ನವದೆಹಲಿ, ಜೂನ್ 6: ಲೋಕಸಭೆ ಚುನಾವಣೆಯಲ್ಲಿ (Lok Sabha Election Result) ಉತ್ತರ ಪ್ರದೇಶದಲ್ಲಿ (Uttar Pradesh) ಸುಮಾರು 16 ಕ್ಷೇತ್ರಗಳಲ್ಲಿ ಬಿಜೆಪಿ (BJP) ಹಾಗೂ ಅದರ ಮಿತ್ರ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಬಹುಜನ ಸಮಾಜ ಪಕ್ಷ (BSP) ಅಭ್ಯರ್ಥಿಗಳು ಪರೋಕ್ಷವಾಗಿ ನೆರವಾಗಿದ್ದಾರೆ! ಇದಕ್ಕೆ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. ಆ 16 ಸ್ಥಾನಗಳಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತಲೂ ಹೆಚ್ಚು ಮತಗಳನ್ನು ಬಿಎಸ್‌ಪಿ ಅಭ್ಯರ್ಥಿಗಳು ಗಳಿಸಿದ್ದಾರೆ. ಈ ಪೈಕಿ ಬಿಜೆಪಿ 14 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ, ಅದರ ಮಿತ್ರ ಪಕ್ಷಗಳಾದ ರಾಷ್ಟ್ರೀಯ ಲೋಕದಳ ಮತ್ತು ಅಪ್ನಾ ದಳ ತಲಾ 1 ಸ್ಥಾನ ಗೆದ್ದಿವೆ. ಒಂದು ವೇಳೆ, ಈ ಕ್ಷೇತ್ರಗಳಲ್ಲಿ ಗೆಲುವು ಇಂಡಿಯಾ ಮೈತ್ರಿಕೂಟದ್ದಾಗಿದ್ದರೆ ಎನ್‌ಡಿಎ 278 ಸ್ಥಾನಗಳಿಗೆ ತೃಪ್ತಿಪಡಬೇಕಾಗಿ ಬರುತ್ತಿತ್ತು. ಬಿಜೆಪಿ 226 ಕ್ಕೆ ಕುಸಿಯುತ್ತಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ 33 ಸ್ಥಾನಗಳನ್ನು ಗೆದ್ದಿದೆ. ಈ 14 ಸ್ಥಾನಗಳಲ್ಲಿ ಸೋತಿದ್ದರೆ ಅದರ ಸಂಖ್ಯೆ 19 ಮಾತ್ರ ಉಳಿಯುತ್ತಿತ್ತು, ಇದು ದೊಡ್ಡ ಹೊಡೆತವಾಗುತ್ತಿತ್ತು.
ಸಹಜವಾಗಿ, ಬಿಎಸ್ಪಿ ಪಡೆದ ಮತಗಳು ಅದರ ಅನುಪಸ್ಥಿತಿಯಲ್ಲಿ ಎಸ್‌ಪಿ ಅಥವಾ ಕಾಂಗ್ರೆಸ್‌ಗೇ ಹೋಗುತ್ತವೆ ಎಂದು ಹೇಳಲಾಗದಿದ್ದರೂ ಬಿಎಸ್‌ಪಿ ಅನುಪಸ್ಥಿಯಿಂದಾಗಿ ಅದರ ಅನೇಕ ನಾಯಕರು ಇಂಡಿಯಾ ಮೈತ್ರಿಕೂಟಕ್ಕೆ ಸೇರಿರುವುದಂತೂ ನಿಜ. ಸಮಾಜವಾದಿ ಪಕ್ಷವು ಭದೋಹಿ ಸ್ಥಾನವನ್ನ ಟಿಎಂಸಿಗೆ ಮೀಸಲಿರಿಸಿತ್ತು. ಇದಕ್ಕೆ ಪ್ರತಿಯಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಒಂದು ಸ್ಥಾನ ಪಡೆದಿತ್ತು. ಆದರೆ, ಇವೆರಡೂ ಕ್ಷೇತ್ರದಲ್ಲಿ ಎಸ್‌ಪಿ ಮತ್ತು ಟಿಎಂಸಿ ಗೆದ್ದಿಲ್ಲ. ಟಿಎಂಸಿ ಅಭ್ಯರ್ಥಿ 4.2 ಲಕ್ಷ ಮತ ಪಡೆದಿದ್ದರೂ ಬಿಜೆಪಿ ಅಭ್ಯರ್ಥಿ ವಿರುದ್ಧ 44,072 ಮತಗಳಿಂದ ಸೋತಿದ್ದಾರೆ. ಬಿಎಸ್‌ಪಿ ಅಭ್ಯರ್ಥಿ ಸುಮಾರು 1.6 ಲಕ್ಷ ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಡಾ. ವಿನೋದ್ ಕುಮಾರ್ ಬಿಂದ್ ಗೆಲುವಿಗೆ ಸಹಕಾರಿಯಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಮಿರ್ಜಾಪುರದಲ್ಲಿ ಸೋನಿಲಾಲ್ ಬಣದ ಅಪ್ನಾದಳ ಅಭ್ಯರ್ಥಿ ಅನುಪ್ರಿಯಾ ಪಟೇಲ್ 37,810 ಮತಗಳಿಂದ ಎಸ್‌ಪಿ ಕ್ಯಾಂಡಿಡೇಟ್ ರಮೇಶ್‌ಚಾಂದ್ ಬಿಂದ್ ಅವರನ್ನ ಸೋಲಿಸಿದಾರೆ. ಬಿಎಸ್‌ಪಿಯ ಮನೀಶ್‌ಕುಮಾರ್ ಇಲ್ಲಿ 1.4 ಲಕ್ಷ ಮತಗಳನ್ನ ಪಡೆದಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರಾ, ರಾಜ್ಯದಿಂದ ಎಷ್ಟು ಮಂದಿಗೆ ಸಿಗಬಹುದು ಮೋದಿ ಸಂಪುಟದಲ್ಲಿ ಸ್ಥಾನ?
ಅಕ್ಬರ್‌ಪುರದಲ್ಲಿ ಬಿಜೆಪಿಯ ದೇವೇಂದ್ರ ಸಿಂಗ್ 5,17,423 ಮತಗಳನ್ನು ಪಡೆದಿದ್ದಾರೆ. ಎಸ್‌ಪಿಯ ರಾಜಾರಾಮ್ ಪಾಲ್ 4,07,378 ಮತಗಳನ್ನು ಪಡೆದಿದ್ದಾರೆ. ಬಿಎಸ್‌ಪಿ ಮೂರನೇ ಸ್ಥಾನದಲ್ಲಿಯೇ ಉಳಿದಿದೆ. ಬಿಎಸ್ಪಿ ಖಾತೆಗೆ 73,140 ಮತಗಳು ಬಂದಿವೆ. ಅಂದರೆ ಇಲ್ಲಿ ಬಿಜೆಪಿ 44,345 ಮತಗಳ ಅಂತರದಿಂದ ಗೆದ್ದಿದೆ. ಬಿಎಸ್‌ಪಿ ಸ್ಪರ್ಧಿಸದೇ ಇದ್ದು ಆ ಮತಗಳೂ ಎಸ್‌ಪಿಗೆ ಶಿಫ್ಟ್ ಆಗಿದ್ದರೆ ಬಿಜೆಪಿ ಸೋಲುತ್ತಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪಕ್ಷಾಂತರಿ ನಾಯಕರಿಂದ ಬಿಜೆಪಿಗೆ ನಷ್ಟವೇ ಹೆಚ್ಚು! ಎಡವಿದ್ದು ಎಲ್ಲೆಲ್ಲಿ? ಇಲ್ಲಿದೆ ನೋಡಿ
ಗೆಲುವಿನ ಅಂತರಕ್ಕಿಂತ ಬಿಎಸ್‌ಪಿ ಹೆಚ್ಚು ಮತ ಪಡೆದಿರುವುದು ಸೀಮಿತ ಪ್ರದೇಶದಲ್ಲಷ್ಟೇ ಅಲ್ಲ, ಉತ್ತರ ಪ್ರದೇಶದ ಬಿಜ್ನೋರ್‌ನಿಂದ ಮಿರ್ಜಾಪುರದವರೆಗೂ ಹಲವೆಡೆ ದಾಖಲಾಗಿದೆ ಎಂಬುದು ಗಮನಾರ್ಹ.
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ