Tamil Nadu: ತಮಿಳುನಾಡಿನಲ್ಲಿ ಇಂಡಿಯಾ ಬಣಕ್ಕೆ ಬಲ ತುಂಬಿದ ದ್ರಾವಿಡ ಶಕ್ತಿ; ಖಾತೆ ತೆರೆಯದ ಬಿಜೆಪಿ
ಎನ್‌ಡಿಎ ಮಿತ್ರಪಕ್ಷವಾದ ಪಿಎಂಕೆಯ ಸೌಮ್ಯಾ ಅನ್ಬುಮಣಿ ಒಬ್ಬರೇ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ಸೋಲುಂಡಿದ್ದಾರೆ. ಬಿಜೆಪಿಯ ಪ್ರಯತ್ನಕ್ಕಿಂತ ಹೆಚ್ಚಾಗಿ ಒಬಿಸಿ-ವನ್ನಿಯಾರ್ ಸಮುದಾಯದ ಮೇಲೆ ಪಿಎಂಕೆ ಕೇಂದ್ರೀಕೃತ ಅಭಿಯಾನದಿಂದಾಗಿ ಸೌಮ್ಯ ಅನ್ಬುಮಣಿಗೆ ಹೆಚ್ಚಿನ ಮತಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ
ಚೆನ್ನೈ ಜೂನ್ 04: 2019 ರಿಂದ ಡಿಎಂಕೆ (DMK) ತನ್ನ ಚುನಾವಣಾ ಗೆಲುವಿನ ಸರಣಿಯನ್ನು ಉಳಿಸಿಕೊಂಡಿದ್ದು, ತಮಿಳುನಾಡು (Tamil Nadu) ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವತ್ತ ಹೆಜ್ಜೆ ಹಾಕಿದೆ. 39 ಸ್ಥಾನಗಳಲ್ಲಿ 38 ಸ್ಥಾನಗಳಲ್ಲಿ ಆಡಳಿತಾರೂಢ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ (MK Stalin) ಅವರ ನಾಯಕತ್ವ, ಮೈತ್ರಿಗಳ ಜತೆ ಅವರ ಚತುರ ನಿರ್ವಹಣೆ, ರಾಜ್ಯದ ಅತಿದೊಡ್ಡ ಒಕ್ಕೂಟವನ್ನು ಗಟ್ಟಿಗೊಳಿಸುವುದು ಮತ್ತು 2019 ರಿಂದ ಅದನ್ನು ಯಥಾಸ್ಥಿತಿಯಲ್ಲಿ ಇರಿಸಿರುವುದು ತಮಿಳುನಾಡಿನಲ್ಲಿನ ಈ ಯಶಸ್ಸಿಗೆ ಕಾರಣವಾಗುತ್ತಿದೆ. ಡಿಎಂಕೆ ನೇತೃತ್ವದ ಮೈತ್ರಿಕೂಟವು ಕಾಂಗ್ರೆಸ್, ಎಡಪಕ್ಷಗಳು, ದಲಿತ ಗುಂಪುಗಳು ಮತ್ತು ಅಲ್ಪಸಂಖ್ಯಾತ ಪಕ್ಷಗಳನ್ನು ಒಳಗೊಂಡಿದೆ.
ಎನ್‌ಡಿಎ ಮಿತ್ರಪಕ್ಷವಾದ ಪಿಎಂಕೆಯ ಸೌಮ್ಯಾ ಅನ್ಬುಮಣಿ ಒಬ್ಬರೇ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ಸೋಲುಂಡಿದ್ದಾರೆ. ಬಿಜೆಪಿಯ ಪ್ರಯತ್ನಕ್ಕಿಂತ ಹೆಚ್ಚಾಗಿ ಒಬಿಸಿ-ವನ್ನಿಯಾರ್ ಸಮುದಾಯದ ಮೇಲೆ ಪಿಎಂಕೆ ಕೇಂದ್ರೀಕೃತ ಅಭಿಯಾನದಿಂದಾಗಿ ಸೌಮ್ಯ ಅನ್ಬುಮಣಿಗೆ ಹೆಚ್ಚಿನ ಮತಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಎಐಎಡಿಎಂಕೆ ಭದ್ರಕೋಟೆಯಾದ ನಾಮಕ್ಕಲ್‌ನಲ್ಲಿ ಡಿಎಂಕೆ 1,500 ಮತಗಳ ಮುನ್ನಡೆ ಸಾಧಿಸಿದೆ.
ಎಐಎಡಿಎಂಕೆ ತನ್ನ ಮತಬ್ಯಾಂಕ್ ಯಥಾಸ್ಥಿತಿಯಲ್ಲಿದ್ದರೂ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ವೆಲ್ಲೂರು, ಧರ್ಮಪುರಿ, ನೀಲಗಿರಿ, ಕೊಯಮತ್ತೂರು, ತೇಣಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ, ರಾಮನಾಥಪುರಂನಂತಹ ಕ್ಷೇತ್ರಗಳಲ್ಲಿ ಸುಮಾರು ಅರ್ಧದಷ್ಟು ಮತಗಳನ್ನು ಎಣಿಕೆ ನಡೆದಾಗ ಎಐಎಡಿಎಂಕೆಯನ್ನು ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಿದೆ. ತಿರುನಲ್ವೇಲಿ ಮತ್ತು ತೆಂಕಾಶಿಯ ನಿರ್ಣಾಯಕ ಸ್ಥಾನಗಳಲ್ಲಿ ಎಐಎಡಿಎಂಕೆ ತಮಿಳು ನ್ಯಾಷನಲಿಸ್ಟ್ ಸೀಮಾನ್ ನೇತೃತ್ವದ ನಾಮ್ ತಮಿಳರ್ ಕಚ್ಚಿಗಿಂತ ಹಿಂದೆ ಬಿದ್ದಿದೆ.
ಇಪಿಎಸ್‌ಗೆ ನಿಕಟವಾಗಿರುವ ಹಿರಿಯ ಎಐಎಡಿಎಂಕೆ ನಾಯಕರೊಬ್ಬರು, “ನಾವು ಬಿಜೆಪಿಯೊಂದಿಗೆ ಮೈತ್ರಿಯನ್ನು ಉಳಿಸಿಕೊಂಡಿದ್ದರೆ, ನಾವು ಕೆಲವು ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಕ್ಯಾಬಿನೆಟ್ ಸ್ಥಾನವನ್ನು ಪಡೆದುಕೊಳ್ಳಬಹುದಿತ್ತು. ಆದರೆ ನಮಗೆ ಆತ್ಮಗೌರವ ಮುಖ್ಯವಾಗಿತ್ತು. ನಮ್ಮ ಮತ ಬ್ಯಾಂಕ್ ನಲ್ಲಿ ಯಾವುದೇ ಬದಲಾವಣೆ ಇಲ್ಲ, ಪಕ್ಷವು ಪ್ರಾಥಮಿಕ ಆಯ್ಕೆಯಾಗಿದೆ, ತಾತ್ಕಾಲಿಕ ಚುನಾವಣಾ ತಂತ್ರವಲ್ಲ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಈ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆದವರು… ನಿರೀಕ್ಷೆ ಹುಟ್ಟಿಸಿದವರು, ಹುಸಿಗೊಳಿಸಿದವರು…
ತಮಿಳುನಾಡಿನಲ್ಲಿ 2014 ಮತ್ತು 2019 ರ ಲೋಕಸಭಾ ಚುನಾವಣೆಗಳು ಮತದಾರರ ಒಮ್ಮತದ ನಿರ್ಧಾರಗಳನ್ನು ಪ್ರದರ್ಶಿಸಿದವು. 2014 ರಲ್ಲಿ ಎಐಎಡಿಎಂಕೆ 39 ಸ್ಥಾನಗಳಲ್ಲಿ 37 ಸ್ಥಾನಗಳನ್ನು ಗೆದ್ದಿದ್ದು, 2019 ರಲ್ಲಿ ಡಿಎಂಕೆ 38 ಸ್ಥಾನಗಳನ್ನು ಗೆದ್ದುಕೊಂಡಿತು. 2004 ರ ಚುನಾವಣೆಗಳಲ್ಲಿ ಡಿಎಂಕೆ ಎಲ್ಲಾ 39 ಸ್ಥಾನಗಳನ್ನು ಗೆದ್ದು ಬೀಗಿತು. 2009 ರ ಚುನಾವಣೆಗಳು ಡಿಎಂಕೆ ಪರವಾಗಿ 27-12 ಅನುಪಾತದೊಂದಿಗೆ ವಿಭಜಿತ ಫಲಿತಾಂಶಕ್ಕೆ ಕಾರಣವಾಯಿತು. 2024 ರ ಚುನಾವಣಾ ಫಲಿತಾಂಶಗಳು ಸಣ್ಣ ಸವಾಲುಗಳೊಂದಿಗೆ ಜನರು ಡಿಎಂಕೆ ಪರ ಎಂಬುದನ್ನು ಸೂಚಿಸುತ್ತದೆ.
ತೂತುಕುಡಿ ಕ್ಷೇತ್ರದಲ್ಲಿ ಕನಿಮೊಳಿಗೆ ಮುನ್ನಡೆ
ಕನಿಮೊಳಿ ಅವರು ತೂತುಕುಡಿ ಕ್ಷೇತ್ರದಿಂದ ತಮ್ಮ ಸಮೀಪದ ಎಐಎಡಿಎಂಕೆ ಪ್ರತಿಸ್ಪರ್ಧಿ ಅಭ್ಯರ್ಥಿ ಶಿವಸಾಮಿ ವೇಲುಮಣಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ನಾಯಕ, ಎ. ರಾಜಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ಕೇಂದ್ರ ಸಚಿವ ಎಲ್.ಮುರುಗನ್ ವಿರುದ್ಧ ಸುಮಾರು 215421 ಮತಗಳ ಅಂತರದಿಂದ ನೀಲಗಿರಿ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಎಸ್ ಜಗತ್ರಾತ್ಚಕನ್ ಅರಕ್ಕೋಣಂನಲ್ಲಿ 78,826 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಡಿಎಂಕೆ ಅಭ್ಯರ್ಥಿ ಡಿ ಎಂ ಕತಿರ್ ಆನಂದ್ ವೆಲ್ಲೂರಿನಲ್ಲಿ ಡಿಎಂಕೆ ಅಭ್ಯರ್ಥಿ ಸಿ ಎನ್ ಅಣ್ಣಾದೊರೈ 90,802 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Tue, 4 June 24