Lok Sabha Elections: ಕೊನೇ ಕ್ಷಣದಲ್ಲಿ ಮಂಡ್ಯದಲ್ಲಿ ಕಣಕ್ಕಿಳಿಯಲು ಕುಮಾರಸ್ವಾಮಿ ನಿರ್ಧಾರ; ಇದರ ಹಿಂದಿದೆ ಹಲವು ಲೆಕ್ಕಾಚಾರ!

| Updated By: ಗಣಪತಿ ಶರ್ಮ

Updated on: Mar 19, 2024 | 7:29 AM

Mandya Lok Sabha Constituency: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್​​ನ ಹೆಚ್​ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಜೆಡಿಎಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ. ಕುಮಾರಸ್ವಾಮಿ ಸ್ಪರ್ಧೆ ಹಿಂದೆ ಹಲವು ಲೆಕ್ಕಾಚಾರಗಳನ್ನು ಜೆಡಿಎಸ್​​ ಹಾಕಿಕೊಂಡಿದೆ. ಅವುಗಳೇನು? ಮುಂದೆ ಓದಿ.

Lok Sabha Elections: ಕೊನೇ ಕ್ಷಣದಲ್ಲಿ ಮಂಡ್ಯದಲ್ಲಿ ಕಣಕ್ಕಿಳಿಯಲು ಕುಮಾರಸ್ವಾಮಿ ನಿರ್ಧಾರ; ಇದರ ಹಿಂದಿದೆ ಹಲವು ಲೆಕ್ಕಾಚಾರ!
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಮಾರ್ಚ್ 19: ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿಕೂಟದಲ್ಲಿ (BJP JDS Alliance) ಮಂಡ್ಯ (Mandya) ಲೋಕಸಭಾ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದೇ ಸದ್ಯ ಬಹಳಷ್ಟು ಕುತೂಹಲ ಮೂಡಿಸಿರುವ ಪ್ರಶ್ನೆ. ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ವದಂತಿಗಳ ಮಧ್ಯೆ, ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಕೂಡ ಬಿಜೆಪಿ ಟಿಕೆಟ್​ಗೆ ಪೈಪೋಟಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಇತ್ತೀಚಿನ ವರದಿಗಳ ಪ್ರಕಾರ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರೇ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಬಹುತೇಕ ನಮಗೆ ಎಂಬುದು ಖಚಿತವಾಗಿದೆ ಎಂದು ಈಗಾಗಲೇ ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಸಿಎಸ್ ಪುಟ್ಟರಾಜು ಅವರ ಹೆಸರು ಮಂಡ್ಯ ಕ್ಷೇತ್ರಕ್ಕೆ ಹಿಂದೆ ಹಲವು ಬಾರಿ ಕೇಳಿಬಂದಿದೆ. ಆದರೆ ಇದೀಗ, ಕೊನೆ ಕ್ಷಣದಲ್ಲಿ ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಲವು ಲೆಕ್ಕಾಚಾರಗಳನ್ನು ಅಳೆದು ತೂಗಿ ಜೆಡಿಎಸ್ ಈ ನಿರ್ಧಾರಕ್ಕೆ ಬಂದಿದೆ.

ಕುಮಾರಸ್ವಾಮಿ ಕಣಕ್ಕೆ ಇಳಿಯಲು ಕಾರಣವೇನು?

ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದೇ ಆದಲ್ಲಿ ಅವರ ವಿರುದ್ಧ ಪ್ರಬಲ ಎನ್ನಬಹುದಾದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದಲ್ಲಿಲ್ಲ.ಅವರು ಸ್ಪರ್ಧೆ ಮಾಡಿದರೆ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಸಾಧ್ಯತೆ ಹೆಚ್ಚಿದೆ. ಇಷ್ಟೇ ಅಲ್ಲದೆ ಮಂಡ್ಯದಲ್ಲಿ ಕುಮಾರಸ್ವಾಮಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಕುಮಾರಸ್ವಾಮಿ ಸ್ಪರ್ಧೆಯಿಂದ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ. ಕಾರ್ಯಕರ್ತರಲ್ಲಿ ಕೂಡ ಹೊಸ ಹುರುಪು ಬರಲಿದೆ ಎಂಬ ಲೆಕ್ಕಾಚಾರ ಜೆಡಿಎಸ್​ನದ್ದಾಗಿದೆ.

ಇದನ್ನೂ ಓದಿ: ಎರಡು ಸೀಟಿಗಾಗಿ ಇಷ್ಟೆಲ್ಲಾ ಪ್ರಯತ್ನ ಪಡೆಬೇಕಾ, ಹೊಂದಾಣಿಕೆ ಬೇಕಾ? ಬಿಜೆಪಿ ನಡೆಗೆ ಎಚ್​ಡಿ ಕುಮಾರಸ್ವಾಮಿ ಬೇಸರ

ಮತ್ತೊಂದೆಡೆ, ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದೇ ಆದರೆ ಸುಮಲತಾ ಕೂಡ ಹೆಚ್ಚು ವಿರೋಧ ಮಾಡಲಾರರು ಎಂಬ ಅಂದಾಜು ಜೆಡಿಎಸ್ ನಾಯಕರದ್ದಾಗಿದೆ. ಈ ಎಲ್ಲ ಕಾರಣಗಳನ್ನು ಅಳೆದು ತೂಗಿ ಕುಮಾರಸ್ವಾಮಿಯೇ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.. ಆದಾಗ್ಯೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಬಿಜೆಪಿ, ಜೆಡಿಎಸ್ ಇನ್ನೂ ಅಂತಿಮ ಅಧಿಕೃತ ನಿರ್ಧಾರ ಪ್ರಕಟಿಸದಿರುವುದು ದಿನೇದಿನೇ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಹೃದಯದ ಚಿಕಿತ್ಸೆಗಾಗಿ ಚೆನ್ನೈಗೆ ಕುಮಾರಸ್ವಾಮಿ

ಈ ಮಧ್ಯೆ, ಹೃದಯ ಚಿಕಿತ್ಸೆಗಾಗಿ ಕುಮಾರಸ್ವಾಮಿ ಇಂದು ಚೆನ್ನೈಗೆ ತೆರಳಲಿದ್ದಾರೆ ಎಂಬುದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:21 am, Tue, 19 March 24