ಬೀದರ್: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಂಥ ಮಹಾಪುರುಷರನ್ನೂ ಕಾಂಗ್ರೆಸ್ ನಿಂದಿಸಿತ್ತು. ಬಾಬಾ ಸಾಹೇಬ್ ಅವರನ್ನು ಕಾಂಗ್ರೆಸ್ ನಾಯಕರು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗಂಭೀರ ಆರೋಪ ಮಾಡಿದರು. ಬೀದರ್ನ ಚಿನಕೇರಾ ಕ್ರಾಸ್ ಬಳಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ, ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕೆಸರು ಎರಚಿದಷ್ಟು ಕರ್ನಾಟಕದಲ್ಲಿ ಕಮಲ ಅರಳಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
‘ಜಗದ್ಗುರು ಬಸವೇಶ್ವರ, ಶಿವ ಶರಣರ ನಾಡಿಗೆ ನನ್ನ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಈ ವಿಧಾನಸಭೆ ಚುನಾವಣೆಗೆ ನನ್ನ ಈ ಯಾತ್ರೆ ಬೀದರ್ನಿಂದ ಆರಂಭವಾಗುತ್ತಿರುವುದು ನನ್ನ ಭಾಗ್ಯ. ಬಸವೇಶ್ವರರ ಅನುಗ್ರಹ ನಮಗೆ ಶಕ್ತಿ ತುಂಬುತ್ತದೆ. ಕರ್ನಾಟಕದ ಕಿರೀಟ ಬೀದರ್ನ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಹೇಳಿದರು.
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಹೇಳಿದ ಮೋದಿ ಭಾಷಣದುದ್ದಕ್ಕೂ ಹಲವು ಬಾರಿ ಬಹುಮತದ ಸರ್ಕಾರದ ಅಗತ್ಯವನ್ನು ಒತ್ತಿಹೇಳಿದರು. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕರ್ನಾಟಕ ನಂಬರ್ 1 ರಾಜ್ಯ ಆಗಬಲ್ಲದು ಎಂದು ಹೇಳಿದರು.
ಡಬಲ್ ಎಂಜಿನ್ನ ಡಬಲ್ ಸ್ಪೀಡ್ನಿಂದ ಅಭಿವೃದ್ಧಿ ಸಾಧ್ಯವಾಗಿದೆ. ಒಂದು ವೇಳೆ ಡಬಲ್ ಎಂಜಿನ್ ಸರ್ಕಾರ ಇಲ್ಲದಿದ್ದರೆ ಅಭಿವೃದ್ಧಿಗೆ ವೇಗ ದೊರೆಯುತ್ತಿರಲಿಲ್ಲ. ಬೀದರ್ನಲ್ಲಿಯೂ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ವೇಗ ಪಡೆದುಕೊಂಡಿವೆ. ನೀವೆಲ್ಲ ನೋಡುತ್ತಿದ್ದೀರಿ. ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಬಹಳಷ್ಟು ನೆರವಾಗಿದೆ. ಸಣ್ಣಪುಟ್ಟ ಖರ್ಚಿಗೆ ರೈತರಿಗೆ ನೆರವಾಗಿದೆ. ಯೋಜನೆ ಶುರು ಮಾಡಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಇಲ್ಲಿತ್ತು. ಆಗ ಜನರಿಗೆ ಕೇಂದ್ರದ ಯೋಜನೆ ಸರಿಯಾಗಿ ತಲುಪುತ್ತಿರಲಿಲ್ಲ. ಫಲಾನುಭವಿಗಳ ಪಟ್ಟಿಯನ್ನೂ ಇಲ್ಲಿನ ಮೈತ್ರಿ ಸರ್ಕಾರ ನೀಡಿರಲಿಲ್ಲ. ರಾಜ್ಯ ಸರ್ಕಾರ ಒಂದು ಪೈಸೆ ಕೊಡೋದು ಬೇಕಿರಲಿಲ್ಲ. ಆದರೂ ಅವರು ಪಟ್ಟಿ ಕೊಡಲಿಲ್ಲ. ಯಾಕೆಂದರೆ ಅದರಿಂದ ಅವರಿಗೆ ಲಾಭ ಆಗುತ್ತಿರಲಿಲ್ಲ. ಹಾಗಾಗಿ ಅವರು ಫಲಾನುಭವಿಗಳ ಪಟ್ಟಿಯನ್ನೂ ಕೊಡಲಿಲ್ಲ.
ಇದನ್ನೂ ಓದಿ: Karnataka Election: 38 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುವಂತೆ ಮಾಡುತ್ತಾರಾ ಬೊಮ್ಮಾಯಿ?
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ನವರು ನನ್ನನ್ನು ಬೈಯ್ಯುತ್ತಿದ್ದಾರೆ. 91 ಬಾರಿ ಕಾಂಗ್ರೆಸ್ನವರು ನನಗೆ ಬೈದಿದ್ದಾರೆ. ನನಗೆ ಬೈಯ್ಯುವುದರಲ್ಲೇ ಕಾಂಗ್ರೆಸ್ನವರು ಸಮಯ ವ್ಯರ್ಥ ಮಾಡ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವವರನ್ನು ನಿಂದಿಸುವುದು ಕಾಂಗ್ರೆಸ್ನವರ ಚಾಳಿ. ಮೊದಲು ಚೌಕೀದಾರ್ ಚೋರ್ ಎಂದರು. ನನ್ನನ್ನು ನಿಂದಿಸಿದಾಗಲೆಲ್ಲ ಅವರಿಗೆ ಶಿಕ್ಷೆಯಾಗಿದೆ. ಡಾ.ಅಂಬೇಡ್ಕರ್ ಅವರನ್ನು ಕೂಡ ಕಾಂಗ್ರೆಸ್ನವರು ನಿಂದಿಸಿದ್ದಾರೆ. ಬಾಬಾ ಸಾಹೇಬ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು ಕಾಂಗ್ರೆಸ್ನವರು. ಅವರಂತ ಮಹಾನ್ ಪುರುಷರನ್ನೂ ಕಾಂಗ್ರೆಸ್ ನಿಂದಿಸಿದೆ. ವೀರ ಸಾವರ್ಕರ್ ಅವರನ್ನೂ ಕಾಂಗ್ರೆಸ್ ನಾಯಕರು ನಿಂದಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನೂ ನಿಂದಿಸುತ್ತಿದ್ದಾರೆ. ಮಹಾನ್ ಪುರುಷರನ್ನು ಅವಮಾನಿಸುವುದು ಕಾಂಗ್ರೆಸ್ನವರ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ದನನ ಸೇವೆಯಲ್ಲಿ ನಿರತನಾಗಿರುತ್ತೇನೆ. ನಿಮ್ಮ ಆಶೀರ್ವಾದ ಇದ್ದಾಗ ನಾನು ಹಗಲು ರಾತ್ರಿ ಕೆಲಸ ಮಾಡುತ್ತಿರುವೆ. ನಿಮ್ಮ ಆಶೀರ್ವಾದದಿಂದ ಕರ್ನಾಟಕದ ಸೇವೆ ಮಾಡಲು ಅವಕಾಶ ದೊರೆತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು ಎಂದು ಮೋದಿ ಹೇಳಿದರು.
ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬೇಕು. ಇದರಿಂದ ಮೂಲಸೌಕರ್ಯ, ವಿದೇಶಿ ಹೂಡಿಕೆ ಉತ್ತಮವಾಗಲಿದೆ. ಕರ್ನಾಟಕಕ್ಕೆ ಯಾಕೆ ಡಬಲ್ ಎಂಜಿನ್ ಸರ್ಕಾರ ಬೇಕೆಂದರೆ ಈ ರಾಜ್ಯ ಕಾಂಗ್ರೆಸ್ ಎಟಿಎಂ ಆಗಬಾರದು. ನನಗೆ ವಿಶ್ವಾಸವಿದೆ. ಮತಗಟ್ಟೆಗೆ ತೆರಳಿ ಕಮಲದ ಚಿಹ್ನೆಗೆ ಮತ ನೀಡಿ. ಈ ಬಾರಿಯ ಮತ ಕರ್ನಾಟಕವನ್ನು ನಂಬರ್ 1 ಮಾಡಲು, ಅಮೃತ ಕಾಲಕ್ಕೆ ಕೊಡುಗೆ ನೀಡಲು ಎಂಬುದು ನೆನಪಿಡಿ. ನಿಮ್ಮ ಸೇವೆ ಮಾಡಲು ಆಶೀರ್ವಾದ ಮಾಡಿ ಎಂದು ಪ್ರಧಾನಿ ಮತದಾರರಲ್ಲಿ ಮನವಿ ಮಾಡಿದರು.
ಮೇ 10ರಂದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ನೀಡಿ. ಕರ್ನಾಟಕದ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿ. ಹಗಲಿರುಳು ನಿಮ್ಮೆಲ್ಲರ ಸೇವೆಗೂ ನಾನು ಬದ್ಧನಾಗಿದ್ದೇನೆ. ನಿಮ್ಮ ಆಶೀರ್ವಾದದಿಂದ ಬೈಗುಳಗಳು ಮಣ್ಣಲ್ಲಿ ಮಣ್ಣಾಗುತ್ತೆ. ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ. ನಿಮ್ಮ ಸೇವಕ ಮೋದಿಯಿಂದ ನಿಮಗೆಲ್ಲ ನಮಸ್ಕಾರಗಳು ಎಂದು ಮೋದಿ ಭಾಷಣ ಮುಗಿಸಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ