ನವದೆಹಲಿ: ಟಿವಿಗಳಲ್ಲಿ ನಡೆಯುವ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ (Exit Polls Debate) ಭಾಗವಹಿಸುವುದಿಲ್ಲ ಎಂದಿದ್ದ ಕಾಂಗ್ರೆಸ್ ಇದೀಗ ಯು-ಟರ್ನ್ ಹೊಡೆದಿದೆ. ಇಂದು ಮಧ್ಯಾಹ್ನ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮನೆಯಲ್ಲಿ ನಡೆದ ಇಂಡಿಯ ಒಕ್ಕೂಟದ ಸಭೆಯಲ್ಲಿ ಎಲ್ಲ ಪಕ್ಷಗಳ ನಾಯಕರೂ ಸೇರಿ ದೂರದರ್ಶನದಲ್ಲಿ ಲೋಕಸಭೆ ಚುನಾವಣೆಯ (Lok Sabha Elections) ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸಲು ನಿರ್ಧರಿಸಿರುವುದಾಗಿ ಕಾಂಗ್ರೆಸ್ ಮಾಹಿತಿ ನೀಡಿದೆ.
“ಇಂಡಿಯ ಬಣದ ಪಕ್ಷಗಳು ಸಭೆ ಸೇರಿ ಬಿಜೆಪಿ ಮತ್ತು ಅದರ ಪರಿಸರ ವ್ಯವಸ್ಥೆಯನ್ನು ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಬಹಿರಂಗಪಡಿಸಲು ನಿರ್ಧರಿಸಿವೆ. ಎಕ್ಸಿಟ್ ಪೋಲ್‌ನಲ್ಲಿ ಭಾಗವಹಿಸುವ ಪರ ಮತ್ತು ವಿರುದ್ಧ ಅಂಶಗಳನ್ನು ಪರಿಗಣಿಸಿದ ನಂತರ, ಇಂದು ಸಂಜೆ ದೂರದರ್ಶನದಲ್ಲಿ ನಡೆಯುವ ಎಕ್ಸಿಟ್ ಪೋಲ್ ಚರ್ಚೆಯಲ್ಲಿ ಇಂಡಿಯ ಬಣದ ಎಲ್ಲಾ ಪಕ್ಷಗಳು ಭಾಗವಹಿಸಲು ಒಮ್ಮತದಿಂದ ನಿರ್ಧರಿಸಲಾಗಿದೆ” ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Lok Sabha Elections 2024: ಇಂದು ಅಂತಿಮ ಹಂತದ ಲೋಕಸಭೆ ಚುನಾವಣೆ; 57 ಕ್ಷೇತ್ರಗಳಲ್ಲಿ ಮತದಾನ
ವಿರೋಧ ಪಕ್ಷಗಳ ಒಕ್ಕೂಟದ ಮೈತ್ರಿಕೂಟದ ಪಾಲುದಾರರಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಎಕ್ಸಿಟ್ ಪೋಲ್‌ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಶುಕ್ರವಾರ ಘೋಷಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಿವಾಸದಲ್ಲಿ ಸಭೆ ನಡೆಸಿದ ನಂತರ, 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯ ಬಣ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇಂಡಿಯ ಮೈತ್ರಿಕೂಟ ಕನಿಷ್ಠ 295 ಸ್ಥಾನಗಳನ್ನು ಗೆಲ್ಲಲಿದೆ ಎಂದು ಖರ್ಗೆ ಹೇಳಿದ್ದಾರೆ.
ಪ್ರತಿಪಕ್ಷಗಳ ನೇತೃತ್ವದ ಇಂಡಿಯ ಬ್ಲಾಕ್ ಸಭೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2 ಗಂಟೆಗಳ ಕಾಲ ನಡೆಯಿತು. ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಸೋನಿಯಾ ಗಾಂಧಿ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ: Lok Sabha Elections: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಂದು ಇಂಡಿಯ ಬ್ಲಾಕ್ ಸಭೆ
ಇಂದು (ಶನಿವಾರ) ಸಂಜೆ 6 ಗಂಟೆಯ ನಂತರ ಎಕ್ಸಿಟ್ ಪೋಲ್ ಫಲಿತಾಂಶ ಬರಲು ಪ್ರಾರಂಭವಾಗುತ್ತದೆ. ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು (ಮಂಗಳವಾರ) ನಡೆಯಲಿದೆ. ಭಾರತದಲ್ಲಿ ಎಕ್ಸಿಟ್ ಪೋಲ್‌ಗಳನ್ನು ಹಲವಾರು ಸಂಸ್ಥೆಗಳು ನಡೆಸುತ್ತವೆ, ಆಗಾಗ ಮಾಧ್ಯಮ ಸಂಸ್ಥೆಗಳೊಂದಿಗೆ ಟೈ-ಅಪ್ ಮಾಡುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Sat, 1 June 24