ಅದೃಷ್ಟದ ಬೆನ್ನುಹತ್ತಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ಅಲ್ಲಿ ಮಾಡಿರುವುದೇನು?
Dakshina Kannada BJP: ಈ ಬಾರಿಯೂ ಸಹ ಹಳೆ ಮನೆಯನ್ನೆ ಚುನಾವಣಾ ಕಚೇರಿ ಮಾಡಲು ಸಿದ್ದತೆ ನಡೆಸಿದ್ದು, ಹಳೆ ಮನೆಯ ಮುಂದೆ ಬಿಜೆಪಿ ಬಂಟಿಂಗ್ಸ್ ರಾರಾಜಿಸತೊಡಗಿದೆ. ಹಳೆ ಮನೆಗೆ ಸುಣ್ಣ ಬಣ್ಣ ಬಳಿದು ಶೃಂಗಾರ ಮಾಡಲಾಗಿದೆ.
ಮಂಗಳೂರು: ಹಾಲಿ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಅದೃಷ್ಟ ಲೆಕ್ಕಾಚಾರದ ಬೆನ್ನುಹತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅದೃಷ್ಟದ (Luck) ಕಾರಣಕ್ಕಾಗಿಯೇ ಹಳೆ ಮನೆಯನ್ನೇ ತನ್ನ ಚುನಾವಣಾ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದೆ. ಕಳೆದ ಬಾರಿಯಂತೆ ಹಳೆ ಮನೆಯನ್ನೆ ಜಿಲ್ಲಾ ಚುನಾವಣಾ ಕಚೇರಿ ಮಾಡಲು ಬಿಜೆಪಿ ಸಿದ್ದತೆ ನಡೆಸಿದ್ದು, ಹಳೆಯ ಮನೆಗೆ ಸುಣ್ಣಬಣ್ಣಗಳಿಂದ ಸಿಂಗರಿಸುವ ಕೆಲಸ ಪ್ರಗತಿಯಲ್ಲಿದೆ. ಅಂದಹಾಗೆ, ಮಂಗಳೂರು ನಗರದ (Mangalore) ಬಂಟ್ಸ್ ಹಾಸ್ಟೆಲ್ ನಲ್ಲಿರುವ ಉದ್ಯಮಿಯೊಬ್ಬರಿಗೆ ಸೇರಿದ ಹಳೆಯ ಮನೆ ಇದಾಗಿದೆ.
2004 ರಿಂದ ಹೆಚ್ಚಿನ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಬಿಜೆಪಿಗೆ ಅದೃಷ್ಟದ ಕಚೇರಿಯಾಗಿರುವ ಹಳೆಯ ಮನೆ ಇದಾಗಿದೆ. ಆದ್ರೆ 2013ರಲ್ಲಿ ಕಚೇರಿ ಬದಲಿಸಿ ಬಿಜೆಪಿಗೆ ಅದೃಷ್ಟ ಕೈ ಕೊಟ್ಟಿತ್ತು. ಹಳೆ ಮನೆಯ ಬದಲು ಜಿಲ್ಲಾ ಬಿಜೆಪಿ ಕಚೇರಿ ಬಳಿಯೇ ಬಿಜೆಪಿ ತನ್ನ ಚುನಾವಣಾ ಕಚೇರಿ ತೆರೆದಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ 7 ರಲ್ಲಿ ಸೋತು ಮಕಾಡೆ ಮಲಗಿತ್ತು ಇದೇ ಬಿಜೆಪಿ.
2014ರ ಲೋಕಸಭಾ ಚುನಾವಣೆ ವೇಳೆಗೆ ಹಳೆಯ ಮನೆಗೇ ಬಿಜೆಪಿ ತನ್ನ ಚುನಾವಣಾ ಕಚೇರಿಯನ್ನು ಶಿಫ್ಟ್ ಮಾಡಿಕೊಂಡಿತ್ತು. ಅದಕ್ಕೆ ತಕ್ಕಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಹಳೆ ಮನೆಯಲ್ಲೇ ಚುನಾವಣಾ ಕಚೇರಿ ತೆರೆದು, ಚುನಾವಣೆಯನ್ನು ಎದುರಿಸಿತ್ತು. ಬಿಜೆಪಿ ಆಗ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಭರ್ಜರಿ ಜಯ ಸಾಧಿಸಿತ್ತು.
Also read: ಗೋಕಾಕ್‌ನಲ್ಲಿ ‘ಸರ್ವಾಧಿಕಾರಿ’ ರಮೇಶ್ ಜಾರಕಿಹೊಳಿ ಸೋಲಿಸಲು ಒಂದಾದ ಕಾಂಗ್ರೆಸ್ ಟಿಕೆಟ್ ವಂಚಿತರು!
ಈ ಬಾರಿಯೂ ಸಹ ಹಳೆ ಮನೆಯನ್ನೆ ಚುನಾವಣಾ ಕಚೇರಿ ಮಾಡಲು ಸಿದ್ದತೆ ನಡೆಸಿದ್ದು, ಹಳೆ ಮನೆಯ ಮುಂದೆ ಬಿಜೆಪಿ ಬಂಟಿಂಗ್ಸ್ ರಾರಾಜಿಸತೊಡಗಿದೆ. ಹಳೆ ಮನೆಗೆ ಸುಣ್ಣ ಬಣ್ಣ ಬಳಿದು ಶೃಂಗಾರ ಮಾಡಲಾಗಿದೆ. ಭರದಿಂದ ಸಾಗಿದ ಚುನಾವಣಾ ಕಚೇರಿ ಸಿದ್ಧತಾ ಕಾರ್ಯ ಮುಂದುವರಿದಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಚುನಾವಣಾ ಕಚೇರಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಈ ಬಾರಿಯೂ ಹಳೆಯ ಮನೆ ಬಿಜೆಪಿಗೆ ಅದೃಷ್ಟ ತಂದುಕೊಡುತ್ತಾ ಎಂಬ ಕುತೂಹಲಕ್ಕೆ ಮೇ 13 ರಂದು ಮತ ಎಣಿಕೆ ದಿನವಾದ ಶನಿವಾರ ತೆರೆಬೀಳಲಿದೆ.
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:04 pm, Tue, 11 April 23