AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಕಾಕ್‌ನಲ್ಲಿ ‘ಸರ್ವಾಧಿಕಾರಿ’ ರಮೇಶ್ ಜಾರಕಿಹೊಳಿ ಸೋಲಿಸಲು ಒಂದಾದ ಕಾಂಗ್ರೆಸ್​​ ಟಿಕೆಟ್ ವಂಚಿತರು! ಬಂಡಾಯದ ಅಶೋಕ ಪೂಜಾರಿ ನಡೆ ನಿಗೂಢ

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಿದ್ದ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಕಾಂಗ್ರೆಸ್ ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ನಾಲ್ಕು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಶೋಕ್ ಪೂಜಾರಿ ಬದಲಿಗೆ ಪಂಚಮಸಾಲಿ ಸಮುದಾಯದ ಡಾ. ಮಹಾಂತೇಶ ಕಡಾಡಿಗೆ ಟಿಕೆಟ್ ನೀಡಿದೆ‌.

ಗೋಕಾಕ್‌ನಲ್ಲಿ ‘ಸರ್ವಾಧಿಕಾರಿ’ ರಮೇಶ್ ಜಾರಕಿಹೊಳಿ ಸೋಲಿಸಲು ಒಂದಾದ ಕಾಂಗ್ರೆಸ್​​ ಟಿಕೆಟ್ ವಂಚಿತರು! ಬಂಡಾಯದ ಅಶೋಕ ಪೂಜಾರಿ ನಡೆ ನಿಗೂಢ
ರಮೇಶ್ ಜಾರಕಿಹೊಳಿ ಸೋಲಿಸಲು ಒಂದಾದ ಕಾಂಗ್ರೆಸ್​​ ಟಿಕೆಟ್ ವಂಚಿತರು! Image Credit source: theweek
TV9 Web
| Updated By: ಸಾಧು ಶ್ರೀನಾಥ್​|

Updated on:Apr 11, 2023 | 1:29 PM

Share

ಹಾಲಿ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಗೋಕಾಕ ಸಾಹುಕಾರ್ ರಮೇಶ್ ಜಾರಕಿಹೊಳಿ (Ramesh Jarkiholi) ಸೋಲಿಸಲು ಕಾಂಗ್ರೆಸ್ (Gokak Congress) ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು, ಪಂಚಮಸಾಲಿ ಸಮುದಾಯದ ಡಾ‌. ಮಹಾಂತೇಶ ಕಡಾಡಿಗೆ ಟಿಕೆಟ್ ನೀಡಿದೆ‌. ಇತ್ತ ಟಿಕೆಟ್ ಕೈ ತಪ್ಪಿದ್ದಕ್ಕೆ ಅಶೋಕ್ ಪೂಜಾರಿ ಅಸಮಾಧಾನಗೊಂಡು (Rebels) ಸಭೆ ನಡೆಸಿದ್ದು ಏಪ್ರಿಲ್ 18ರಂದು ತಮ್ಮ ನಿರ್ಧಾರ ತಿಳಿಸೋದಾಗಿ ಹೇಳಿದ್ದಾರೆ. ಮತ್ತೊಂದೆಡೆ ಇತರೆ ಕಾಂಗ್ರೆಸ್ ಟಿಕೆಟ್ ವಂಚಿತರು, ಅಧಿಕೃತ ಅಭ್ಯರ್ಥಿ ಒಂದಾಗಿದ್ದು ಒಕ್ಕೊರಲಾಗಿ ಅಶೋಕ್ ಪೂಜಾರಿಗೆ ಮನವಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ನೋಡಿ.

ಹೌದು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಿದ್ದ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಕಾಂಗ್ರೆಸ್ ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ನಾಲ್ಕು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಶೋಕ್ ಪೂಜಾರಿ ಬದಲಿಗೆ ಪಂಚಮಸಾಲಿ ಸಮುದಾಯದ ಡಾ. ಮಹಾಂತೇಶ ಕಡಾಡಿಗೆ ಟಿಕೆಟ್ ನೀಡಿದೆ‌. ಇದರಿಂದ ಅಸಮಾಧಾನಗೊಂಡಿರುವ ಅಶೋಕ್ ಪೂಜಾರಿ ಗೋಕಾಕ್‌ನ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ರು.

ಈ ವೇಳೆ ಟಿವಿ9 ಜೊತೆ ಮಾತನಾಡಿದ ಅಶೋಕ್ ಪೂಜಾರಿ ಇಂದು ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುವೆ. ಇನ್ನು ಏಳು ದಿನಗಳ ಕಾಲ ಗೋಕಾಕ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಜನಾಭಿಪ್ರಾಯ ಸಂಗ್ರಹಿಸುವೆ. ಏಪ್ರಿಲ್ 18ರಂದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇನ್ನು ತಾವು ಒಂದೇ ಪಕ್ಷಕ್ಕೆ ಒಂದೇ ವಿಚಾರಧಾರೆಯಡಿ ರಾಜಕಾರಣ ಮಾಡಿಲ್ಲ. ಗೋಕಾಕ್‌ನಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಬದಲಾವಣೆಗೆ ಹೋರಾಡಿದ್ದೇನೆ. ಅದಕ್ಕೆ ಪೂರಕವಾಗಿ ಯಾವ್ಯಾವ ಪಕ್ಷ ಸ್ಪಂದನೆ ಮಾಡಿದೆ ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ ಎಂದೂ ಸಹ ತಿಳಿಸಿದ್ದಾರೆ.

ಇತ್ತ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿಗೆ ಅಶೋಕ್ ಪೂಜಾರಿ ಹೊರತು ಪಡಿಸಿ ಇತರೆ ಕಾಂಗ್ರೆಸ್ ಟಿಕೆಟ್ ವಂಚಿತರು ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತರ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಡಾ.ಮಹಾಂತೇಶ ಕಡಾಡಿ, ‘ನಾನು ಅಶೋಕ್ ಪೂಜಾರಿಯವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವೆ. ಗೋಕಾಕ್‌ನಲ್ಲಿ ಬದಲಾವಣೆ ಮಾಡಬೇಕೆಂಬ ಗುರಿ ಇದೆ‌. ಅಶೋಕ್ ಪೂಜಾರಿ ಬೆಂಬಲಿಸುವ ವಿಶ್ವಾಸವಿದೆ ಎಂದಿದ್ದಾರೆ. ಇನ್ನು ಟಿಕೆಟ್ ವಂಚಿತ ಪ್ರಕಾಶ್ ಬಾಗೋಜಿ ಮಾತನಾಡಿ, ರಮೇಶ್ ಜಾರಕಿಹೊಳಿ ಸೋಲಿಸೋದೆ ಒನ್ ಪಾಯಿಂಟ್ ಅಜೆಂಡಾ. ಮೊಟ್ಟ ಮೊದಲ ಬಾರಿಗೆ ಗೋಕಾಕ್‌ನಲ್ಲಿ ಪಂಚಮಸಾಲಿ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಗೋಕಾಕ್‌ನಲ್ಲಿ ದುಷ್ಟಶಕ್ತಿ ಹೊಡೆಯಬೇಕೆಂಬ ಗುರಿ ಇದೆ. ಚುನಾವಣೆ ನೇತೃತ್ವ ವಹಿಸಿಕೊಂಡು ಅಶೋಕ್ ಪೂಜಾರಿ ಕಿಂಗ್ ಮೇಕರ್ ಆಗಬೇಕು. ಅವರ ಕಾಲು ಮುಗಿದು ನಮ್ಮ ಜೊತೆ ಕರೆ ತರ್ತೀವಿ ಎಂದಿದ್ದಾರೆ.

ಒಟ್ಟಾರೆಯಾಗಿ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಸೋಲಿಸಲು ಒಂದಾಗಿರುವ ಟಿಕೆಟ್ ವಂಚಿತರು ಅಶೋಕ್ ಪೂಜಾರಿಗೂ ಸಹ ಮನವಿ ಮಾಡಿದ್ದಾರೆ. ಒಂದು ವೇಳೆ ಅಶೋಕ ಪೂಜಾರಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮಹಾಂತೇಶ ಕಡಾಡಿಗೆ ಬೆಂಬಲ ನೀಡಿದ್ರೆ ಮತ್ತಷ್ಟು ಕಾಂಗ್ರೆಸ್‌ಗೆ ಬಲ ಬರೋದಂತೂ ಸತ್ಯ. ಸದ್ಯ ಅಶೋಕ್ ಪೂಜಾರಿ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೇಕು.

ವರದಿ: ಮಹಾಂತೇಶ ಕುರಬೇಟ್, ಟಿವಿ9, ಬೆಳಗಾವಿ

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

 

Published On - 1:27 pm, Tue, 11 April 23