ಪುತ್ರರಿಗೆ ಟಿಕೆಟ್ ಬೇಡಿಕೆ ಇಟ್ಟ ಬಿಜೆಪಿ ಶಾಸಕರಿಗೆ ಶಾಕ್, ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಮೋದಿ ಮಾತಿಗೆ ರಾಜ್ಯ ನಾಯಕರು ತಬ್ಬಿಬ್ಬು
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬೆಳಗ್ಗೆಬಿಡುಗಡೆಯಾಗುತ್ತೆ, ಮಧ್ಯಾಹ್ನ ಬರುತ್ತೆ. ನಾಳೆ ಘೋಷಣೆಯಾಗುತ್ತೆ ಎಂದು ಮೂರು ದಿನಗಳು ಕಳೆದರೂ ಬಿಜೆಪಿ ಅಭ್ಯರ್ಥಿಗಳ ಒಂದೇ ಒಂದು ಪಟ್ಟಿ ಮಾತ್ರ ಬಿಡುಗಡೆಯಾಗಿಲ್ಲ. ಅಭ್ಯರ್ಥಿಯಾಗಿ ಆಯ್ಕೆ ಸಂಬಂಧ ದಹಲಿಯಲ್ಲಿ ಸರಣಿ ಸಭೆಗಳು ನಡೆಸಿದರೂ ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ಎನ್ನುವ ಸುಳಿವೂ ಸಹ ಸಿಗುತ್ತಿಲ್ಲ. ಇನ್ನು ಮಕ್ಕಳಿಗೆ ಟಿಕೆಟ್ ನಿರೀಕ್ಷೆಯಲ್ಲಿರುವ ಬಿಜೆಪಿ ಶಾಸಕರಿಗೆ ಮೋದಿ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು: ಬಿಜೆಪಿಯಲ್ಲಿನ ಹೆಚ್ಚಿನ ಶಾಸಕರು, ಸಂಸದರು ಒಂದಿಲ್ಲೊಂದು ರೀತಿಯಲ್ಲಿ ಕೌಟುಂಬಿಕ ರಾಜಕಾರಣದ (Family Politics) ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ಸದ್ಯ ಬಿಜೆಪಿಯಲ್ಲಿರುವ ಹೆಚ್ಚಿನ ಶಾಸಕರು ಮತ್ತು ಸಂಸದರು ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ತಮ್ಮ ಮಕ್ಕಳಿಗೆ ಪಕ್ಷದ ಟಿಕೆಟ್ ನಿರೀಕ್ಷಿಸುತ್ತಿದ್ದವರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಶಾಕ್ ಕೊಟ್ಟಿದ್ದಾರೆ. ಕುಟುಂಬ ರಾಜಕಾರಣ ವಿರೋಧಿಸಿ ರಾಷ್ಟ್ರ ರಾಜಕಾರಣದಲ್ಲಿ ಯಶಸ್ಸು ಕಂಡಿರುವ ಬಿಜೆಪಿ ಹೈಕಮಾಂಡ್, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಫ್ಯಾಮಿಲಿ ಪಾಲಿಟಿಕ್ಸ್ಗೆ ಕಡಿವಾಣ ಹಾಕಿ ಹೊಸ ಮುಖಗಳಿಗೆ ಮಣೆ ಹಾಕುವ ಚಿಂತನೆ ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಭಾನುವಾರ ನಡೆದ ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಬಿಜೆಪಿ ಶಾಸಕರ ಪುತ್ರರಿಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹೌದು.. ಪ್ರಧಾನಿ ನರೇಂದ್ರ ಮೋದಿ, ಕುಟುಂಬ ರಾಜಕೀಯದ ಕಡು ವಿರೋಧಿ. ಕರ್ನಾಟಕಕ್ಕೆ ಬಂದಾಗಲೆಲ್ಲ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಕಿಡಿಕಾರುವ ಮೋದಿ, ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಅಬ್ಬರಿಸಿದ್ದರು. ಆದ್ರೆ ಬಿಜೆಪಿ ಟಿಕೆಟ್ ಹಂಚಿಕೆಯಲ್ಲೂ ಈಗ ಕುಟುಂಬ ರಾಜಕೀಯವೇ ತಡೆಗೋಡೆಯಾಗಿ ನಿಂತಿದೆ. ಮಾಜಿ ಸಿಎಂ ಬಿಎಸ್ ಯಡಿಯೂಪ್ಪರಂತಹ ನಾಯಕರೇ ತಮ್ಮ ಮಕ್ಕಳಿಗೆ ಈ ಬಾರಿ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಮತ ವ್ಯಕ್ತಪಡಿಸಿಲ್ಲ. ಮೋದಿ ಅವರ ನಡೆಗೆ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಒಮ್ಮತ ಮೂಡಿಬರದ ಕಾರಣ ಪಟ್ಟಿ ಬಿಡುಗಡೆಗೆ ವಿಳಂಬವಾಗಿತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗುಜರಾತ್ ಹಾಗೂ ಉತ್ತರ ಪ್ರದೇಶದಂತೆ ಕರ್ನಾಟಕದಲ್ಲಿ ಯಾರೂ ಊಹಿಸದ ಅಚ್ಚರಿ ಅಭ್ಯರ್ಥಿಗಳಿಗೆ ಮಣೆ ಹಾಕಲು ಮೋದಿ ತಂತ್ರರೂಪಸಿದ್ದಾರೆ. ಇದಕ್ಕಾಗಿಯೇ ಕುಟುಂಬ ರಾಜಕಾರಣಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಸಮೀಕ್ಷೆಗಳ ಆಧಾರದ ಮೇಲೆ ಹಾಲಿ ಇರುವ ಹಲವು ಶಾಸಕರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಡುವೆ ಒಮ್ಮತಾಭಿಪ್ರಾಯದ ಕೊರತೆ ಉಂಟಾಗಿದೆ.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿಯ ಅತಿರಥ ಲಕ್ಷಣ್ ಸವದಿಗೆ ಕಾಂಗ್ರೆಸ್ ಗಾಳ
ಕಳೆದ ಶನಿವಾರದಿಂದ ಮೂರು ದಿನಗಳ ಕಾಲ ಸತತವಾಗಿ ಸಭೆ ನಡೆದರೂ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಡುವಿನ ಮಾತುಕತೆ ಅಪೂರ್ಣವಾಗಿದೆ. ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಬಳಿಯಿರುವ ಮಾಹಿತಿಗಳು ತಾಳೆಯಾಗುತ್ತಿಲ್ಲ. ತಮ್ಮದೇ ಸಂಪರ್ಕ ಜಾಲ ಮತ್ತು ಸಮೀಕ್ಷೆಗಳನ್ನು ಆಧರಿಸಿ ಮಾಹಿತಿ ಸಂಗ್ರಹಿಸಿರುವ ವರಿಷ್ಠರು ಅವುಗಳನ್ನು ಮುಂದಿಟ್ಟು ಹಾಲಿ ಶಾಸಕಕರು ಹಾಗೂ ಕುಟುಂಬ ರಾಜಕಾರಣಕ್ಕೆ ಕೊಕ್ ನೀಡುವ ಮೂಲಕ ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ನಡೆಸಿದಂಥ ರಾಜಕೀಯ ಪ್ರಯೋಗ ಮಾಡುವ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಕೇಳುತ್ತಿದ್ದಾರೆ. ಆದರೆ, ತಳಮಟ್ಟದ ಮಾಹಿತಿ ಹೊಂದಿರುವ ರಾಜ್ಯ ನಾಯಕರು ಇದಕ್ಕೆ ಸಮ್ಮತಿ ಸೂಚಿಸುತ್ತಿಲ್ಲ. ಉತ್ತರ ಭಾರತದ ರಾಜ್ಯಗಳಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ರೀತಿಯ ರಾಜಕೀಯ ಪ್ರಯೋಗ ಮಾಡುವುದು ಸರಿಯಾಗಲಿಕ್ಕಿಲ್ಲ. ಇದರಿಂದ ಹಾಲಿ ಶಾಸಕರು ಬಂಡಾಯದ ಬಾವುಟ ಹಾರಿಸಬಹುದು ಅಥವಾ ಮುನಿಸಿಕೊಂಡು ಪಕ್ಷಕ್ಕೆ ಧಕ್ಕೆ ಉಂಟು ಮಾಡಬಹುದು. ತೀರಾ ವರ್ಚಸ್ಸು ಕಳೆದುಕೊಂಡಿರುವ ಬೆರಳೆಣಿಕೆಯಷ್ಟು ಹಾಲಿ ಶಾಸಕರನ್ನು ಬೇಕಾದರೆ ಕೈಬಿಡಬಹುದು ಎಂಬ ಮಾತನ್ನು ರಾಜ್ಯ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.
ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಬಾರದು ಎನ್ನುವ ಸಿದ್ಧಾಂತ ಬದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಕೌಟಿಂಬಿಕ ಹಿನ್ನೆಲೆ ಇದ್ದವರಿಗೆ ಟಿಕೆಟ್ ನೀದದಿದ್ದರೆ ಚುನಾವಣೆಯಲ್ಲಿ ಸೋಲನುವಿಸುವುದು ನಿಶ್ಚಯ ಎಂದು ರಾಜ್ಯ ನಾಯಕರ ಮಾತು. ಆದ್ರೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣದ ವಿರೋಧಿಯಾಗಿದ್ದು ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡದೇ ಪಕ್ಷ ಸಂಘಟಿಸಿ ಅಧಿಕಾರಿಕ್ಕೆ ತರಬೇಕೆನ್ನುವ ಆಶಯದಿಂದ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಬೇಕೆನ್ನುವುದು ಮೋದಿ ಅವರ ಇರಾದೆಯಾಗಿದೆ.
ಬಿಜೆಪಿಯ ಉದ್ದೇಶ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ಎಂದು ಹೇಳುವ ಮೋದಿ, ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ಕಡು ವಿರೋಧಿ. ಈ ಎರಡು ಟ್ರಂಪ್ ಕಾರ್ಡ್ಗಳಿಂದಲೇ ಮೋದಿ ಜನಸಾಮಾನ್ಯರ ಮೆಚ್ಚುಗೆ ಕಾರಣರಾಗಿದ್ದಾರೆ. ಅಲ್ಲದೇ ಅವರ ಜನಪ್ರಿಯತೆ ಸಹ ಹೆಚ್ಚಿದೆ. ಈ ಎರಡು ಬಾಣಗಳಿಂದಲೇ ಚುನಾವಣೆಗಳಲ್ಲಿ ಜನರ ಮೂಲಕವೇ ವಿರೋಧ ಪಕ್ಷಗಳಿಗೆ ಸೋಲಿನ ರುಚಿ ತೋರಿಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಆರ್ಜೆಡಿ, ಎಸ್ಪಿ, ಡಿಎಂಕೆ ಸೇರಿದಂತೆ ದೇಶದಲ್ಲಿ ಇತರೆ ಪಕ್ಷಗಳು ಕುಟುಂಬ ರಾಜಕಾರಣದಲ್ಲಿ ಮುಳುಗಿವೆ. ಅಲ್ಲದೇ ಒಂದಿಲ್ಲೊಂದು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲಾ ಅಂಶಗಳನ್ನು ಜನರ ಮುಂದೆ ಇಟ್ಟು ವಿರೋಧ ಪಕ್ಷಗಳನ್ನು ಮಣಿಸುವಲ್ಲಿ ಮೋದಿ ಯಶಸ್ವಿಯಾಗುತ್ತಿದ್ದಾರೆ.
ಕುಟುಂಬ ರಾಜಕಾರಣ ವಿರೋಧಿಸಿ ರಾಷ್ಟ್ರ ರಾಜಕಾರಣದಲ್ಲಿ ಯಶಸ್ಸು ಕಂಡಿರುವ ಬಿಜೆಪಿಗೆ ರಾಜ್ಯದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ಗೆ ಕಡಿವಾಣ ಹಾಕಿ ಅದನ್ನು ರಾಜಕೀಯವಾಗಿ ದಕ್ಕಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:16 pm, Tue, 11 April 23