ಮಮತಾ ಬ್ಯಾನರ್ಜಿ ಕುರಿತ ಅವಹೇಳನಕಾರಿ ಹೇಳಿಕೆ; ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯಗೆ ನೋಟಿಸ್
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅಭಿಜಿತ್ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ಅಭಿಜಿತ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಟೀಕೆ ಮಾಡಿದ್ದಕ್ಕಾಗಿ ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ (Abhijit Gangopadhyay) ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಪಶ್ಚಿಮ ಬಂಗಾಳದ (West Bengal) ತಮ್ಲುಕ್ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭಿಜಿತ್ ಗಂಗೋಪಾಧ್ಯಾಯ ಅವರು ಹಲ್ದಿಯಾದಲ್ಲಿ ಚುನಾವಣಾ ಸಭೆಯೊಂದರಲ್ಲಿ ಮಮತಾ ಬ್ಯಾನರ್ಜಿ ಬಗ್ಗೆ ಲೈಂಗಿಕ ಟೀಕೆಗಳನ್ನು ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಗಂಗೋಪಾಧ್ಯಾಯ ವಿರುದ್ಧ ದೂರು ದಾಖಲಿಸಿದ ನಂತರ ಚುನಾವಣಾ ಆಯೋಗದ ಕ್ರಮ ಅನುಸರಿಸಿದ್ದು, “ಅವರು ನೀಡುತ್ತಿರುವ ಅವಹೇಳನಕಾರಿ ಹೇಳಿಕೆ ಅವರ ಅಸಭ್ಯ ನಡವಳಿಕೆ ಮತ್ತು ಸ್ತ್ರೀದ್ವೇಷದ ಮನಸ್ಥಿತಿಯ ಸ್ಪಷ್ಟ ಚಿತ್ರಣವಾಗಿದೆ” ಎಂದು ಹೇಳಿದೆ.
ಇದನ್ನೂ ಓದಿ: ಕಾಂಗ್ರೆಸ್, ಕಮ್ಯೂನಿಸ್ಟರು ಬಿಜೆಪಿ ಪರ ಕೆಲಸ ಮಾಡ್ತಿದಾರೆ, ಅವರಿಗೆ ವೋಟ್ ಹಾಕಬೇಡಿ: ಮಮತಾ ಬ್ಯಾನರ್ಜಿ ಕರೆ
ಅಭಿಜಿತ್ ಗಂಗೋಪಾಧ್ಯಾಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ, ನಿಮ್ಮನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ? ನಿಮ್ಮ ಬೆಲೆ 10 ಲಕ್ಷವೇ? ಏಕೆಂದರೆ ನೀವು ಕೀಯಾ ಸೇಠ್ ಮೂಲಕ ನಿಮ್ಮ ಮೇಕಪ್ ಮಾಡಿಸಿಕೊಳ್ಳುತ್ತಿದ್ದೀರಾ? ಮಮತಾ ಬ್ಯಾನರ್ಜಿ ನಿಜವಾಗಿಯೂ ಮಹಿಳೆಯೇ? ಎಂದು ನನಗೆ ಕೆಲವೊಮ್ಮೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದರು. ಮೇ 15ರಂದು ಹಲ್ದಿಯಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಗಂಗೋಪಾಧ್ಯಾಯ ಅವರು ಮಮತಾ ಬ್ಯಾನರ್ಜಿ ವಿರುದ್ಧ ಈ ರೀತಿಯ ಟೀಕೆಗಳನ್ನು ಮಾಡಿದ್ದರು.
ಇದನ್ನೂ ಓದಿ: ಬಂಗಾಳವನ್ನು ಮುಸ್ಲಿಂ ರಾಜ್ಯ ಮಾಡಲು ಮಮತಾ ಬಯಸಿದ್ದಾರೆ: ಕೇಂದ್ರ ಸಚಿವ ಗಿರಿರಾಜ್ ಸಿಂಗ್
“ಅಭಿಜಿತ್ ಗಂಗೋಪಾಧ್ಯಾಯ ಅವರ ಅಸಭ್ಯ ಹೇಳಿಕೆಗಳು ಸಭ್ಯತೆ ಮತ್ತು ನೈತಿಕತೆಯ ಆಧಾರವನ್ನು ಸಂಪೂರ್ಣವಾಗಿ ಮೀರಿದೆ. ಅವರು ಕೇವಲ ಸಭ್ಯತೆಯನ್ನು ಮಾತ್ರ ಮೀರಿಲ್ಲ ನಮ್ಮ ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಬಗ್ಗೆಯೂ ದ್ವೇಷದ ಹೇಳಿಕೆ ನೀಡಿದ್ದಾರೆ” ಎಂದು ಟಿಎಂಸಿ ತನ್ನ ದೂರಿನಲ್ಲಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮೇ 20ರೊಳಗೆ ಅಭಿಜಿತ್ ಗಂಗೋಪಾಧ್ಯಾಯ ಅವರಿಂದ ಪ್ರತಿಕ್ರಿಯೆ ಕೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ