ನವದೆಹಲಿ, ಏಪ್ರಿಲ್ 19: ಲೋಕಸಭೆಯ 543 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೊದಲ ಹಂತದ ಮತದಾನ (Lok Sabha Elections Phase 1 voting) ಇಂದು ಶುಕ್ರವಾರ ನಡೆಯುತ್ತಿದೆ. ಈ ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಚುನಾವಣೆ ಆಗುತ್ತಿದೆ. ಒಟ್ಟು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಕ್ಷೇತ್ರಗಳಿಗೆ ಇಂದು ಮತದಾನ ಆಗುತ್ತಿದೆ. ಈ ಪೈಕಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಚುನಾವಣೆ ಆಗುತ್ತಿದೆ. ನಿತಿನ್ ಗಡ್ಕರಿ ಮೊದಲಾದ ಹಲವು ಘಟಾನುಘಟಿಗಳು ಈ ಮೊದಲ ಹಂತದ ಅಭ್ಯರ್ಥಿಗಳ ಸಾಲಿನಲ್ಲಿ ಇದ್ದಾರೆ.
ಏಪ್ರಿಲ್ 19ರಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗುತ್ತದೆ. ಸಂಜೆ 5ರವರೆಗೂ ಇದು ನಡೆಯುತ್ತದೆ. ಆರು ಗಂಟೆಯವರೆಗೆ ಹೆಚ್ಚುವರಿ ಸಮಯ ಇರುತ್ತದೆ. ಸಂಜೆ 5ರೊಳಗೆ ಮತದಾನಕ್ಕೆ ಬಂದವರಿಗೆ ಮತದಾನದ ಅವಕಾಶ ಸಿಗಲು ಒಂದು ಗಂಟೆ ಹೆಚ್ಚುವರಿ ಸಮಯ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಇವಿಎಂ ಹೇಗೆ ಕೆಲಸ ಮಾಡುತ್ತೆ? ಸುಪ್ರೀಂಕೋರ್ಟ್ಗೆ ಮಾಹಿತಿ ಕೊಟ್ಟ ಚುನಾವಣಾ ಆಯೋಗ
ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲೂ ಇಂದೇ ಮತದಾನ ನಡೆಯುತ್ತಿರುವುದು ಗಮನಾರ್ಹ. ಛತ್ತೀಸ್ಗಡದಲ್ಲಿ ಇಂದು ಒಂದೇ ಕ್ಷೇತ್ರಕ್ಕೆ ಚುನಾವಣೆ ಆಗುತ್ತಿದೆ. ನಕ್ಸಲ್ಪೀಡಿತ ಬಸ್ತಾರ್ನಲ್ಲಿ ಮಾತ್ರವೇ ಇದು ವೋಟಿಂಗ್ ಇರುವುದು. ಜಮ್ಮು ಕಾಶ್ಮೀರದಲ್ಲೂ ಉಗ್ರ ಪೀಡಿತ ಉಧಂಪುರ್ನಲ್ಲಿ ಮಾತ್ರ ಇಂದು ಚುನಾವಣೆ ಆಗುತ್ತಿದೆ. ಭದ್ರತಾ ದೃಷ್ಟಿಯಿಂದ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.
ಒಟ್ಟು ಎಂಟು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಬ್ಬರು ಮಾಜಿ ರಾಜ್ಯಪಾಲರು ಇವತ್ತಿನ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಬಿಜೆಪಿಯ ನಿತಿನ್ ಗಡ್ಕರಿ, ಉತ್ತರಪ್ರದೇಶದ ಪಿಲಿಭಿಟ್ನಲ್ಲಿ ಬಿಜೆಪಿಯ ಜತಿನ್ ಪ್ರಸಾದ, ಅರುಣಾಚಲದಲ್ಲಿ ಕಿರಣ್ ರಿಜಿಜು, ತಮಿಳುನಾಡಿನಲ್ಲಿ ಡಿಎಂಕೆಯ ಎ ರಾಜ, ಬಿಜೆಪಿಯ ಕೆ ಅಣ್ಣಾಮಲೈ, ಕಾಶ್ಮೀರದ ಉಧಮ್ಪುರ್ನಲ್ಲಿ ಬಿಜೆಪಿಯ ಜಿತೇಂದ್ರ ಸಿಂಗ್ ಮೊದಲಾದ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
102 ಕ್ಷೇತ್ರಗಳಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ. 8ರಷ್ಟಿದೆ.
102 ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟ ತಲಾ 48 ಸ್ಥಾನಗಳನ್ನು ಹೊಂದಿವೆ. ಬಿಎಸ್ಪಿ 3 ಸ್ಥಾನ ಹೊಂದಿದೆ. ಎಐಎಡಿಎಂಕೆ, ಶಿವಸೇನಾ ಮತ್ತು ಎನ್ಸಿಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದವು.
2019ರ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಡಿಎಂಕೆಯೊಂದೇ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ, ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟ 38 ಸ್ಥಾನಗಳನ್ನು ಪಡೆದಿತ್ತು. ಎನ್ಡಿಎಗೆ ಒಂದು ಸ್ಥಾನ ಮಾತ್ರ ಸಿಕ್ಕಿತ್ತು.
ಇದನ್ನೂ ಓದಿ: ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯಲು ಮುಂದಾಗಿರುವ ತಮಿಳುನಾಡಿನಲ್ಲಿ ನಾಳೆ ಮತದಾನ
ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19, 26, ಮೇ 7, 13, 20, 25 ಮತ್ತು ಜೂನ್ 1ರಂದು ವಿವಿಧ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜೂನ್ 5ರಂದು ಮತ ಎಣಿಕೆ ಆಗುತ್ತದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ಆಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:45 am, Fri, 19 April 24