ಉತ್ತರ ಪ್ರದೇಶದಲ್ಲಿ ಪಕ್ಷಾಂತರಿ ನಾಯಕರಿಂದ ಬಿಜೆಪಿಗೆ ನಷ್ಟವೇ ಹೆಚ್ಚು! ಎಡವಿದ್ದು ಎಲ್ಲೆಲ್ಲಿ? ಇಲ್ಲಿದೆ ನೋಡಿ

ಬಿಜೆಪಿ ಕಳೆದ ಬಾರಿ ತನ್ನ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿ ಅನೇಕ ಎಸ್​​ಪಿ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡಿತ್ತು. ರಾಜ್ಯಸಭೆ ಚುನಾವಣೆ ಸಂದರ್ಭ ಆರಂಭವಾದ ಈ ಪ್ರಕ್ರಿಯೆ ನಂತರವೂ ಮುಂದುವರಿದಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ದೃಷ್ಟಿಯಿಂದ ಹೂಡಿದ್ದ ಈ ತಂತ್ರಗಳು ಬಿಜೆಪಿಗೆ ಫಲ ಕೊಡಲೇ ಇಲ್ಲ. ಹಾಗಾದರೆ ಉತ್ತರ ಪ್ರದೇಶದಲ್ಲಿ ಯಾವೆಲ್ಲ ಅಂಶಗಳು ಬಿಜೆಪಿ ಹಿನ್ನಡೆಗೆ ಕಾರಣವಾಯಿತು? ಇಲ್ಲಿವೆ ವಿವರ.

ಉತ್ತರ ಪ್ರದೇಶದಲ್ಲಿ ಪಕ್ಷಾಂತರಿ ನಾಯಕರಿಂದ ಬಿಜೆಪಿಗೆ ನಷ್ಟವೇ ಹೆಚ್ಚು! ಎಡವಿದ್ದು ಎಲ್ಲೆಲ್ಲಿ? ಇಲ್ಲಿದೆ ನೋಡಿ
ಉತ್ತರಪ್ರದೇಶದಲ್ಲಿ ಪಕ್ಷಾಂತರಿ ನಾಯಕರಿಂದ ಬಿಜೆಪಿಗೆ ನಷ್ಟವೇ ಹೆಚ್ಚು!
Follow us
|

Updated on:Jun 05, 2024 | 8:32 AM

ಉತ್ತರ ಪ್ರದೇಶದಲ್ಲಿ (Uttar Pradesh) ಬಿಜೆಪಿ (BJP) ಭಾರೀ ಹಿನ್ನಡೆ ಅನುಭವಿಸಿದೆ. ಇದುವೇ ಕೇಸರಿ ಪಕ್ಷವು ಕೇಂದ್ರದಲ್ಲಿ ಮತ್ತೆ ಪೂರ್ಣ ಬಹುಮತ ಪಡೆಯಲು ಅಡ್ಡಿಯಾಗಿದ್ದಂತೂ ನಿಜ. 2014 ಮತ್ತು 2019 ರ ಫಲಿತಾಂಶವನ್ನು 2024 ರಲ್ಲಿ ಉತ್ತರ ಪ್ರದೇಶದಲ್ಲಿ ಪುನರಾವರ್ತಿಸಲು ಬಿಜೆಪಿಯು ಲೋಕಸಭೆ ಚುನಾವಣೆಗೆ (Lok Sabha Elections) ಮುನ್ನ ಇತರ ಪಕ್ಷಗಳ ನಾಯಕರನ್ನು ಸೆಳೆಯಿತು. ಬಿಜೆಪಿಯು ತನ್ನ ರಾಜಕೀಯ ಭದ್ರಕೋಟೆಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಎಸ್‌ಪಿ ಶಾಸಕರನ್ನು ತೆಕ್ಕೆಗೆ ಸೆಳೆದಿತ್ತು. ಆದರೆ ಈ ಸೂತ್ರವು ಬಿಜೆಪಿಗೆ ಹಿಟ್ ಆಗಿದ್ದಕ್ಕಿಂತ ಪ್ಲಾಪ್ ಆಗಿದ್ದೇ ಹೆಚ್ಚು ಎನ್ನುತ್ತಿವೆ ಲೋಕಸಭೆ ಫಲಿತಾಂಶದ (Lok Sabha Result)ಅಂಕಿಅಂಶಗಳು.

ಫೆಬ್ರವರಿಯಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ, ಏಳು ಎಸ್‌ಪಿ ಶಾಸಕರು ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿದ್ದರು. ಇದರಲ್ಲಿ ರಾಕೇಶ್ ಪಾಂಡೆ, ರಾಕೇಶ್ ಪ್ರತಾಪ್ ಸಿಂಗ್, ಅಭಯ್ ಸಿಂಗ್, ಮನೋಜ್ ಪಾಂಡೆ, ವಿನೋದ್ ಚತುರ್ವೇದಿ, ಪೂಜಾ ಪಾಲ್ ಮತ್ತು ಅಶುತೋಷ್ ಮೌರ್ಯ ಸೇರಿದ್ದಾರೆ. ಬಂಡಾಯ ಎಸ್​ಪಿ ಶಾಸಕರ ಪೈಕಿ ಅಮೇಥಿಯ ಮಹಾರಾಜ್ ದೇವಿ ಕೂಡ ಸೇರಿದ್ದಾರೆ. ಈ ಬಂಡಾಯ ಎಸ್‌ಪಿ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು ಮಾತ್ರವಲ್ಲದೆ 2024ರ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವುದು ಕಂಡುಬಂದಿತ್ತು.

ಜಿತಿನ್ ಪ್ರಸಾದ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿ ಕಾಂಗ್ರೆಸ್​​ನಿಂದ ಬಂದ ಆರ್​​ಪಿಎನ್ ಸಿಂಗ್ ಅವರನ್ನು ಬಿಜೆಪಿ ರಾಜ್ಯಸಭೆಗೆ ಕಳುಹಿಸಿತು. ಇದಲ್ಲದೇ ಬಿಜೆಪಿ ಮಾಜಿ ಎಂಎಲ್‌ಸಿ ಯಶವಂತ್‌ ಘರ್ ವಾಪ್ಸಿ ಮಾಡಿದರೂ ಪ್ರಬಲ ನಾಯಕ ಧನಂಜಯ್‌ ಸಿಂಗ್‌ ಬೆಂಬಲ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಲಿಲ್ಲ.

ಅಮೇಥಿ, ರಾಯ್​ ಬರೇಲಿಯಲ್ಲಿ ಪ್ರಯೋಜನವಾಗದ ಮನೋಜ್ ಪಾಂಡೆ

ಎಸ್‌ಪಿಯ ಬಂಡಾಯ ಶಾಸಕ ಮನೋಜ್ ಪಾಂಡೆ ರಾಯ್ ಬರೇಲಿಯ ಉಂಚಹಾರ್‌ನಿಂದ ಬಂದವರು. ಹೀಗಾಗಿ ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ಬ್ರಾಹ್ಮಣ ಮತದಾರರನ್ನು ಸೆಳೆಯಲು ಬಿಜೆಪಿ ಮನೋಜ್ ಪಾಂಡೆಯನ್ನು ಮುಂದೆಬಿಟ್ಟಿತ್ತು. ಆದರೆ, ಮನೋಜ್ ಪಾಂಡೆ ರಾಯ್ ಬರೇಲಿಯಲ್ಲಿ ಬಿಜೆಪಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಅಮೇಥಿಯಲ್ಲಿ ಯಾವುದೇ ಪ್ರಭಾವವನ್ನು ತೋರಿಸಲು ಸಾಧ್ಯವಾಗಲಿಲ್ಲ. ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸುಮಾರು ಒಂದು ಲಕ್ಷದ 60 ಸಾವಿರ ಮತಗಳಿಂದ ಸೋತಿದ್ದರೆ, ರಾಯ್ ಬರೇಲಿಯಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ರಾಹುಲ್ ಗಾಂಧಿ ನಾಲ್ಕು ಲಕ್ಷ ಮತಗಳಿಂದ ಸೋಲಿಸಿದ್ದಾರೆ. ಮನೋಜ್ ಪಾಂಡೆ ಅವರಿಂದ ಬಿಜೆಪಿಗೆ ಯಾವುದೇ ಲಾಭವಾಗಲಿಲ್ಲ.

ಕೈಹಿಡಿಯದ ಎಸ್​​ಪಿ ನಾಯಕರ ಆಪರೇಷನ್​

ಅಮೇಥಿಯ ಗೌರಿಗಂಜ್ ಕ್ಷೇತ್ರದಿಂದ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಅವರನ್ನು ಬಿಜೆಪಿ ಆಪರೇಷನ್ ಮಾಡಿತ್ತು. ಆದರೆ ಅಮೇಥಿ ಕ್ಷೇತ್ರದಲ್ಲಿ ಇವರಿಂದ ಸ್ಮೃತಿ ಇರಾನಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಅದೇ ರೀತಿ ಅಮೇಥಿಯ ಎಸ್‌ಪಿ ಶಾಸಕಿ ಮಹಾರಾಜಿ ದೇವಿ ಕೂಡ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಪರ ಸಾಕಷ್ಟು ಪ್ರಯತ್ನ ಮಾಡಿದರೂ ಏನನ್ನೂ ಸಾಧಿಸಲಾಗಲಿಲ್ಲ. ಅಮೇಥಿಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮತ್ತು ರಾಯ್ ಬರೇಲಿ ಕ್ಷೇತ್ರವನ್ನು ಗೆಲ್ಲುವ ಉದ್ದೇಶದಿಂದ ಎಸ್‌ಪಿ ಶಾಸಕರನ್ನು ಓಲೈಸುವ ಬಿಜೆಪಿ ತಂತ್ರ ವಿಫಲವಾಯಿತು.

ಬಿಎಸ್​​ಪಿಯಿಂದ ಗೆದ್ದಿದ್ದರು, ಬಿಜೆಪಿಯಿಂದ ಸೋತರು!

ಬಿಜೆಪಿಯು ಎಸ್‌ಪಿ ಶಾಸಕ ರಾಕೇಶ್ ಪಾಂಡೆ ಅವರನ್ನು ಪಕ್ಷಕ್ಕೆ ಕರೆಸಿಕೊಂಡಿದ್ದು ಮಾತ್ರವಲ್ಲದೆ ಅವರ ಮಗ ರಿತೇಶ್ ಪಾಂಡೆಯನ್ನು ಅಂಬೇಡ್ಕರ್ ನಗರದಿಂದ ಅಭ್ಯರ್ಥಿಯನ್ನಾಗಿ ಮಾಡಿತು. 2019 ರಲ್ಲಿ, ರಿತೇಶ್ ಪಾಂಡೆ ಬಿಎಸ್ಪಿ ಟಿಕೆಟ್‌ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ 2024 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತರು. ರಿತೇಶ್ ಮತ್ತು ರಾಕೇಶ್ ಪಾಂಡೆ ಅವರನ್ನು ಕರೆದುಕೊಂಡು ಬಂದುದು ಬಿಜೆಪಿಗೆ ಫಲ ನೀಡಲಿಲ್ಲ. ಅಂಬೇಡ್ಕರ್ ನಗರದಲ್ಲಿ ಎಸ್‌ಪಿಯ ಲಾಲ್ಜಿ ವರ್ಮಾ ಅವರು ರಿತೇಶ್ ಪಾಂಡೆ ಅವರನ್ನು ಸುಮಾರು 1 ಲಕ್ಷ 37 ಸಾವಿರ ಮತಗಳಿಂದ ಸೋಲಿಸಿದರು.

ಅಂಬೇಡ್ಕರ್ ನಗರ ಮತ್ತು ಅಯೋಧ್ಯೆ ಸೀಟುಗಳನ್ನು ಗೆಲ್ಲುವ ತಂತ್ರ ಹೆಣೆದ ಬಿಜೆಪಿ, ಅದಕ್ಕಾಗಿ ಗೋಸೈಗಂಜ್ ಕ್ಷೇತ್ರದಿಂದ ಮಾಜಿ ಎಸ್‌ಪಿ ಶಾಸಕ ಅಭಯ್ ಸಿಂಗ್ ಅವರನ್ನು ಕಣಕ್ಕಿಳಿಸಿದ್ದು ಮಾತ್ರವಲ್ಲದೆ ಅವರಿಗೆ ವೈ ಕೆಟಗರಿ ಭದ್ರತೆಯನ್ನೂ ಒದಗಿಸಿತ್ತು. ರಾಕೇಶ್ ಪಾಂಡೆ ಬ್ರಾಹ್ಮಣ ಸಮುದಾಯದಲ್ಲಿ ಪ್ರಭಾವವನ್ನು ಹೊಂದಿದ್ದು, ಅಭಯ್ ಸಿಂಗ್ ಠಾಕೂರರಲ್ಲಿ ಪ್ರಭಾವವನ್ನು ಹೊಂದಿದ್ದಾರೆಂದು ಪರಿಗಣಿಸಲಾಗಿದೆ. ಎಸ್‌ಪಿಯ ಈ ಇಬ್ಬರೂ ಬಂಡಾಯ ಶಾಸಕರು ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಜಾತಿ ಸಮೀಕರಣದ ಪ್ರಕಾರ, ಈ ಸ್ಥಾನವು ಬಿಜೆಪಿಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿತ್ತು. ಹೀಗಾಗಿ ಬಿಜೆಪಿಯು ಎಸ್​​ಪಿಯ ಇಬ್ಬರೂ ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತು. ಆದರೆ ಇದು ಅಂಬೇಡ್ಕರ್ ನಗರದಲ್ಲಿ ಕೆಲಸ ಮಾಡಲಿಲ್ಲ. ಅಯೋಧ್ಯೆಯಲ್ಲಿಯೂ ಯಾವುದೇ ಪರಿಣಾಮ ಬೀರಲಿಲ್ಲ. ಪರಿಣಾಮವಾಗಿ ಬಿಜೆಪಿ ಎರಡೂ ಸ್ಥಾನಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಪಂಚರಾಜ್ಯಗಳಿಂದ ಬಿಜೆಪಿಯ ‘400 ಪಾರ್​’ ಕನಸು ನುಚ್ಚುನೂರು: ಹಿನ್ನಡೆಗೆ ಕಾರಣಗಳು ಇಲ್ಲಿವೆ ನೋಡಿ

ಇಷ್ಟೇ ಅಲ್ಲದೆ, ಇಂಥ ಇನ್ನೂ ಹಲವಾರು ಉದಾಹರಣೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸೋಲಿಗೆ ಕಾರಣಗಳಾಗಿ ಪರಿಣಮಿಸಿವೆ. ಉತ್ತರ ಪ್ರದೇಶದಲ್ಲಿ ಸ್ಥಾನಗಳನ್ನು ಇನ್ನಷ್ಟು ಹೆಚ್ಚಿಸಲು ಬಿಜೆಪಿ ಮಾಡಿದ ಆಪರೇಷನ್​ ತಂತ್ರ ಇದೀಗ ಪಕ್ಷಕ್ಕೆ ಸರಳ ಬಹುಮತ ತಂದುಕೊಡುವುದನ್ನೇ ತಪ್ಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 am, Wed, 5 June 24

ತಾಜಾ ಸುದ್ದಿ