JDS Ticket Fight: ಸಾಮಾನ್ಯ ಕಾರ್ಯಕರ್ತ ಅಂದ್ರೆ ಯಾರು; ಎಚ್ಡಿಕೆ ಉದ್ದೇಶಿಸಿ ರೇವಣ್ಣ ಪ್ರಶ್ನೆ
ವಿಧಾನಸಭೆ ಚುನಾವಣೆಗೆ ಹಾಸಕ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ನಲ್ಲಿ (JDS) ಸೃಷ್ಟಿಯಾಗಿರುವ ಭಿನ್ನಮತ ಮತ್ತಷ್ಟು ತಾರಕಕ್ಕೇರಿದೆ.
ಹಾಸನ: ವಿಧಾನಸಭೆ ಚುನಾವಣೆಗೆ ಹಾಸಕ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ನಲ್ಲಿ (JDS) ಸೃಷ್ಟಿಯಾಗಿರುವ ಭಿನ್ನಮತ ಮತ್ತಷ್ಟು ತಾರಕಕ್ಕೇರಿದೆ. ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್ ನೀಡಲಾಗುವುದು ಎಂಬ ಹೇಳಿಕೆಗೆ ಬದ್ಧ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಹೆಚ್ಡಿ ರೇವಣ್ಣ (HD Revanna) ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆನೆಕೆರೆ ಗ್ರಾಮದಲ್ಲಿ ಮಾತನಾಡಿದ ರೇವಣ್ಣ, ಹೆಚ್ಡಿ ಕುಮಾರಸ್ವಾಮಿಯನ್ನು ಉದ್ದೇಶಿಸಿ ಪರೋಕ್ಷವಾಗಿ ಸಾಮಾನ್ಯ ಕಾರ್ಯಕರ್ತ ಅಂದರೆ ಯಾರು ಎಂದು ಪ್ರಶ್ನಿಸಿದ್ದಾರೆ. ಪಕ್ಷದಿಂದ ಯಾವ ಫಲವನ್ನೂ ಪಡೆಯದವನು ಸಾಮಾನ್ಯ ಕಾರ್ಯಕರ್ತ. ಹೆಚ್ಡಿ ದೇವೇಗೌಡರಿಗೆ ಹಾಸನ ಜಿಲ್ಲೆಯ ಬಗ್ಗೆ ಎಲ್ಲವೂ ಗೊತ್ತು. ಅವರು ಹೇಳಿದಂತೆ ನಾವು ಕೇಳುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.
ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂಬುದೇ ನಮ್ಮ ಉದ್ದೇಶ. ಸಾಮಾನ್ಯ ಕಾರ್ಯಕರ್ತ ಯಾರು ಎಂಬುದನ್ನು ದೇವೇಗೌಡರು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಯಾಕೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿ. ನನ್ನ ಕ್ಷೇತ್ರ ಹೊಳೆನರಸೀಪುರ, ಆ ಜನ ನನ್ನನ್ನು 30 ವರ್ಷ ಸಾಕಿದ್ದಾರೆ ಎಂದು ಹೇಳಿದ್ದಾರೆ.
ದೇವೇಗೌಡರಿಗೆ ಅರವತ್ತು ವರ್ಷಗಳ ಅನುಭವ ಇದೆ. ಸೋಲು ಗೆಲುವು ಎರಡನ್ನೂ ಕಂಡಿದ್ದಾರೆ. ಅವರ ಆಶೀರ್ವಾದದಿಂದ ಇಪ್ಪತ್ತೈದು ವರ್ಷ ಎಂಎಲ್‌ಎ ಆಗಿದ್ದೀನೆ. ಪ್ರಜ್ವಲ್ ಸಂಸದರಾಗಿದ್ದಾರೆ, ಭವಾನಿ ಜಿ.ಪಂ. ಸದಸ್ಯರಾಗಿದ್ದಾರೆ, ಸೂರಜ್ ಎಂಎಲ್‌ಸಿ ಆಗಿದ್ದಾರೆ. ದೇವೇಗೌಡರ ತೀರ್ಮಾನವೇ ಅಂತಿಮ ಎಂದು ರೇವಣ್ಣ ಪುನರುಚ್ಚರಿಸಿದ್ದಾರೆ.
ಈ ಮಧ್ಯೆ ಟಿಕೆಟ್ ಫೈಟ್ ವಿಚಾರವಾಗಿ ಮಾತನಾಡಿದ ಸೂರಜ್ ರೇವಣ್ಣ, ಆ ಬಗ್ಗೆ ನಾನೇನೂ ಹೇಳಲಾಗದು. ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ದೊಡ್ಡವರು ನಿರ್ಧಾರ ಕೈಗೊಳ್ಳುತ್ತಾರೆ. ದೇವೇಗೌಡರನ್ನು ರೇವಣ್ಣ ಭೇಟಿ ಮಾಡಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಆನೆಕೆರೆ ನಮ್ಮ ಹೋಬಳಿಗೆ ಬರುವುದರಿಂದ ಇಲ್ಲಿನ ಜಾತ್ರೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೆ. ಹಾಗಾಗಿ ದೇವೇಗೌಡರನ್ನು ರೇವಣ್ಣ ಭೇಟಿಯಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ನಾನು ಟಿವಿನೇ ನೋಡ್ತಿಲ್ಲ. ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಈಡೇರಿಸುವುದಷ್ಟೇ ನನ್ನ ಉದ್ದೇಶ. ಅಭಿವೃದ್ಧಿ ಮುಂದಿಟ್ಟುಕೊಂಡು ಜನರ ಬಳಿ ಹೋಗಿ ಅಂದಿದ್ದಾರೆ, ಅದನ್ನು ಬಿಟ್ಟರೆ ನನಗೆ ಬೇರೆನೂ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Tue, 11 April 23