HD Revanna: ಅಲ್ಪಸಂಖ್ಯಾತರಿಗೆ ಗುತ್ತಿಗೆ ಕೊಟ್ಟಿಲ್ಲ, ಕಲ್ಯಾಣಮಂಟಪ ಹೆಸರಲ್ಲೂ ಲೂಟಿ; ಶಿವಲಿಂಗೇಗೌಡ ವಿರುದ್ಧ ರೇವಣ್ಣ ವಾಗ್ದಾಳಿ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಾಸನ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಬೆನ್ನಲ್ಲೇ ಅವರ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ತೀವ್ರಗೊಳಿಸಿದ್ದಾರೆ.

Follow us
Ganapathi Sharma
|

Updated on:Mar 14, 2023 | 8:49 PM

ಹಾಸನ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಾಸನ (Hassan) ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಬೆನ್ನಲ್ಲೇ ಅವರ ವಿರುದ್ಧ ಜೆಡಿಎಸ್ (JDS) ನಾಯಕರು ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಅರಸೀಕೆರೆ ಕೌನ್ಸಿಲರ್ ಒಬ್ಬರು ಶಾಸಕ ಶಿವಲಿಂಗೇಗೌಡರ ಪಾಲುದಾರರು. ಕ್ಷೇತ್ರದಲ್ಲಿ ಎಲ್ಲಾ ಗುತ್ತಿಗೆ ಕಾಮಗಾರಿಯನ್ನು ಇವರು ಇಬ್ಬರೇ ಮಾಡುತ್ತಾರೆ. ಅಲ್ಪಸಂಖ್ಯಾತರಿಗೆ ಯಾವುದೇ ಗುತ್ತಿಗೆ ಕೊಟ್ಟಿಲ್ಲ. ಕಲ್ಯಾಣಮಂಟಪದ ಹೆಸರಲ್ಲೂ ಶಿವಲಿಂಗೇಗೌಡ ಹಣ ಹೊಡೆದಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್​ಡಿ ರೇವಣ್ಣ (HD Revanna) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಸೀಕೆರೆಯಲ್ಲಿ ಪಂಚರತ್ನಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ಪಕ್ಷ ದ್ರೋಹಿಗಳನ್ನು (ಶಿವಲಿಂಗೇಗೌಡ) ಮನೆಗೆ ಕಳುಹಿಸಬೇಕು. 15 ವರ್ಷ ಅವರನ್ನು ಶಾಸಕರನ್ನಾಗಿ ಮಾಡಿ ನಾವು ಅನುಭವಿಸುತ್ತಿದ್ದೇವೆ. ಏನೇನು ಮಾಡಿದ್ದಾರೆಂದು ತಾಕತ್ ಇದ್ದರೆ ಹೇಳಲಿ, ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದಾರೆ.

ಶಿವಲಿಂಗೇಗೌಡರ ಚರಿತ್ರೆ ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ಇವರಿಗೆ ಮಾನ, ಮರ್ಯಾದೆ ಇದೆಯಾ? ಅರಸೀಕೆರೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡಿರುವ ವ್ಯಕ್ತಿ. ಈ ಬಾರಿ ಕುಮಾರಣ್ಣನ ಸರ್ಕಾರ ಬರುವುದನ್ನು ತಪ್ಪಿಸಲು ಆಗುವುದಿಲ್ಲ. 2 ವರ್ಷಗಳಿಂದ ಜೆಡಿಎಸ್​ನಲ್ಲೇ ಇರುತ್ತೇನೆ ಎಂದು ಆಣೆ ಬೇರೆ ಮಾಡಿದ್ದರು. ಎಲ್ಲೂ ಹೋಗಲ್ಲ ದೇವರಾಣೆ, ನಮ್ಮ ತಾಯಾಣೆ, ಅಪ್ಪನಾಣೆ ಅಂದಿದ್ದರು. ಮಾನ, ಮರ್ಯಾದೆ ಇದ್ದಿದ್ದರೆ ಅವತ್ತೇ ರಾಜೀನಾಮೆ ಕೊಡಬೇಕಿತ್ತು. ಇನ್ನೂ ಮಾರ್ಚ್ 21ರವರೆಗೆ ಜೆಡಿಎಸ್ ಹೆಸರಲ್ಲಿ ಲೂಟಿ ಮಾಡಲಿದ್ದಾರೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

ಇಡೀ ದೇಶದಲ್ಲಿ ಕಾಂಗ್ರೆಸ್ ಟೋಪಿ ಹಾಕಿ ಮುಳುಗಿ ಹೋಗಿದೆ. ಇನ್ನು ಇವರ ಚರಿತ್ರೆಗಳು ಏನೇನಿದೆ ಎಂಬುದನ್ನು ದಾಖಲೆ ಸಮೇತ ಜಾಲಾಡ್ತೀನಿ. ಇಂತಹ ಕಳ್ಳರನ್ನು ಮನೆಗೆ ಕಳುಹಿಸುತ್ತೇನೆ ಎಂದು ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: JDSನಲ್ಲಿ ಟಿಕೆಟ್​ ಗೊಂದಲ ಮೇಲ್ನೋಟಕ್ಕೆ ಮಾತ್ರ ಕಾಣುತ್ತಿದೆ, ಆದರೆ ಒಳಗೆ ಬೇರೆಯೇ ಇದೆ ಎಂದ ಬಂಡೆಪ್ಪ ಕಾಶಂಪುರ್​

ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ರಸ್ತೆಗಳಿಗೆ ಎಷ್ಟು ಹಣ ಕೊಟ್ಟಿದ್ದೇವೆ, ಆ ಹಣದ ಕಾಮಗಾರಿಯನ್ನು ಯಾರು ಗುತ್ತಿಗೆ ಪಡೆದದ್ದು ಎಂಬುದನ್ನು ಶಿವಲಿಂಗೇಗೌಡ ಹೇಳಬೇಕಾಗುತ್ತದೆ. ಬಿಜೆಪಿ ಮುಖಂಡರು ರಾಗಿ ಕಳ್ಳ ಅಂದಿದ್ದಕ್ಕೆ ಮಂಜುನಾಥ ಸ್ವಾಮಿ ಬಳಿ ಹೋಗಿ ಪ್ರಮಾಣ ಮಾಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಬಿಡುಗಡೆ ಮಾಡಿದ್ದ ಹಣದ ಕಾಮಗಾರಿ ಯಾರಿಗೆ ಗುತ್ತಿಗೆ ಕೊಟ್ಟಿದ್ದರು ಎಂಬುದನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಲು ತಾಕತ್ ಇದೆಯಾ ಎಂದು ಶಿವಲಿಂಗೇಗೌಡ ಅವರನ್ನು ರೇವಣ್ಣ ಪ್ರಶ್ನಿಸಿದ್ದಾರೆ.

ಶಿವಲಿಂಗೇಗೌಡ ಹೆಂಡತಿ ಹೆಸರಲ್ಲಿ ಯಾವ್ಯಾವ ರೀತಿ ದುಡ್ಡು ಮಾಡುತ್ತಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಎಳೆಎಳೆಯಾಗಿ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ. ಅರಸೀಕೆರೆ ಜನಕ್ಕೆ ದುಡ್ಡು ಕೊಡಬೇಕು ಮತಚಲಾಯಿಸಲು ಎಂದು ಅವರು ಹೇಳುತ್ತಾರೆ. ಹಾಗಿದ್ದರೆ ಹದಿನೈದು ವರ್ಷದಿಂದ ದುಡ್ಡಿಗೆ ಮತದಾನ ಮಾಡುತ್ತಿದ್ದರಾ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

ಎಲ್ಲೋ ಇದ್ದ ಶಿವಲಿಂಗೇಗೌಡನನ್ನು ಕರೆದುಕೊಂಡು ಬಂದು ಹದಿನೈದು ವರ್ಷ ರಾಜಕೀಯವಾಗಿ ಶಕ್ತಿ ಕೊಟ್ಟಂತಹ ದೇವೇಗೌಡರ ಬಗ್ಗೆಯೇ ಈಗ ಕೀಳು ಮಟ್ಟಕ್ಕೆ ಮಾತನಾಡುತ್ತಾರೆ. ಅರಸೀಕೆರೆಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಿದ್ದು ಯಾರೆಂಬ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ರೇವಣ್ಣ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 pm, Tue, 14 March 23