ಪಕ್ಷ ಟಾಸ್ಕ್ ಕೊಟ್ಟ ಮೇಲೆ ತಿರುಗಿಯೂ ನೋಡಿಲ್ಲ, ಗೋವಿಂದರಾಜನಗರ ಕಣ್ಣು, ಕಿವಿ, ಹೃದಯ ಎಲ್ಲವೂ ಆಗಿತ್ತು; ಅಳಲು ತೋಡಿಕೊಂಡ ಸೋಮಣ್ಣ
ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ. ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ. ಒಂದೊಂದು ಬಾರಿ ಒಳ ಏಟುಗಳು ಆದಾಗ ಇದೆಲ್ಲಾ ಆಗುತ್ತದೆ, ಅದಕ್ಕೆ ಕಾಲವೇ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎನ್ನುವ ಮೂಲಕ ವಿ ಸೋಮಣ್ಣ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ(Karnataka Assembly Elections 2023 Result) ಮೇ.13 ರಂದು ಹೊರಬಿದ್ದಿದ್ದು, ಕಾಂಗ್ರೆಸ್(congress) ಪಕ್ಷ ಸ್ಪಷ್ಟ ಬಹುಮತದಿಂದ ಗೆದ್ದು ಬೀಗಿದೆ. ಇತ್ತ ಬಿಜೆಪಿ(BJP)ಯ ಘಟಾನುಘಟಿ ನಾಯಕರು ಸೋಲುಂಡಿದ್ದಾರೆ. ಅದರಂತೆ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿದ್ದ ವಿ ಸೋಮಣ್ಣ(V Somanna) ಅವರು ಹೀನಾಯ ಸೋಲು ಕಂಡಿದ್ದಾರೆ. ಈ ಕುರಿತು ಮಾನತನಾಡಿರುವ ಅವರು ‘ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ. ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ. ಒಂದೊಂದು ಬಾರಿ ಒಳ ಏಟುಗಳು ಆದಾಗ ಇದೆಲ್ಲಾ ಆಗುತ್ತದೆ. ಕಾಲವೇ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದಿದ್ದಾರೆ.
ಪಕ್ಷ ನನಗೆ ಟಾಸ್ಕ್ ಕೊಟ್ಟ ಮೇಲೆ ತಿರುಗಿಯೂ ನೋಡಲಿಲ್ಲ
ಬೆಂಗಳೂರು ನಗರದಲ್ಲಿ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ‘ಚುನಾವಣೆ ಸಂದರ್ಭದಲ್ಲಿ ಪ್ರತಿದಿನ ಬಿ ಎಸ್ ಯಡಿಯೂರಪ್ಪರವರು ಕರೆ ಮಾಡುತ್ತಿದ್ದರು. ಆದರೆ, ಚುನಾವಣೆ ಮುಗಿದ ಇದುವರೆಗೂ ನನಗೆ ಕರೆ ಮಾಡಿಲ್ಲ. ಚಿನ್ನದಂಥ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಪಕ್ಷದ ತೀರ್ಮಾನವನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಜೊತೆಗೆ ಪಕ್ಷ ಹೇಳಿದ್ದನ್ನು ನಾನು ಮಾಡದೆ ಇನ್ಯಾರು ಮಾಡಲು ಆಗುತ್ತೆ?, ಪಕ್ಷ ನನಗೆ ಟಾಸ್ಕ್ ಕೊಟ್ಟ ಮೇಲೆ ತಿರುಗಿಯೂ ನೋಡಲಿಲ್ಲ. ಗೋವಿಂದರಾಜನಗರ ಕಣ್ಣು, ಕಿವಿ, ಹೃದಯ ಎಲ್ಲವೂ ಆಗಿತ್ತು ಎನ್ನುವ ಮೂಲಕ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಇನ್ನು ಪಕ್ಷದ ತೀರ್ಮಾನವನ್ನು ತಲೆ ಮೇಲೆ ಹೊತ್ತು ಮಾಡಿದ್ದು, ಬಾಕಿ ತೀರ್ಮಾನವನ್ನು ಪಕ್ಷದ ವರಿಷ್ಠರು ಮಾಡಬೇಕಾಗುತ್ತದೆ. ಅದನ್ನ ಮಾಡೋದು ಬಿಡೋದು ಅವರಿಗೆ ಸೇರಿದ್ದು, ಮಾಡಿದರೆ ಪಕ್ಷ ಕೂಡ ನನಗೆ ಸ್ಪಂದಿಸಿತು ಎಂಬ ಸಂದೇಶವನ್ನೂ ಕೊಡುತ್ತದೆ ಎಂದರು.
ಇದನ್ನೂ ಓದಿ:ಎರಡೂ ಕ್ಷೇತ್ರಗಳಲ್ಲಿ ವಿ ಸೋಮಣ್ಣ ಸೋಲು: ಕರೆ ಮಾಡಿ ಧೈರ್ಯ ಹೇಳಿದ ಅಮಿತ್ ಶಾ, ಬಿಎಲ್ ಸಂತೋಷ್
ಕಮಲ ಅರಳಿಸಲು ಸಜ್ಜಾಗಿದ್ದ ವಿ ಸೋಮಣ್ಣ
ಗಡಿ ಜಿಲ್ಲೆ ಕಾರಣಕ್ಕೆ ಸಾಧಾರಣ ಕ್ಷೇತ್ರಗಳ ಪಟ್ಟಿಯಲ್ಲಿದ್ದ ಚಾಮರಾಜನಗರವು ರಾತ್ರೋರಾತ್ರಿ ಹೈವೋಲ್ಟೇಜ್ ಕ್ಷೇತ್ರವಾಗಿ ಹೊರಹೊಮ್ಮಿರುವುದು 2023ರ ಸಾರ್ವತ್ರಿಕ ಚುನಾವಣೆಯ ವಿಶೇಷತೆಗಳಲ್ಲಿ ಒಂದಾಗಿತ್ತು. ರಾಜಧಾನಿ ಹೃದಯ ಭಾಗದ ಸ್ವಕ್ಷೇತ್ರ ಗೋವಿಂದರಾಜನಗರವನ್ನು ಬಿಟ್ಟು ಚಾಮರಾಜನಗರ ಕ್ಷೇತ್ರದಲ್ಲಿ ಕಮಲ ಅರಳಿಸಲು ಸಚಿವ ವಿ ಸೋಮಣ್ಣ ಅಖಾಡಕ್ಕಿಳಿದಿರುವುದು ದಿಢೀರ್ ಪರಿವರ್ತನೆಯ ಕೇಂದ್ರ ಬಿಂದುವಾಗಿತ್ತು.
ಚಾಮರಾಜನಗರದಿಂದ ಸೋಮಣ್ಣ ಸ್ಪರ್ಧೆ ಅಚ್ಚರಿಯ ಬೆಳವಣಿಗೆ ಏನಲ್ಲ. ಬಿಜೆಪಿ ಸೇರುವುದಕ್ಕೂ ಹಿಂದಿನಿಂದಲೂ ಸೋಮಣ್ಣನವರಿಗೆ ಚಾಮರಾಜನಗರದೊಂದಿಗೆ ಸಂಪರ್ಕವಿತ್ತು. ಹಾಗಾಗಿ ಅವರ ಆಪ್ತ ಬಳಗ, ಬೆಂಬಲಿಗರ ಪಡೆಯೂ ಇತ್ತು. ಇದೇ ಕಾರಣಕ್ಕೆ 2018ರಲ್ಲೂ ಚಾಮರಾಜನಗರ ಸೇರಿದಂತೆ ಆ ಜಿಲ್ಲೆಯ ಗುಂಡ್ಲುಪೇಟೆ ಇಲ್ಲವೇ ಹನೂರಿನಿಂದ ಸೋಮಣ್ಣ ಸ್ಪರ್ಧಿಸುವ ಬಗ್ಗೆ ಚರ್ಚೆಯಾಗಿತ್ತು. ಕೊನೆಗೆ ಗೋವಿಂದರಾಜನಗರದಿಂದಲೇ ಸ್ಪರ್ಧಿಸಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ