ನವದೆಹಲಿ, ಜೂನ್ 6: ಲೋಕಸಭೆ ಚುನಾವಣೆಯಲ್ಲಿ (Lok Sabha Election) 240 ಸ್ಥಾನಗಳೊಂದಿಗೆ ಬಿಜೆಪಿ (BJP) ಮತ್ತೊಮ್ಮೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 18ನೇ ಲೋಕಸಭೆಯಲ್ಲಿ 280 ಸಂಸದರು (New MPs) ಮೊದಲ ಬಾರಿಗೆ ಸಂಸತ್ತಿನ ಕೆಳಮನೆ ಸದಸ್ಯರಾಗಲಿದ್ದಾರೆ. ಇವರಲ್ಲಿ ಮಾಜಿ ಮುಖ್ಯಮಂತ್ರಿ, ಚಲನಚಿತ್ರ ತಾರೆಯರು, ಹೈಕೋರ್ಟ್ನ ಮಾಜಿ ನ್ಯಾಯಾಧೀಶರು ಮತ್ತು ರಾಜಕೀಯ ಕಾರ್ಯಕರ್ತರು ಸೇರಿದ್ದಾರೆ. ಉತ್ತರ ಪ್ರದೇಶದಿಂದ ಮೊದಲ ಬಾರಿಗೆ 45 ಸದಸ್ಯರು ಆಯ್ಕೆಯಾಗಿದ್ದಾರೆ. ಜನಪ್ರಿಯ ಧಾರಾವಾಹಿ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್ (ಮೀರತ್), ಅಮೇಥಿ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ, ಸಮಾಜವಾದಿ ಪಕ್ಷದ ನಾಯಕ ಚಂದ್ರಶೇಖರ್ ಆಜಾದ್ ಸೇರಿದಂತೆ ಅನೇಕ ಸಂಸದರು ಇವರಲ್ಲಿ ಸೇರಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ 267 ಮಂದಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು.
ಪುನರಾಯ್ಕೆಯಾದ ಸಂಸದರಲ್ಲಿ ಎಂಟು ಮಂದಿ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿದ್ದರು ಮತ್ತು ಒಬ್ಬರು ಎರಡು ಕ್ಷೇತ್ರಗಳಿಂದ ಗೆದ್ದಿದ್ದಾರೆ. 17ನೇ ಲೋಕಸಭೆಯಲ್ಲಿ ಒಂಬತ್ತು ಮರು ಚುನಾಯಿತ ಸಂಸದರು ಬೇರೆ ಪಕ್ಷವನ್ನು ಪ್ರತಿನಿಧಿಸಿದರೆ, ಎಂಟು ಮಂದಿ ತಮ್ಮ ಹಿಂದಿನ ಪಕ್ಷದಿಂದ ಬೇರ್ಪಟ್ಟ ಬಣವನ್ನು ಪ್ರತಿನಿಧಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ 53 ಸಚಿವರ ಪೈಕಿ 35 ಮಂದಿ ಗೆದ್ದಿದ್ದಾರೆ.
ಹೊಸ ಲೋಕಸಭೆಯಲ್ಲಿ 240 ಸ್ಥಾನಗಳೊಂದಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಯ ನಂತರದ ದೊಡ್ಡ ಪಕ್ಷವೆಂದರೆ ಕಾಂಗ್ರೆಸ್. ಇದು 99 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸಮಾಜವಾದಿ ಪಕ್ಷವು 37 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ 16 ಕ್ಷೇತ್ರಗಳಲ್ಲಿ ಬಿಜೆಪಿ ದಡ ಸೇರಲು ನೆರವಾದ ಬಿಎಸ್‌ಪಿ ಅಭ್ಯರ್ಥಿಗಳು! ಹೇಗೆಂಬ ಮಾಹಿತಿ ಇಲ್ಲಿದೆ
ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಟಿಡಿಪಿ, ಜೆಡಿಎಯು, ಜೆಡಿಎಸ್ ಹಾಗೂ ಇತರ ಮಿತ್ರಪಕ್ಷಗಳ ಜತೆಗೂಡಿ ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ. ಜೂನ್ 8 ಅಥವಾ 9ರಂದು ಮತ್ತೊಮ್ಮೆ, ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ