ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಸಿಗುವ ವಿಶ್ವಾಸವಿದೆ: ನಿಖಿಲ್ ಕುಮಾರಸ್ವಾಮಿ
ಲೋಕಸಭೆ ಚುನಾವಣೆಯ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಕರ್ನಾಟಕದ ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳ ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ಜಟಾಪಟಿ ಮುಂದುವರಿದಿದೆ. ಕೋಲಾರ ಕ್ಷೇತ್ರದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಸಿಗುವ ವಿಶ್ವಾಸವಿದೆ ಎಂದರು. ಅಲ್ಲದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಅವರನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ.
ರಾಮನಗರ, ಮಾ.18: ಕೋಲಾರ (Kolar) ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಸಿಗುವ ವಿಶ್ವಾಸ ಇದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ. ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಂದೆಯವರ ಜೊತೆ ಸೀಟು ಹಂಚಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ನಾವು ಹೆಚ್ಚು ಸೀಟು ಕೇಳಿಲ್ಲ. ಕೇವಲ 3 ರಿಂದ 4 ಸ್ಥಾನಗಳನ್ನಷ್ಟೇ ಕೇಳುತ್ತಿದ್ದೇವೆ ಎಂದರು.
ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬುದು ನಮ್ಮ ಆಸೆ. 28 ಸ್ಥಾನ ಗೆದ್ದು ಪ್ರಧಾನಿಗೆ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೇವೆ ಎಂದು ಹೇಳಿದ ನಿಖಿಲ್, ಕೋಲಾರ ವಿಧಾನ ಸಭಾ ಚುನಾವಣೆಯಲ್ಲಿ 5 ಲಕ್ಷ ಮತಗಳನ್ನು ಪಡೆದಿದೆ. ಹೀಗಾಗಿ ಅಲ್ಲಿ ಸೀಟು ಸಿಗಬಹದೆಂಬ ಆಶಾಭಾವನೆ ಇದೆ. ನಾಳೆ ಬೆಳಿಗ್ಗೆ ಒಳಗೆ ಒಳಗೆ ಎಲ್ಲವೂ ತಿಳಿಯಾಗುತ್ತದೆ ಎಮದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ. ಚುನಾವಣೆ ಸಮರ್ಥವಾಗಿ ಎದುರಿಸುತ್ತೇವೆ. ಮಂಜುನಾಥ್ ಅವರು 17 ವರ್ಷಗಳ ಕಾಲ ಜಯದೇವಕ್ಕೆ ಹೊಸ ರೂಪಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಹೆಸರಾಂತ ಡಾಕ್ಟರ್ ಅನ್ನೋದು ಗೊತ್ತಿರುವ ವಿಚಾರ ಎಂದರು.
ಇದನ್ನೂ ಓದಿ: ಎರಡು ಸೀಟಿಗಾಗಿ ಇಷ್ಟೆಲ್ಲಾ ಪ್ರಯತ್ನ ಪಡೆಬೇಕಾ, ಹೊಂದಾಣಿಕೆ ಬೇಕಾ? ಬಿಜೆಪಿ ನಡೆಗೆ ಎಚ್ಡಿ ಕುಮಾರಸ್ವಾಮಿ ಬೇಸರ
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸುಮಾರು 27 ಲಕ್ಷ ಮತದಾರರನ್ನ ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಡಾ.ಮಂಜುನಾಥ್ ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಬಿಜೆಪಿ ನಾಯಕರು ಚುನಾವಣಾ ಕಾರ್ಯ ಆರಂಭಿಸಿದ್ದಾರೆ. ಮಂಜುನಾಥ್ ಅವರ ವೈದ್ಯಕೀಯ ಸೇವೆ ಹೆಸರುವಾಸಿಯಾಗಿದೆ. ಹಾಗಾಗಿ ಅವರನ್ನ ಈ ಚುನಾವಣೆಯಲ್ಲಿ ನಿಲ್ಲಿಸಬೇಕು ಅಂತ ಬಿಜೆಪಿ ವರಿಷ್ಠರು ಮನವಿ ಮಾಡಿದರು. ಹಾಗಾಗಿ ಡಾ.ಮಂಜುನಾಥ್ ಅವರು ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
ಮಂಜುನಾಥ್ ವಿರುದ್ಧದ ಟೀಕೆ ಕಾಂಗ್ರೆಸ್ಗೆ ಮುಳ್ಳು
ಮಂಜುನಾಥ್ ಅವರನ್ನು ಹೆಚ್ಚಿನ ಲೀಡ್ ಕೊಟ್ಟು ಗೆಲ್ಲಿಸಬೇಕು. ಅವರು ಪಕ್ಷಾತೀತವಾದ ಒಬ್ಬ ವ್ಯಕ್ತಿ. ಅವರ ಗೆಲುವಿಗೆ ಎಲ್ಲರೂ ಕೆಲಸ ಮಾಡಬೇಕು ಎಂದು ನಿಖಿಲ್ ಹೇಳಿದರು. ಮಂಜುನಾಥ್ ಸ್ಪರ್ಧೆಗೆ ಕಾಂಗ್ರೆಸ್ ಶಾಸಕರ ಟೀಕೆ ವಿಚಾರವಾಗಿ ಮಾತನಾಡಿದ ಅವರು, ನಾನೂ ಕೂಡಾ ಇಲ್ಲಿನ ಸ್ಥಳೀಯ ಶಾಸಕರ ಹೇಳಿಕೆಗಳನ್ನ ಗಮನಿಸಿದ್ದೇನೆ. ಇದು ಅವರ ಪಕ್ಷಕ್ಕೇ ಮುಳ್ಳಾಗುವ ಲಕ್ಷಣ ಕಾಣುತ್ತಿದೆ. ಇದರಲ್ಲಿ ಕಾಂಗ್ರೆಸ್ ಸೋಲಿನ ಹತಾಸೆ ಗೊತ್ತಾಗುತ್ತಿದೆ. ಅವರ ಉದ್ಧಟತನದ ಹೇಳಿಕೆಗೆ ಜನ ಉತ್ತರ ಕೊಡುತ್ತಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ