ರಾಜ್ಯದಲ್ಲಿ ಔಟ್​ ಆಫ್​ ಔಟ್​​ ಗೆಲ್ಲೋಕೆ ಸಜ್ಜಾದ ಕೇಸರಿ‌ಪಡೆ… ಖರ್ಗೆ ಕೋಟೆ ಭೇದಿಸೋಕೆ ಮಾಸ್ಟರ್ ‌ಪ್ಲಾನ್, ಏನದು ರಣತಂತ್ರ?

| Updated By: ಸಾಧು ಶ್ರೀನಾಥ್​

Updated on: Feb 02, 2024 | 1:58 PM

Kalaburagi Lok sabha Constituency: ಒಟ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಸ್ಪರ್ಧಿಸೋ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಆದ್ರೆ ಯಾರೇ ಸ್ಪರ್ಧಿಸಿದರೂ ಕಲಬುರಗಿಯಲ್ಲಿ ಮತ್ತೊಮ್ಮೆ ಕಮಲ ಅರಳಲೇ ಬೇಕು ಎನ್ನೋ ಜಿದ್ದಿಗೆ ಬಿದ್ದಿದೆ ಕಮಲ ಪಡೆ. ಅದಕ್ಕಾಗಿ ಬೇಕಿರೋ ಎಲ್ಲಾ ರಣತಂತ್ರಗಳ‌ನ್ನ ಹೆಣೆಯುತ್ತಿದೆ. ಅದೇನೆ ಇರಲಿ ಏಲೆಕ್ಷನ್ ಕಾವು ಜೋರಾಗುತ್ತಲೇ ಖರ್ಗೆ ಕೋಟೆಯಲ್ಲಿ ರಾಜಕೀಯ ಚಟುವಟಿಕೆ ಬಿರಸುಗೊಂಡಿದ್ದಂತೂ ಸುಳ್ಳಲ್ಲ.

ರಾಜ್ಯದಲ್ಲಿ ಔಟ್​ ಆಫ್​ ಔಟ್​​ ಗೆಲ್ಲೋಕೆ ಸಜ್ಜಾದ ಕೇಸರಿ‌ಪಡೆ... ಖರ್ಗೆ ಕೋಟೆ ಭೇದಿಸೋಕೆ ಮಾಸ್ಟರ್ ‌ಪ್ಲಾನ್, ಏನದು ರಣತಂತ್ರ?
ಖರ್ಗೆ ಕೋಟೆ ಭೇದಿಸೋಕೆ ಬಿಜೆಪಿ ಮಾಸ್ಟರ್ ‌ಫ್ಲಾನ್, ಏನದು ರಣತಂತ್ರ?
Follow us on

ದೇಶದಲ್ಲಿ ‌ಲೋಕಸಭೆ ಚುನಾವಣೆ ದಿನೇದಿನೆ ರಂಗೇರುತ್ತಿದೆ. ರಾಜ್ಯದಲ್ಲಿ ಕಳೆದ ವಿಧಾನಸಭೆ ಸೋಲಿನಿಂದ ಕಂಗೆಟ್ಟಿರೋ ಕಮಲ ಪಡೆ ಭರ್ಜರಿ ತಾಲೀಮು ನಡೆಸುತ್ತಿದೆ. ಶತಾಯಗತಾಯ ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರ ಗೆಲ್ಲೋಕೆ ಸಜ್ಜಾಗಿರೋ ಕೇಸರಿ‌ಪಡೆ (BJP) ನಾಯಕರು,‌ ಮೊದಲ ಹಂತವಾಗಿ ಖರ್ಗೆ (Mallikarjun Kharge) ಕೋಟೆಯನ್ನ ಮತ್ತೊಮ್ಮೆ ಭೇದಿಸೋಕೆ ಮಾಸ್ಟರ್ ‌ಪ್ಲಾನ್ ರೂಪಿಸಿದ್ದಾರೆ. ಹಾಗಿದ್ರೆ ಕಲಬುರಗಿಯಲ್ಲಿ (Kalaburagi Lok sabha Constituency) ಬಿಜೆಪಿ ಹೆಣೆದಿರೋ ರಣತಂತ್ರ ಎಂತಹುದು ಅನ್ನೋ ವಿವರ ಇಲ್ಲಿದೆ.

ಹೌದು, ಕಲಬುರಗಿ – ಇದು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಅಷ್ಟೆ ಏಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ತವರೂರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖರ್ಗೆ ತವರೂರಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿತ್ತು. ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಸಧ್ಯ ಆ ಚುನಾವಣೆ ಒಂದು ವರ್ಷ ಕಳೆಯುವಷ್ಟಲ್ಲೆ ಲೋಕಸಭೆ ಚುನಾವಣೆ ಬಂದಿದೆ. ಕಾಂಗ್ರೆಸ್ ಅದೇ ಗೆಲುವಿನ ಗುಂಗಿನಲ್ಲಿದೆ. ಆದ್ರೆ ಬಿಜೆಪಿ ಮಾತ್ರ ಈ ಬಾರಿ ಶತಾಯಗತಾಯ ಮತ್ತೊಮ್ಮೆ ಖರ್ಗೆ ಕೋಟೆಯನ್ನ ಭೇದಿಸೋಕೆ ಸಜ್ಜಾಗಿದೆ. ಅದಕ್ಕಾಗಿ ಮಾಸ್ಟರ್ ಫ್ಲ್ಯಾನ್ ರೂಪಿಸಿದೆ.

ಖರ್ಗೆ ಕೋಟೆ ಭೇದಿಸಲು ಘರ್ ವಾಪ್ಸಿ ರಣತಂತ್ರ ಹೆಣೆದ್ರಾ ಕಮಲ ನಾಯಕರು

ಹೌದು, ಯಾವಾಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ತಕ್ಕೆಗೆ ಜಾರಿದ್ರೋ ಅವಾಗಲೇ ಬಿಜೆಪಿ ನಾಯಕರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ತೊರೆದವರ ಘರ್ ವಾಪ್ಸಿಗೆ ಕೈ ಹಾಕಿದ್ದಾರೆ. ಕಲಬುರಗಿಯ ಇನ್ನೊಬ್ಬ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗಿದೆ.

ಚಿಂಚನಸೂರ ಕಳೆದ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಅಲ್ದೇ ಗುರುಮಿಠಕಲ್ ಕ್ಷೇತ್ರದಲ್ಲಿ ಕೈನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಲಬುರಗಿ ಭಾಗದ ಪ್ರಬಲ ಕೋಲಿ ಸಮಾಜದ ಮುಖಂಡರಾಗಿರೋ ಬಾಬುರಾವ್ ಚಿಂಚನಸೂರ‌್, ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಚಿಂಚನಸೂರ ಬಿಜೆಪಿ ಕರೆತರಲು ಸಿದ್ದತೆ ನಡೆಸಿದ್ದಾರೆ.

ಇದನ್ನೂ ಓದಿ: ನಾನೇನು ಫುಟ್ಬಾಲೇ? ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಎಂಎಲ್​ಸಿ ಪ್ರಕಾಶ್​ ಹುಕ್ಕೇರಿ ಆಕ್ರೋಶ

ಚಿಂಚನಸೂರ ಜೊತೆ ಈಗಾಗಲೇ ಮಾತುಕತೆ ನಡೆಸಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಹೊತ್ತಿರೊ ಸುರಪುರ ಮಾಜಿ ಶಾಸಕ ರಾಜುಗೌಡ ಕಲಬುರಗಿ ಲೋಕಸಭಾ ಕ್ಷೇತ್ರವನ್ನ ಮತ್ತೆ ಉಳಿಸಿಕೊಳ್ಳಲು ಈಗಿನಿಂದಲೇ ರಣತಂತ್ರ ಹೆಣೆಯುತ್ತಿದ್ದಾರೆ. ಯಾಕೆ ಅಂದ್ರೆ ಕಲಬುರಗಿ ಲೋಕಸಭಾ ಕ್ಷೇತ ವ್ಯಾಪ್ತಿಯಲ್ಲಿ ಕೋಲಿ ಸಮಾಜದ ಮತಗಳು ಹೆಚ್ಚಿದ್ದು, ಚಿಂಚನಸೂರವರನ್ನ ಸೆಳೆದ್ರೆ ಬಿಜೆಪಿಗೆ ಅನೂಕುಲವಾಗುತ್ತೆ ಎಂದು.

ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ – ಸಿ.ಟಿ. ರವಿ ಲೋಕ ಕಾರ್ಯಾಚರಣೆ

ಮೊನ್ನೆ ವಿಜಯೇಂದ್ರ ಕಲಬುರಗಿಗೆ ಬಂದಾಗ ಬಿಜೆಪಿ ಮುಖಂಡರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಂದ ಕೂಡಾ ಹಸಿರು ನಿಶಾನೆ ನೀಡಿದ್ದು, ಸದ್ಯದಲ್ಲೇ ಚಿಂಚನಸೂರನ್ನು ಮರಳಿ ಕರೆತರುವ ಸಾಧ್ಯತೆಯಿದೆ. ಇನ್ನು ಚಿಂಚನಸೂರ ಬರುವುದರಿಂದ ಬಿಜೆಪಿಗೆನೂ ಲಾಭ? ಅನ್ನೋದನ್ನ ನೋಡೊದಾದ್ರೆ… ‌ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು ಮತದಾರರ ಸಂಖ್ಯೆ 19 ಲಕ್ಷ 76 ಸಾವಿರ ಈ ಪೈಕಿ 3 ಲಕ್ಷ ಕೋಲಿ ಸಮಾಜದ ಮತದಾರರಿದ್ದಾರೆ. ಈ ಮತಗಳ ಮೇಲೆ ಕಣ್ಣಿಟ್ಟೇ ಬಾಬುರಾವ್ ಚಿಂಚನಸೂರರನ್ನು ಮರಳಿ ಗಾಳ ಹಾಕಿದೆ ಬಿಜೆಪಿ.

ಯಾಕೆಂದ್ರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೆದಾರ್ ಅವರಂತಹ ಹಿಂದುಳಿದ ವರ್ಗದ ನಾಯಕರ‌ನ್ನ ಬಿಜೆಪಿ ತನ್ನತ್ತ ಸೆಳೆದಿತ್ತು. ಘಟಾನುಘಟಿ ನಾಯಕರು ಖರ್ಗೆಗೆ ಕೈ ಕೊಟ್ಟು ಕಮಲ ಮುಡಿದಿದ್ದರು. ಅದಕ್ಕಾಗೇ 2019 ರಲ್ಲಿ ಖರ್ಗೆ ಮೊದಲ ಬಾರಿಗೆ ಸೋಲಿನ ಕಹಿ ಅನುಭವಿಸಿದ್ದರು. ಸಧ್ಯ ಮತ್ತೊಮ್ಮೆ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ತೊರೆದ ಬಾಬುರಾವ್ ಚಿಂಚನಸೂರ್, ನಿತೀನ್ ಗುತ್ತೆದಾರರಂತ ಮುಖಂಡರನ್ನ ಸೆಳೆಯುತ್ತಿದೆ. ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದಕ್ಕೆ ನಿತೀನ್ ಗುತ್ತೆದಾರ್ ಅಫಜಲಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣವಾಗಿದ್ದರು. ಅಲ್ಲದೇ ಬರೋಬ್ಬರಿ 51 ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದರು. ಹೀಗಾಗಿ ಗುತ್ತೆದಾರ್ ವಾಪಸ್ ಕರೆತರೋಕೆ ಸಿ.ಟಿ. ರವಿ ಕಳೆದ ತಿಂಗಳು ಯಾರಿಗೂ ಮಾಹಿತಿ ನೀಡದೆ ನಿತೀನ್ ಮನೆಗೆ ಬಂದು ಮಾತುಕತೆ ನಡೆಸಿ ಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Fri, 2 February 24