ಏ.29ರಂದು ಬೆಂಗಳೂರಿನಲ್ಲಿ ಮೋದಿ ರೋಡ್ ಶೋ, 5ಕಿ.ಮೀ ವ್ಯಾಪ್ತಿಯ ಪ್ರತಿ ಮನೆ ಮನೆಗೂ, ಅಂಗಡಿ ಮಾಲೀಕರಿಗೆ ನೋಟಿಸ್
ಬೆಂಗಳೂರಿನ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29ರಂದು ರೋಡ್‌ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಯುವ ಸ್ಥಳಗಳಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ತಪಾಸಣೆ ನಡೆಸಿದ್ದಾರೆ. ಹಾಗಾದ್ರೆ, ಪೊಲೀಸ್ ಬಿಗಿ ಬಂದೋಬಸ್ತ್ ಹೇಗಿದೆ ಎನ್ನುವುದನ್ನ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Elections 2023 ಕಾವು ದಿನದಿಂದ ದಿನಕ್ಕೆ ಹೆಜ್ಜಾಗುತ್ತಿದ್ದು, ನಾಳೆಯಿಂದ (ಏಪ್ರಿಲ್ 29) ಪ್ರಧಾನಿ ಮೋದಿ (Nagendra Modi) ಕೂಡಾ ಕರುನಾಡಿಗೆ ಪ್ರವೇಶ ಮಾಡಲಿದ್ದಾರೆ. ಹೀಗಾಗಿ ಕರ್ನಾಟಕ ಚುನಾವಣೆ ಕಣ ಮತ್ತಷ್ಟು ರಂಗೇರಲಿದೆ. ಈಗಾಗಲೇ ಮೋದಿ ಕರ್ನಾಟಕ ಮತದಾರರ ಮುಂದೆ ಬರುವುದಕ್ಕೂ ಮುನ್ನ ಆನ್‌ಲೈನ್ ಮೂಲಕವೇ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ಮೂಲಕ ಟೀಸರ್ ಬಿಟ್ಟಿದ್ದಾರೆ. ಪ್ರಧಾನಿಯವರು ಏಪ್ರಿಲ್ 29 ಮತ್ತು 30ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಮೊದಲ ದಿನವೇ ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ರೋಡ್ ಶೋ (Modi Road Show) ನಡೆಯುವ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸ್ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: Narendra Modi Interaction: ಕರ್ನಾಟಕದ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿಯ ಡಬಲ್ ಇಂಜಿನ್ ಸೂತ್ರ
ಬೆಂಗಳೂರಿನ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ರೋಡ್‌ಶೋ ನಡೆಯಲಿದೆ. ಸುಮಾರು 5.5 ಕಿ.ಮೀ ರೋಡ್ ಶೋ ನಡೆಯಲಿದ್ದು, 5 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆ ಮನೆಗೂ, ಅಂಗಡಿ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ರಸ್ತೆ ಅಕ್ಕ ಪಕ್ಕ ಇರುವ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹೆಸರು, ವಿಳಾಸ, ಮೊಬೈಲ್ ನಂಬರ್ ಒದಗಿಸುವಂತೆ ಸೂಚಿಸಿದ್ದಾರೆ. ಹಾಗೇ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ ಅಲರ್ಟ್ ಆಗಿರಬೇಕು. ಕೆಲಸದ ವೇಳೆ ಏನಾದರು ಅನುಮಾನಸ್ಪದವಾಗಿ ಕಂಡರೆ ತಕ್ಷಣ ಮಾಹಿತಿ ನೀಡಬೇಕು ಎಂದು ಖಡಕ್ ಆಗಿ ಸಂದೇಶ ನೀಡಿದ್ದಾರೆ.
ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ನೋಟಿಸ್ ನೀಡಲಾಗಿದ್ದು, ರೋಡ್ ಶೋ ದಿನ ಯಾರನ್ನು ಕೂಡ ಕಟ್ಟಡಗಳ ಮೇಲೆ ನಿಲ್ಲಲು ಬಿಡದಂತೆ ಸೂಚನೆ ನೀಡಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ತಿಳಿಸಿದ್ದಾರೆ. ಅಲ್ಲದೇ ಎಲ್ಲಾ ಕಟ್ಟಡಗಳ ಮೇಲೂ ಓರ್ವ ಪೊಲೀಸ್ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಟ್ಟಡದ ಮೇಲೆ ಯಾವುದೇ ರೀತಿ ವಸ್ತುಗಳಿದರೂ ಅದನ್ನ ತೆರವು ಗೊಳಿಸಲು ಸೂಚಿಸಿದ್ದಾರೆ. ರೋಡ್ ಶೋ ನಡೆಯುವ ದಿನ ಮತ್ತೊಮ್ಮೆ ಕಟ್ಟಡ ಮೇಲ್ಭಾಗವನ್ನ ಪರಿಶೀಲಿಸಲು ಮಾಲೀಕರಿಗೆ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಏ.29ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಂಚಾರ ದಟ್ಟಣೆ ಸಾಧ್ಯತೆ
ಇತ್ತೀಚಿಗೆ ಮನೆ ಬಾಡಿಗೆಗೆ ಬಂದವರ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು, ಯಾವಾಗ ಬಾಡಿಗೆ ಬಂದಿದ್ದಾರೆ? ಎಲ್ಲಿಂದ ಬಂದಿದ್ದಾರೆ? ಯಾವ ಉದ್ದೇಶ? ಇವೆಲ್ಲದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ರೋಡ್ ಶೋನ ನಡೆಯುವ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಅಳವಡಿಸಿ ಭದ್ರತೆ ನೀಡಲಾಗುತ್ತಿದ್ದು, ರ್ಯಾಲಿ ಮಾರ್ಗ ಮಧ್ಯೆ ಯಾರು ಎಂಟ್ರಿಯಾಗದಂತೆ ಸರ್ಪಗಾವಲು ಹಾಕಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ರ್ಯಾಲಿ ಮಾರ್ಗದ ಸುತ್ತ ಮುತ್ತ ಸಿಸಿಟಿವಿ ಕಣ್ಗಾವಲು ಇರಲಿದೆ. ಯಾವುದೇ ಡ್ರೋಣ್ ಕ್ಯಾಮೆರಾ ಹಾರಟಕ್ಕೆ ಅವಕಾಶ ಇಲ್ಲ. ಮಾಧ್ಯಮಗಳಿಗೆ ಕೇವಲ ನಿಗಧಿತ ಸ್ಥಳಗಲ್ಲಿ ಮಾತ್ರ ಅವಕಾಶ ನೀಡಲಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ