
Virajpet Assembly Election Result 2023: ರಾಜ್ಯದಲ್ಲಿ ಭಾರೀ ಜಿದ್ದಾಜಿದ್ದಿಯಿಂದ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Assembly Elections 2023 Result) ಇಂದು ಪ್ರಕಟವಾಗಿದೆ. ಕೊಡುಗು ಜಿಲ್ಲೆಯ ಭಾಗವಾಗಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸತತ 5ನೇ ಬಾರಿ ಗೆಲ್ಲುವ ಪ್ರಯತ್ನವನ್ನು ಕಾಂಗ್ರೆಸ್ ವಿಫಲಗೊಳಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಎಎಸ್ ಪೊನ್ನಣ್ಣ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಅನುಭವಿ ಅಭ್ಯರ್ಥಿ ಹಾಗೂ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಸೋಲುಂಡಿದ್ದಾರೆ.
ಕೊಡಗಿನ ಜನಸಂಘದ ಮುಖಂಡನಾಗಿ, ಬಳಿಕ ಕಾಂಗ್ರೆಸ್ಗೆ ಹೋಗಿ ಕಟ್ಟರ್ ಬಿಜೆಪಿ ವಿರೋಧಿಯಾಗಿ ಹೆಸರು ಮಾಡಿದ್ದ ಮತ್ತು ತಮ್ಮ ವಾಕ್ಝರಿಯಿಂದ ಬಿಜೆಪಿಯವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಎ.ಕೆ. ಸುಬ್ಬಯ್ಯ ಅವರ ಮಗ ಎಎಸ್ ಪೊನ್ನಣ್ಣ ಎನ್ನುವುದು ಕುತೂಹಲ ಮೂಡಿಸಿದೆ.
2008ರವರೆಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿತ್ತು. 2008ರಿಂದ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರ ಬಿಜೆಪಿಗೆ ಭದ್ರಕೋಟೆಯಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯ ಪ್ರತಾಪ್ ಸಿಂಹಗೆ ಈ ಕ್ಷೇತ್ರದಿಂದ ಒಳ್ಳೆಯ ಲೀಡ್ ಸಿಕ್ಕಿತ್ತು. ಬಿಜೆಪಿ ಇಲ್ಲಿ ಸತತ 4 ಬಾರಿ ಗೆದ್ದಿದೆ. ಕೆ.ಜಿ. ಬೋಪಯ್ಯ ಹ್ಯಾಟ್ರಿಕ್ ಭಾರಿಸಿದ್ದಾರೆ. ಕಳೆದ 6 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ 5 ಬಾರಿ ಗೆದ್ದಿದೆ. 1990ಕ್ಕೆ ಮುನ್ನ ಇಲ್ಲಿ ಕಾಂಗ್ರೆಸ್ನ ಹವಾ ಹೆಚ್ಚಿತ್ತು. ಬಳಿಕ ಕೇಸರಿ ಪಾಳಯ ಬಲಯುತವಾಗಿ ಬೆಳೆದಿದೆ.
ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇತ್ತು. ಕಾಂಗ್ರೆಸ್ ಈ ಬಾರಿ ಅಲ್ಪಮತಗಳ ಅಂತರದಿಂದ ಬಿಜೆಪಿಯನ್ನು ಸೋಲಿಸಿದೆ.
Published On - 3:32 am, Sat, 13 May 23