ಕರ್ನಾಟಕ ಉಪಚುನಾವಣೆ ಫಲಿತಾಂಶ: ರಾಹುಲ್ ಗಾಂಧಿ, ಖರ್ಗೆ ನಾಯಕತ್ವಕ್ಕೆ ಸಿಕ್ಕ ಜಯವೆಂದ ಸುರ್ಜೇವಾಲ
ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮೂರರಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿರುವುದಕ್ಕೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಾಯಕತ್ವವನ್ನು ಅವರು ಕೊಂಡಾಡಿದ್ದಾರೆ.
ಬೆಂಗಳೂರು, ನವೆಂಬರ್ 23: ಕರ್ನಾಟಕದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದಕ್ಕೆ ಸಂದ ಜಯವಿದು ಎಂದಿದ್ದಾರೆ. ಜತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಾಯಕತ್ವವನ್ನೂ ಶ್ಲಾಘಿಸಿದ್ದಾರೆ.
ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 26,929 ಮತಗಳಿಂದ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ಜೆಡಿಎಸ್-ಬಿಜೆಪಿಯ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದರು. ಸಂಡೂರು ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿಯ ಬಿ.ಹನುಮಂತಪ್ಪ ಅವರನ್ನು 9,568 ಮತಗಳಿಂದ ಸೋಲಿಸಿದರು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿಯ ಭರತ್ ಬೊಮ್ಮಾಯಿ ಅವರನ್ನು ಸೋಲಿಸಿ ಕಾಂಗ್ರೆಸ್‌ನ ಯಾಸಿರ್ ಪಠಾಣ್ 13,446 ಮತಗಳಿಂದ ಸೋಲಿಸಿದ್ದಾರೆ ಎಂದು ಸುರ್ಜೇವಾಲ ಉಲ್ಲೇಖಿಸಿದ್ದಾರೆ.
ಸುರ್ಜೇವಾಲ ಟ್ವೀಟ್
Congress sweeps #Karnataka by-elections !
👉 Congress wins Channapatna Assembly by 26,929 votes. C.P.Yogeshwar of Congress defeats Nikhil Kumaraswamy of JD-BJP.
👉 Congress wins Sandur Assembly, retains the seat. Smt. Annapurna Tukaram of Congress wins defeating B. Hanumantappa… pic.twitter.com/V8akzF8Rf4
— Randeep Singh Surjewala (@rssurjewala) November 23, 2024
ಇದು ಖರ್ಗೆ, ರಾಹುಲ್ ನಾಯಕತ್ವಕ್ಕೆ ದೊರೆತ ಜಯ. ಹಾಗೆಯೇ, ಕಾಂಗ್ರೆಸ್ ಕಾರ್ಯಕರ್ತರ ಗೆಲುವು. ಕಾಂಗ್ರೆಸ್ ಗ್ಯಾರಂಟಿಗಳು ಮತ್ತು ಕಾಂಗ್ರೆಸ್ ಸರ್ಕಾರದ ನೀತಿಗಳು ಈ ಗೆಲುವಿಗೆ ಕಾರಣ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಾಯಕತ್ವವೂ ಕಾರಣ ಎಂದು ಸುರ್ಜೇವಾಲ ಹೇಳಿದ್ದಾರೆ.
ಮಾಜಿ ಸಿಎಂಗಳಿಬ್ಬರ ಮಕ್ಕಳಿಗೂ ಸೋಲು
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಸೋಲನುಭವಿಸುವ ಮೂಲಕ ಮಾಜಿ ಮುಖ್ಯಮಂತ್ರಿಗಳಿಬ್ಬರ ಮಕ್ಕಳೂ ಉಪಚುನಾವಣೆಯಲ್ಲಿ ಸೋಲನುಭವಿಸಿದಂತಾಗಿದೆ. ಭರತ್ ಬೊಮ್ಮಾಯಿಗೆ ಇದು ಮೊದಲ ಚುನಾವಣೆಯಾದರೆ, ನಿಖಿಲ್ಗೆ ಇದು ಮೂರನೇ ಪ್ರಯತ್ನ. ಈ ಹಿಂದೆ ಮಂಡ್ಯದಿಂದ ಲೋಕಸಭೆ ಹಾಗೂ ರಾಮನಗರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.
ಇದನ್ನೂ ಓದಿ: ಚುನಾವಣೆ ಫಲಿತಾಂಶದ ಲೈವ್ ಅಪ್ಡೇಟ್ ಇಲ್ಲಿದೆ
ಏತನ್ಮಧ್ಯೆ, ಉಪಚುನಾವಣೆ ಗೆಲುವಿನಿಂದ ಕರ್ನಾಟಕದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಚನ್ನಪಟ್ಟಣ, ಸಂಡೂರಿನಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.
ಚುನಾವಣೆ ಫಲಿತಾಂಶ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ