JDSನಲ್ಲಿ ಟಿಕೆಟ್ ಗೊಂದಲ ಮೇಲ್ನೋಟಕ್ಕೆ ಮಾತ್ರ ಕಾಣುತ್ತಿದೆ, ಆದರೆ ಒಳಗೆ ಬೇರೆಯೇ ಇದೆ ಎಂದ ಬಂಡೆಪ್ಪ ಕಾಶಂಪುರ್
ಯಾವುದೇ ಗೊಂದಲವಿಲ್ಲದೆ ಹಾಸನ ಟಿಕೆಟ್ ಸಮಸ್ಯೆ ಬಗೆಹರಿಯುತ್ತೆ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಚರ್ಚಿಸಿ ಬಗೆಹರಿಸುತ್ತಾರೆ ಎಂದು JDS ಶಾಸಕ ಬಂಡೆಪ್ಪ ಕಾಶಂಪುರ್ ಹೇಳಿದ್ದಾರೆ.
ಬೀದರ್: ಹಾಸನ ಜೆಡಿಎಸ್ ಟಿಕೆಟ್ ಯಾರಿಗೆ ಎಂಬ ಕಗ್ಗಂಟು ದಿನೇ ದಿನೇ ಮತ್ತಷ್ಟು ಜಟಿಲವಾಗುತ್ತಿದೆ. ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎನ್ನುತ್ತಾ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy), ಸ್ವರೂಪ್ ಪರ ಬ್ಯಾಟ್ ಬೀಸ್ತಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣರ ಕಣ್ಣು ಕೆಂಪಾಗಿಸಿತ್ತು. ಭವಾನಿಯೇ JDS ಅಭ್ಯರ್ಥಿ ಎಂದು ಬಿಂಬಿಸಿಲು ರೇವಣ್ಣ ಫ್ಯಾಮಿಲಿ ಅಬ್ಬರದ ಪ್ರಚಾರಕ್ಕೂ ಇಳಿದಿತ್ತು. ಇವೆಲ್ಲವೂ ನನಗೆ ಅಗ್ನಿಪರೀಕ್ಷೆ ಎಂದು ಕುಮಾರಸ್ವಾಮಿ ಹೇಳಿದ್ದರು. ಸದ್ಯ ಈ ವಿಚಾರವಾಗಿ ಬೀದರ್ನ ಕಾಶೆಂಪುರ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿರುವ JDS ಶಾಸಕ ಬಂಡೆಪ್ಪ ಕಾಶಂಪುರ್(bandeppa kashempur), ಯಾವುದೇ ಗೊಂದಲವಿಲ್ಲದೆ ಹಾಸನ ಟಿಕೆಟ್ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳಿದ್ದಾರೆ.
ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಚರ್ಚಿಸಿ ಬಗೆಹರಿಸುತ್ತಾರೆ. ಜೆಡಿಎಸ್ನಲ್ಲಿ ಮಾತ್ರ ಟಿಕೆಟ್ ಗೊಂದಲ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಬೇರೆ ಪಕ್ಷಗಳಲ್ಲಿ ಒಳಗೊಳಗೆ ಗೊಂದಲವಿದೆ. ಜೆಡಿಎಸ್‌ನ ಮೂಲ ಕಾರ್ಯಕರ್ತರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಎಲ್ಲರೂ ಒಂದಾಗಿ ಪಕ್ಷ ಬೆಳೆಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ ಎಂದರು.
ಸಾಮಾನ್ಯ ಕಾರ್ಯಕರ್ತನಿಗೆ ಹಾಸನದ ಟಿಕೆಟ್: ಕುಮಾರಸ್ವಾಮಿ
ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಆ ಮಾತಿಗೆ ನಾನು ಬದ್ದನಾಗಿದ್ದೇನೆ. ಆದರೆ ಎಲ್ಲರೂ ಒಂದಾಗಿ ಹೋಗಬೇಕಿದೆ. ಯಾವುದೇ ಕಾರಣದಿಂದ ಒಡಕು ಇರಬಾರದು. ನಾನು ಕೈಗೊಳ್ಳುವ ತೀರ್ಮಾನಕ್ಕೆ ಒಂದೇ ಧ್ವನಿಯಾಗಿ ಇರಬೇಕು. ನಾವು ಉಳಿದಿರುವುದೆ ನಿಮ್ಮಂತ ಲಕ್ಷಾಂತರ ಕಾರ್ಯಕರ್ತರ ಬಲದಿಂದ, ಅದು ನನಗೆ ಗೊತ್ತಿದೆ. ಮತ್ತೊಮ್ಮೆ ಹಾಸನದ ನೆಲದಲ್ಲಿ ನಿಂತು ಹಾಸನದ ಟಿಕೆಟ್ ಕಾರ್ಯಕರ್ತನಿಗೆ ಎಂದು ಹೇಳಿದರು.
ಇದನ್ನೂ ಓದಿ: ಹಾಸನ ಟಿಕೆಟ್ ಫೈಟ್: ಹಾಸನ ಅಖಾಡದಲ್ಲಿ ಕ್ಷಣಕ್ಕೊಂದು ತಿರುವು, ದಿನಕ್ಕೊಂದು ಬೆಳವಣಿಗೆ, ಹೆಚ್ಡಿಕೆಗೆ ದೊಡ್ಡಗೌಡ್ರ ಖಡಕ್ ಸೂಚನೆ
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ ಫೈಟ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ತೆಗೆದುಕೊಳ್ಳಲ್ಲ. ನಿಮ್ಮ ಛಲಕ್ಕೆ ಲೋಪ ಆಗಲು ನಾನು ಬಿಡುವುದಿಲ್ಲ. ನನ್ನ ಕಾರ್ಯಕರ್ತರನ್ನು ನಾನು ಬಿಟ್ಟುಕೊಡುವುದಿಲ್ಲ ಸಕಾರಾತ್ಮಕವಾಗಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲವೇ ದಿನಗಳಲ್ಲಿ ಜೆಡಿಎಸ್‌ನ ಎರಡನೇ ಪಟ್ಟಿ ಪ್ರಕಟ ಆಗುತ್ತದೆ. ಎರಡನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಕೂಡ ಇರುತ್ತದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:38 pm, Mon, 27 February 23