ನಮ್ಮ ನಿರ್ಧಾರ ಒಪ್ಪದಿದ್ದರೆ ಪಕ್ಷ ತೊರೆಯಬೇಕಾಗುತ್ತದೆ; ಅಧೀರ್ ರಂಜನ್​ಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ

|

Updated on: May 18, 2024 | 3:54 PM

Lok Sabha Elections 2024: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿಗೆ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ. ಅಧೀರ್ ರಂಜನ್ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಅದಕ್ಕೆಂದೇ ಹೈಕಮಾಂಡ್ ಇದೆ. ಕಾಂಗ್ರೆಸ್​ನ ನಿರ್ಧಾರವನ್ನು ಒಪ್ಪಿಕೊಳ್ಳದಿದ್ದರೆ ಅವರು ಪಕ್ಷವನ್ನು ತೊರೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಮ್ಮ ನಿರ್ಧಾರ ಒಪ್ಪದಿದ್ದರೆ ಪಕ್ಷ ತೊರೆಯಬೇಕಾಗುತ್ತದೆ; ಅಧೀರ್ ರಂಜನ್​ಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ
ಅಧೀರ್ ರಂಜನ್
Follow us on

ನವದೆಹಲಿ: ಇಂಡಿಯಾ (INDIA) ಒಕ್ಕೂಟ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತಿದ್ದರೆ ಇತ್ತ ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿಯನ್ನು (Mamata Banerjee) ವಿರೋಧಿಸುತ್ತಿದ್ದಾರೆ. ಇದು ಬಂಗಾಳದ ಕಾಂಗ್ರೆಸ್ ಮತ್ತು ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿತ್ತು. ಆದರೆ, ಇದೀಗ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಅಖಿಲ ಭಾರತ ಕಾಂಗ್ರೆಸ್ ಮಮತಾ ಬ್ಯಾನರ್ಜಿಯವರನ್ನು ‘ಇಂಡಿಯಾ’ ಒಕ್ಕೂಟದ ಪಾಲುದಾರರು ಎಂದು ಪರಿಗಣಿಸುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ ನಂತರ ಸರ್ಕಾರ ರಚನೆಯಾಗಬೇಕು, ಆಗಬಾರದು ಎಂಬುದನ್ನು ನಿರ್ಧರಿಸುವುದು ಅಧೀರ್ ಚೌಧರಿಯಲ್ಲ. ಅವರು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಗಳನ್ನು ಒಪ್ಪದಿದ್ದರೆ ಅವರು ಪಕ್ಷದಿಂದ ಹೊರನಡೆಯಬಹುದು ಎಂದು ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ: ಮಮತಾ ಬ್ಯಾನರ್ಜಿ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಧೀರ್ ರಂಜನ್ ಚೌಧರಿ, “ನಾನೂ ಕೂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ. ನಾನೂ ಹೈಕಮಾಂಡ್​ಗೆ ಸೇರಿದ್ದೇನೆ!” ಎಂದಿದ್ದಾರೆ. ಈ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧೀರ್ ರಂಜನ್ ತಿರುಗೇಟು ನೀಡಿದ್ದಾರೆ.

ಇಂದು ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ಉದ್ಧವ್ ಠಾಕ್ರೆ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ನಾಯಕರು ಲಕ್ನೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಅಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿಯವರು ಮೊದಲು ಹೊರಗಿನಿಂದ ನಮ್ಮ ಒಕ್ಕೂಟಕ್ಕೆ ಬೆಂಬಲ ನೀಡುವುದರ ಬಗ್ಗೆ ಮಾತನಾಡಿದ್ದಾರೆ. ಹೊರಗಿನ ಬೆಂಬಲ ಹೊಸದೇನಲ್ಲ. ಮೊದಲ ಯುಪಿಎ ಸರಕಾರವನ್ನು ಎಡಪಕ್ಷಗಳೂ ಹೊರಗಿನಿಂದ ಬೆಂಬಲಿಸಿದವು. ಆದರೆ ಆ ಬಳಿಕ ಮಮತಾ ಅವರಿಂದ ಮತ್ತೊಂದು ಹೇಳಿಕೆ ಹೊರಬಿದ್ದಿದೆ. ಇದರಿಂದ ಅವರು ‘ಇಂಡಿಯಾ’ ಒಕ್ಕೂಟದ ಭಾಗವಾಗಿದ್ದಾರೆ ಮತ್ತು ಅದು ರಚನೆಯಾದರೆ ಸರ್ಕಾರಕ್ಕೆ ಸೇರುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಕುರಿತ ಅವಹೇಳನಕಾರಿ ಹೇಳಿಕೆ; ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯಗೆ ನೋಟಿಸ್

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಅಖಿಲ ಭಾರತ ಮಟ್ಟದಲ್ಲಿ ನಾವು ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾವನ್ನು ರಚಿಸಿದ್ದೇವೆ. ನಾವು ಮೈತ್ರಿ ಮಾಡಿಕೊಳ್ಳುತ್ತೇವೆ. ಅನೇಕರು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ಮೈತ್ರಿಯಲ್ಲಿ ನಾನೂ ಕೂಡ ಇದ್ದೇನೆ. ನಾನು ಆ ಮೈತ್ರಿಯನ್ನು ರಚಿಸಿದೆ, ಮೈತ್ರಿಯಲ್ಲೇ ಇರುತ್ತೇನೆ. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಇಲ್ಲ, ಕಾಂಗ್ರೆಸ್ ಕೂಡ ಇಲ್ಲ. ಆದರೆ, ಅಖಿಲ ಭಾರತ ಮಟ್ಟದಲ್ಲಿ ನಾವು ಮೈತ್ರಿ ಮಾಡಿಕೊಳ್ಳುತ್ತೇವೆ. ತಪ್ಪು ತಿಳುವಳಿಕೆಗೆ ಅವಕಾಶವಿಲ್ಲ. ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರು.

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು (ಟಿಎಂಸಿ)-ಕಾಂಗ್ರೆಸ್‌ಗೆ ಯಾವುದೇ ಸಂಬಂಧವಿಲ್ಲವಾದರೂ ಅಖಿಲ ಭಾರತ ಮಟ್ಟದಲ್ಲಿ ನಮ್ಮ ಮೈತ್ರಿ ಇರುತ್ತದೆ ಎಂದು ಮಮತಾ ಸ್ಪಷ್ಟಪಡಿಸಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್, “ಮಮತಾ ಬ್ಯಾನರ್ಜಿ ಮೈತ್ರಿಯಿಂದ ಓಡಿಹೋಗಿದ್ದಾರೆ” ಎಂದು ಹೇಳಿದ್ದರು. ಅವರ ಯಾವ ಮಾತನ್ನೂ ನಾನು ನಂಬುವುದಿಲ್ಲ. ಈಗ ಗಾಳಿ ಬದಲಾಗುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಆದ್ದರಿಂದ ನೀವು ನಮ್ಮ ದಿಕ್ಕಿನಲ್ಲಿ ಧಾವಿಸಲು ಬಯಸುತ್ತಿದ್ದೀರಿ. ಬಿಜೆಪಿಗೆ ಅಂತರ ಹೆಚ್ಚಾಗುತ್ತಿರುವುದನ್ನು ನೋಡಿದರೆ ನೀವು ಅದರತ್ತ ಹೋಗುತ್ತೀರಿ. ನಿಮಗೆ ಸ್ಪಷ್ಟತೆಯಿಲ್ಲ ಎಂದು ಟೀಕಿಸಿದ್ದರು.

ಆ ಕುರಿತು ಖರ್ಗೆ ಅವರು ಅಧೀರ್ ರಂಜನ್ ಅವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ನಮ್ಮ ಪಕ್ಷದಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸಲು ನಾವಿದ್ದೇವೆ, ಕಾಂಗ್ರೆಸ್ ಪಕ್ಷವಿದೆ, ಹೈಕಮಾಂಡ್ ಇದೆ. ಆ ನಿರ್ಧಾರವನ್ನು ನಾವು ಒಪ್ಪಿಕೊಳ್ಳಬೇಕು, ಒಪ್ಪಿಕೊಳ್ಳದಿದ್ದವರು ಹೊರಹೋಗಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ