ಉಚಿತ ವಿದ್ಯುತ್, ಆರೋಗ್ಯ, ಶಿಕ್ಷಣ; ಆಮ್ ಆದ್ಮಿ ಪಕ್ಷದ 10 ಗ್ಯಾರಂಟಿಗಳಿವು
Lok Sabha Elections 2024: ಆಮ್ ಆದ್ಮಿ ಪಕ್ಷದ 10 ಗ್ಯಾರಂಟಿಗಳು: ಜೈಲಿನಿಂದ ಮಧ್ಯಂತರ ಜಾಮೀನು ಪಡೆದು ಬಂದಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕರಿಗೆ 10 ಗ್ಯಾರಂಟಿಗಳ ಭರವಸೆ ನೀಡಿದ್ದಾರೆ. ಆ ಕುರಿತು ಪೂರ್ತಿ ಮಾಹಿತಿ ಇಲ್ಲಿದೆ.
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರು 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ತಮ್ಮ ಆಮ್ ಆದ್ಮಿ ಪಕ್ಷ (AAP) ಗೆದ್ದರೆ ಅನುಷ್ಠಾನಕ್ಕೆ ತರುವ 10 ಗ್ಯಾರಂಟಿಗಳನ್ನು ಇಂದು ಅನಾವರಣಗೊಳಿಸಿದ್ದಾರೆ. ಉಚಿತ ವಿದ್ಯುತ್, ಆರೋಗ್ಯ ಸೌಲಭ್ಯಗಳು ಸೇರಿದಂತೆ ಹಲವು ಭರವಸೆಗಳನ್ನು ಕೇಜ್ರಿವಾಲ್ ನೀಡಿದ್ದಾರೆ.
“ಬಿಜೆಪಿ ಯಾವಾಗಲೂ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಆದರೆ, ನನ್ನ ಭರವಸೆಗಳು ದಾಖಲೆಯನ್ನು ಸೃಷ್ಟಿಸಿವೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ‘ಕೇಜ್ರಿವಾಲ್ ಅವರ ಗ್ಯಾರಂಟಿ’ ಅಥವಾ ‘ಮೋದಿಯ ಗ್ಯಾರಂಟಿ’ ಇವೆರಡರಲ್ಲಿ ಯಾವುದು ಬೇಕೆಂದು ಜನರೇ ತೀರ್ಮಾನಿಸಬೇಕು ಎಂದು ಅವರು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಚುನಾವಣಾ ಭರವಸೆಗಳ ಮುಂಚೂಣಿಯಲ್ಲಿ ಎಲ್ಲರಿಗೂ ಉಚಿತ ವಿದ್ಯುತ್ ಭರವಸೆ, ವಿಶೇಷವಾಗಿ ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಉಚಿತ ವಿದ್ಯುತ್ ನೀಡುವುದಾಗಿದೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿಯ ನಿರಂತರ ವಿದ್ಯುತ್ ಪೂರೈಕೆಯ ಮಾದರಿಯನ್ನು ರಾಷ್ಟ್ರವ್ಯಾಪಿ ಪುನರಾವರ್ತಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರದ ಅನಭಿಷಿಕ್ತ ದೊರೆ; ಬಿಜೆಪಿಯಿಂದ ಕೇಜ್ರಿವಾಲ್ ಫಿಲ್ಮಿ ಪೋಸ್ಟರ್ ರಿಲೀಸ್
“ನಮ್ಮ ಪಕ್ಷದ 10 ಗ್ಯಾರಂಟಿಗಳಲ್ಲಿ ನಾವು ದೇಶದಲ್ಲಿ 24 ಗಂಟೆ ವಿದ್ಯುತ್ ನೀಡುತ್ತೇವೆ ಎಂಬುದು ಮೊದಲ ಗ್ಯಾರಂಟಿಯಾಗಿದೆ. ದೇಶದಲ್ಲಿ 3 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ ಬಳಕೆ ಕೇವಲ 2 ಲಕ್ಷ ಮೆಗಾವ್ಯಾಟ್ ಆಗಿದೆ. ನಮ್ಮ ದೇಶ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು. ನಾವು ಅದನ್ನು ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿದ್ದೇವೆ. ನಾವು ಅದನ್ನು ಎಲ್ಲಾ ಬಡವರಿಗೆ 200 ಯೂನಿಟ್‌ಗಳವರೆಗೆ ಉಚಿತವಾಗಿ ನೀಡುತ್ತಿದ್ದೇವೆ.” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಚುನಾವಣಾ ಗ್ಯಾರಂಟಿಯ ಪಟ್ಟಿಯಲ್ಲಿ ಎರಡನೆಯದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ನವೀಕರಿಸುವುದು. ಅದನ್ನು ಸರಿಪಡಿಸಲು 5 ಲಕ್ಷ ಕೋಟಿ ರೂ. ಬೇಕಾಗುತ್ತದೆ ಮತ್ತು ಒಟ್ಟು ವೆಚ್ಚವನ್ನು ಸರಿದೂಗಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರವು ತಲಾ 2.5 ಲಕ್ಷ ಕೋಟಿ ರೂ. ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಪ್ರತಿಪಾದಿಸಿದರು.
“ಇಂದು ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಚೆನ್ನಾಗಿಲ್ಲ. ಎಲ್ಲರಿಗೂ ಒಳ್ಳೆಯ ಮತ್ತು ಅತ್ಯುತ್ತಮವಾದ ಉಚಿತ ಶಿಕ್ಷಣದ ವ್ಯವಸ್ಥೆ ಮಾಡುತ್ತೇವೆ ಎಂಬುದು ನಮ್ಮ ಎರಡನೇ ಗ್ಯಾರಂಟಿ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣವನ್ನು ನೀಡುತ್ತವೆ. ಇದನ್ನು ನಾವು ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರ 2.5 ಲಕ್ಷ ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 2.5 ಕೋಟಿ ರೂ. ನೀಡಲಿದೆ’ ಎಂದು ಹೇಳಿದರು.
ಇದನ್ನೂ ಓದಿ: ಅಮ್ಮಂದಿರ ದಿನಕ್ಕೆ ಮೋದಿಗೆ ವಿಶೇಷ ಉಡುಗೊರೆ; ತಾಯಿಯ ನೆನೆದು ಭಾವುಕರಾದ ಪ್ರಧಾನಿ
ಅರವಿಂದ್ ಕೇಜ್ರಿವಾಲ್ ಸರ್ಕಾರಿ ಆಸ್ಪತ್ರೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಭಾರತದ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು 5 ಲಕ್ಷ ಕೋಟಿ ರೂ. ಬೇಕು ಎಂದಿದ್ದಾರೆ. ನಮ್ಮ ದೇಶದಲ್ಲಿ ನಮ್ಮ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಚೆನ್ನಾಗಿಲ್ಲ, ನಮ್ಮ ಮೂರನೇ ಗ್ಯಾರಂಟಿ ಉತ್ತಮ ಆರೋಗ್ಯ ಸೇವೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ವ್ಯವಸ್ಥೆ ಮಾಡುತ್ತೇವೆ. ಪ್ರತಿ ಹಳ್ಳಿ, ಪ್ರತಿ ಪ್ರದೇಶದಲ್ಲಿ ಮೊಹಲ್ಲಾ ಕ್ಲಿನಿಕ್ ತೆರೆಯಲಾಗುವುದು. ಜಿಲ್ಲಾ ಆಸ್ಪತ್ರೆಯನ್ನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು ಎಂದಿದ್ದಾರೆ.
ಆಮ್ ಆದ್ಮಿ ಪಕ್ಷ ಘೋಷಿಸಿರುವ 10 ಗ್ಯಾರಂಟಿಗಳಿವು:
- ಉಚಿತ ವಿದ್ಯುತ್ ಗ್ಯಾರಂಟಿ: ದೇಶದಾದ್ಯಂತ ಮೊದಲ 200 ಯೂನಿಟ್ ವಿದ್ಯುತ್ ಉಚಿತದೊಂದಿಗೆ 24-ಗಂಟೆಗಳ ವಿದ್ಯುತ್ ಸರಬರಾಜು.
- ಶಿಕ್ಷಣದ ಗ್ಯಾರಂಟಿ: ಎಲ್ಲರಿಗೂ ಉಚಿತ ಶಿಕ್ಷಣದ ವ್ಯವಸ್ಥೆ ಮಾಡುವ ಮತ್ತು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸುವ ಭರವಸೆ.
- ಆರೋಗ್ಯದ ಗ್ಯಾರಂಟಿ: ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನಿರ್ಮಿಸಲಾಗುವುದು.
- ಚೀನಾದಿಂದ ಭೂ ಸ್ವಾಧೀನದ ಗ್ಯಾರಂಟಿ: ಭಾರತದ ಭೂಮಿಯನ್ನು ಚೀನಾದಿಂದ ಮುಕ್ತಗೊಳಿಸಲಾಗುವುದು, ಸೇನೆಗೆ ಮುಕ್ತ ಹಸ್ತ ನೀಡಲಾಗುವುದು.
- ಅಗ್ನಿವೀರ್ ಯೋಜನೆ ಅಂತ್ಯಗೊಳ್ಳುವ ಗ್ಯಾರಂಟಿ: ನರೇಂದ್ರ ಮೋದಿ ಸರ್ಕಾರ ಆರಂಭಿಸಿದ ಅಗ್ನಿವೀರ್ ಯೋಜನೆ ರದ್ದು ಪಡಿಸಲಾಗುವುದು.
- MSPಯ ಗ್ಯಾರಂಟಿ: ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಅವಕಾಶ.
- ದೆಹಲಿಗೆ ರಾಜ್ಯದ ಸ್ಥಾನಮಾನದ ಗ್ಯಾರಂಟಿ: ದೆಹಲಿಗೆ ಸಂಪೂರ್ಣ ರಾಜ್ಯತ್ವವನ್ನು ಖಾತ್ರಿಪಡಿಸಲಾಗುವುದು.
- ಉದ್ಯೋಗದ ಗ್ಯಾರಂಟಿ: ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ.
- ಭ್ರಷ್ಟಾಚಾರ ಮುಕ್ತ ಗ್ಯಾರಂಟಿ: ಭ್ರಷ್ಟರಿಗೆ ಭಾರತ ಸುರಕ್ಷಿತ ಸ್ವರ್ಗ ಎಂಬ ನೀತಿ ತೊಲಗಿ, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಭರವಸೆ.
- GST ಸರಳೀಕರಣದ ಗ್ಯಾರಂಟಿ: ಸರಕು ಮತ್ತು ಸೇವಾ ತೆರಿಗೆಯನ್ನು (GST) ಸರಳಗೊಳಿಸಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Sun, 12 May 24