅವರು ನಮಗೆ ಸೂಚಿಸುತ್ತಿದ್ದಂತೆ, ಅನೇಕ ಕಾರ್ಮಿಕರು ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದಾರೆ” ಎಂದು ಹೇಳಿದ್ದಾರೆ.

ತಮ್ಮ ಕುಟುಂಬದ ಐವರು ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಪ್ರಚಾರ ಕಾರ್ಯಕ್ಕೆ 600 ರೂ. ಕೂಲಿ ನೀಡುವುದಾಗಿ ಭರವಸೆ ನೀಡಿದ್ದಕ್ಕೆ ವಾಪಸ್ಸಾಗುತ್ತಿದ್ದಾರೆ. “ಕೆಲವು ನಾಯಕರು ಈಗಾಗಲೇ ಹಳ್ಳಿಯಲ್ಲಿ ವಾಸಿಸುವ ನಮ್ಮ ಹಿರಿಯರಿಗೆ ಶೇ 50% ಹಣವನ್ನು ಪಾವತಿಸಿದ್ದಾರೆ” ಎಂದು ಈರವ್ವ ಗೌಡರ ಎಂಬುವರು ತಿಳಿಸಿದ್ದಾರೆ.

ಬಾಗಲಕೋಟೆಯ ಗ್ರಾಮೀಣಾಭಿವೃದ್ಧಿ ಕಾರ್ಯಕರ್ತರೊಬ್ಬರು ಮಾತನಾಡಿ, ಸಾಮಾನ್ಯ ಕೂಲಿ ಕಾರ್ಮಿಕರಿಗೆ ದಿನಕ್ಕೆ 200-300 ರೂ. ಸಿಗುತ್ತದೆ. ಆದರೆ ಈಗ ರೋಡ್‌ಶೋ ಮತ್ತು ಸಾರ್ವಜನಿಕ ಸಭೆಗಳಿಗೆ ಆಹಾರದ ಜೊತೆಗೆ ದಿನಕ್ಕೆ 600-700 ರೂ. ಸಿಗುತ್ತಿದೆ. “ಒಬ್ಬ ದಿನಗೂಲಿ ಕಾರ್ಮಿಕ ವಿವಿಧ ಪಕ್ಷಗಳ ಪ್ರಚಾರಕ್ಕೆ ಹಾಜರಾಗುತ್ತಿದ್ದಾರೆ” ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ