ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಚಾಲಕ ಕಂ ನಿರ್ವಾಹಕ ಅಮಾನತು
ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜುಗೌಡ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕೆಎಸ್ಆರ್ಟಿಸಿ ಚಾಲಕ ಕಂ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ.
ಯಾದಗಿರಿ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election 2023) ರಂಗೇರುತ್ತಿದ್ದು, ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಪ್ರಚಾರ ಕಾರ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗುವಂತಿಲ್ಲ. ಆದರೆ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ (Shorapur Assembly Constituency) ಬಿಜೆಪಿ (BJP) ಅಭ್ಯರ್ಥಿ ರಾಜುಗೌಡ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕೆಎಸ್ಆರ್ಟಿಸಿ (KSRTC) ಚಾಲಕ ಕಂ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ಸುರಪುರ ವಿಭಾಗದ ಸೂರ್ಯಪ್ರಕಾಶ್ ಅಮಾನತಾದ ಚಾಲಕ ಕಂ ನಿರ್ವಾಹಕ.
ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೂರ್ಯಪ್ರಕಾಶ್ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವಾರ್ಡನ್ ಅಮಾನತು
ಕಲಬುರಗಿ: ಕೆಲ ದಿನಗಳ ಹಿಂದೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಕಾರಣ ಸಮಾಜ ಕಲ್ಯಾಣ ಇಲಾಖೆಯ ಸೇಡಂ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ವಸತಿ ನಿಲಯದ ವಾರ್ಡನ್ ಯಶೋಧಮ್ಮ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದರು. ಸೇಡಂ ತಾಲೂಕಿನ ಮಳಖೇಡ್ ಆದಿತ್ಯಾ ಕಾಲೋನಿಯಲ್ಲಿ ಕಳೆದ ಮಾರ್ಚ್ 21 ರಂದು ರಾಜಕೀಯ ಪಕ್ಷದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಹಿನ್ನೆಲೆ ಅಮಾನತು ಮಾಡಲಾಗಿತ್ತು.
ಗ್ರಾಮ ಆಢಳಿತಾಧಿಕಾರಿ ಅಮಾನತು
ಧಾರವಾಡ: ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳನ್ನು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ನಿಯೋಜಿತ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿ ಚುನಾವಣಾ ಕರ್ತವ್ಯಲೋಪ ಮಾಡಿರುವ ಜಿಲ್ಲೆಯ ಕಲಘಟಗಿ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಗ್ರಾಮ ಆಡಳಿತಾಧಿಕಾರಿಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಮಾನತು ಮಾಡಿದ್ದರು.
ಧಾರವಾಡ ಜಿಲ್ಲೆಯ ಕಲಘಟಗಿ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಗ್ರಾಮ ಆಡಳಿತಾಧಿಕಾರಿ ಸುನೀಲ ಇ. ಡಿ. ಅವರನ್ನು ತಕ್ಷಣಕ್ಕೆ ಜಾರಿ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:30 am, Fri, 28 April 23