LS Election 2024 Result day holiday: ಜೂನ್ 4ಕ್ಕೆ ಚುನಾವಣಾ ಫಲಿತಾಂಶ; ಅಂದು ಇದೆಯಾ ರಜೆ?
India General Election Vote Counting Date: ಹದಿನೆಂಟನೇ ಲೋಕಸಭಾ ಚುನಾವಣೆಯ ಎಲ್ಲಾ ಏಳು ಹಂತಗಳ ಮತದಾನ ಜೂನ್ 1ಕ್ಕೆ ಮುಗಿಯುತ್ತದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಅಂದೇ ಪ್ರಕಟವಾಗಲಿದೆ. ಮತದಾನ ದಿನಗಳಂದು ಆಯಾ ಪ್ರದೇಶಗಳಲ್ಲಿ ಸಾರ್ವತ್ರಿಕ ರಜೆ ಇತ್ತಾದ್ದರಿಂದ ಫಲಿತಾಂಶದ ದಿನವೂ ರಜೆ ಇರಬಹುದಾ ಎಂದು ಹಲವರಲ್ಲಿ ಗೊಂದಲ ಇರಬಹುದು. ಆದರೆ, ಅಂದು ಯಾವುದೇ ರಜೆ ನೀಡಲಾಗಿಲ್ಲ.
ನವದೆಹಲಿ, ಮೇ 29: ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಮಹಾ ಚುನಾವಣೆಯಲ್ಲಿ (Lok sabha elections 2024) ಮತದಾರರ ಬೆಂಬಲ ಯಾರಿಗೆ ಸಿಕ್ಕಿದೆ ಎನ್ನುವುದು ಜೂನ್ 4ರಂದು ಗೊತ್ತಾಗಲಿದೆ. ಅಂದು ಮಂಗಳವಾರ ಏಳು ಹಂತಗಳಲ್ಲಿ ನಡೆದ ಮತದಾನದಲ್ಲಿ ಚಲಾವಣೆಯಾದ ಮತಗಳ ಎಣಿಕೆ ಆಗಲಿದೆ. ಬೆಳಗ್ಗೆ ಶುರುವಾದರೆ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಮುನ್ನೋಟ ದೊರಕಿ ಬಿಡುತ್ತದೆ. ಮತ ಎಣಿಕೆ ಪೂರ್ಣಗೊಳ್ಳಲು ತಡರಾತ್ರಿಯಾದರೂ ಆಗಬಹುದು. ಈ ಮಹಾ ಪ್ರಕ್ರಿಯೆ ನಡೆಯುವ ಜೂನ್ 4, ಮಂಗಳವಾರದಂದು ಸಾರ್ವತ್ರಿಕ ರಜೆ ಇರುತ್ತದಾ?
ಮತ ಎಣಿಕೆಯ ದಿನದಂದು ಸಾರ್ವತ್ರಿಕ ರಜೆ ಇರುವುದಿಲ್ಲ. ಮತದಾನ ದಿನಗಳಂದು ಆ ಪ್ರಕ್ರಿಯೆ ನಡೆಯುವ ಪ್ರದೇಶಗಳಲ್ಲಿ ರಜೆ ನೀಡಲಾಗಿತ್ತು. ಎಲ್ಲರಿಗೂ ಪ್ರಜಾಸತ್ತಾತ್ಮಕವಾಗಿ ಬಂದಿರುವ ತಮ್ಮ ಮತದಾನ ಹಕ್ಕನ್ನು ಚಲಾಯಿಸಲಿ ಎನ್ನುವ ಉದ್ದೇಶದಿಂದ ರಜೆ ಘೋಷಿಸಲಾಗಿತ್ತು. ಆದರೆ, ಮತ ಎಣಿಕೆಯ ದಿನದಂದು ರಜೆ ನೀಡಲಾಗಿಲ್ಲ. ಸರ್ಕಾರಿ ಕಚೇರಿ, ಬ್ಯಾಂಕು ಇತ್ಯಾದಿ ಎಲ್ಲವೂ ಯಥಾ ಪ್ರಕಾರ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: Lok Sabha Election 2024 Result date:ಲೋಕಸಭೆ ಚುನಾವಣೆ 2024: ಮತ ಎಣಿಕೆ, ಫಲಿತಾಂಶ ಯಾವಾಗ?
543 ಸದಸ್ಯ ಬಲದ ಲೋಕಸಭೆಗೆ ಏಳು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. ಈಗಾಗಲೇ ಆರು ಹಂತದ ಮತದಾನವಾಗಿದೆ. ಜೂನ್ 1ಕ್ಕೆ ಅಂತಿಮ ಹಾಗೂ ಆರನೇ ಹಂತದ ಮತದಾನ ಇದೆ. ಉತ್ತರಪ್ರದೇಶ, ಬಿಹಾರ, ಹಿಮಾಚಲಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಡ ರಾಜ್ಯಗಳಲ್ಲಿನ 57 ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನವಾಗಲಿದೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದೆ. ಯುಪಿಎ ಒಕ್ಕೂಟ ಇಂಡಿಯಾ ಹೆಸರಿನಲ್ಲಿ ಹೊಸ ಅವತಾರದಲ್ಲಿದ್ದು ಹತ್ತು ವರ್ಷ ಬಳಿಕ ಗದ್ದುಗೆ ಹಿಡಿಯಲು ಹೊರಟಿದೆ.
2014ರಲ್ಲಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರನ್ನು 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೆಸರಿಸಲಾಗಿತ್ತು. ಆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 282 ಸ್ಥಾನ ಗೆದ್ದು ಸರಳ ಬಹುಮತ ಪಡೆಯಿತು. 2019ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಗೆದ್ದ ಕ್ಷೇತ್ರಗಳ ಸಂಖ್ಯೆ 303ಕ್ಕೆ ಏರಿತು.
ಈಗ ಎನ್ಡಿಎ ಮೈತ್ರಿಕೂಟ 400 ಸ್ಥಾನದ ಗಡಿ ದಾಟುವ ಅಜೆಂಡಾ ಇಟ್ಟಿದೆ. ಜೂನ್ 1ಕ್ಕೆ ಕೊನೆಯ ಹಂತದ ಚುನಾವಣೆ ಮುಕ್ತಾಯವಾದ ಬಳಿಕ ಸಂಜೆ 7ಕ್ಕೆ ವಿವಿಧ ಮತಗಟ್ಟೆ ಸಮೀಕ್ಷೆಗಳು ಹೊರಬರಲಿದ್ದು, ಯಾರು ಗೆಲ್ಲಬಹುದು ಎನ್ನುವ ಅಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಜೂನ್ 4ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ