ಚೆನ್ನೈ: ತಮಿಳುನಾಡು ಹಲವು ದಶಕಗಳಿಂದ 2 ದ್ರಾವಿಡ ಪಕ್ಷಗಳ ಪ್ರಾಬಲ್ಯದಿಂದ ಕೂಡಿದ ರಾಜಕಾರಣವನ್ನು ಕಾಣುತ್ತಿದೆ. ಇಲ್ಲಿನ ರಾಜಕೀಯ ಬೇರೆಲ್ಲ ರಾಜ್ಯಗಳ ರಾಜಕೀಯಕ್ಕೆ ಹೋಲಿಸಿದರೆ ಬಹಳ ಭಿನ್ನವಾದುದು. ಹೀಗಾಗಿ, ತಮಿಳುನಾಡಿನಲ್ಲಿ (Tamil Nadu Exit Poll) ಪ್ರಾದೇಶಿಕ ಪಕ್ಷಗಳ ದರ್ಬಾರ್ ಜೋರಾಗಿದೆ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Elections 2024) ತಮಿಳುನಾಡು ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಿದ್ದು, ಕೆ. ಅಣ್ಣಾಮಲೈ (K Annamalai) ನಾಯಕತ್ವದಲ್ಲಿ ಬಿಜೆಪಿ ತಮಿಳುನಾಡಿಗೆ ದಾಪುಗಾಲಿಡುವುದು ಖಚಿತವಾಗಿದೆ.
ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಕೆ. ಅಣ್ಣಾಮಲೈ ಬಿಜೆಪಿ ಸೇರುವ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಲು ಭಾರೀ ಪ್ರಚಾರ ನಡೆಸಿದ್ದರು. ತಮ್ಮ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸಿರುವ ಅಣ್ಣಾಮಲೈ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ತನ್ನ ಖಾತೆ ತೆರೆಯುವಂತೆ ಮಾಡಿದ್ದಾರೆ ಎಂಬುದು ಎಕ್ಸಿಟ್ ಪೋಲ್ನ ಸಮೀಕ್ಷೆ.
ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ತಿಳಿಸಿದೆ. ಹಾಗೇ, ಇಂಡಿಯ ಬ್ಲಾಕ್‌ಗೆ 26-30 ಸ್ಥಾನಗಳು ಸಿಗಲಿದೆ ಎಂದು ಹೇಳಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಸಮೀಕ್ಷೆ ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ 5 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಜನ್ ಕಿ ಬಾತ್ ಎಕ್ಸಿಟ್ ಪೋಲ್ ಎನ್ಡಿಎ ಮೈತ್ರಿಕೂಟಕ್ಕೆ 5 ಸ್ಥಾನಗಳು ಸಿಗುತ್ತವೆ ಎಂದು ಹೇಳಿದೆ.
ಎಬಿಪಿ-ಸಿವೋಟರ್ ಪ್ರಕಾರ ಡಿಎಂಕೆ-ಕಾಂಗ್ರೆಸ್ ಮೈತ್ರಿ 37 ರಿಂದ 39 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಜೆಪಿ 2 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ನ್ಯೂಸ್ 18 ಎಕ್ಸಿಟ್ ಪೋಲ್ ಪ್ರಕಾರ, ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ 8-11 ಸ್ಥಾನಗಳನ್ನು, ಇಂಡಿಯ ಬ್ಲಾಕ್ 36-39 ಮತ್ತು ಇತರರು 0-2 ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ.
ಇದನ್ನೂ ಓದಿ: Exit Polls: ಯು ಟರ್ನ್ ಹೊಡೆದ ಕಾಂಗ್ರೆಸ್; ಟಿವಿಯ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸಲು ಇಂಡಿಯ ಬಣ ನಿರ್ಧಾರ
ಉತ್ತರ ಮತ್ತು ಪಶ್ಚಿಮದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಿದ ನಂತರ, ಬಿಜೆಪಿಯು ತಮಿಳುನಾಡಿನ ಮೇಲೆ ತನ್ನ ಕಣ್ಣು ಹಾಕಿದೆ. 39 ಲೋಕಸಭೆ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯ ಹೊಂದಿರುವ ಪಕ್ಷಗಳಾಗಿವೆ.
ತಮಿಳುನಾಡಿನಲ್ಲಿ ಬಿಜೆಪಿ ತನ್ನ ಫೈರ್‌ಬ್ರಾಂಡ್ ನಾಯಕ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿದ ಕೊಯಮತ್ತೂರು ಲೋಕಸಭಾ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅವರು ಕೊಯಮತ್ತೂರಿನ ಮಾಜಿ ಮೇಯರ್ ಮತ್ತು ಡಿಎಂಕೆ ನಾಯಕ ಗಣಪತಿ ರಾಜ್ ಕುಮಾರ್ ಮತ್ತು ಎಐಎಡಿಎಂಕೆಯ ಸಿಂಗಾಯ್ ಜಿ ರಾಮಚಂದ್ರನ್ ವಿರುದ್ಧ ಸ್ಪರ್ಧಿಸಿದ್ದಾರೆ. ಕೊಯಮತ್ತೂರು ಅಲ್ಲದೆ, ನೀಲಗಿರಿ, ಚೆನ್ನೈ ದಕ್ಷಿಣ, ತೂತುಕ್ಕುಡಿ, ಥೇಣಿ, ಮತ್ತು ಶಿವಗಂಗಾ ಕ್ಷೇತ್ರಗಳು ಕುತೂಹಲದಿಂದ ವೀಕ್ಷಿಸಲ್ಪಟ್ಟ ಇತರ ಕ್ಷೇತ್ರಗಳಾಗಿವೆ.
ಈ ಬಾರಿಯ ಚುನಾವಣೆಯಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಕಾಂಗ್ರೆಸ್ ಮತ್ತು ಇತರ 5 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಡಿಎಂಕೆ 21 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 9 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 2 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ವಿದುತಲೈ ಚಿರುತೈಗಲ್ ಕಚ್ಚಿ ತಲಾ 2 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಇದನ್ನೂ ಓದಿ: LS Exit Polls 2024 Highlights: ಲೋಕಸಭೆ ಚುನಾವಣೆ ಅಂತ್ಯ, ಇಲ್ಲಿದೆ ಹೈಲೈಟ್ಸ್
ಎನ್‌ಡಿಎಯಿಂದ ಬಿಜೆಪಿ 19, ಅನ್ಬುಮಣಿ ರಾಮದಾಸ್ ಅವರ ಪಟ್ಟಾಲಿ ಮಕ್ಕಳ್ ಕಚ್ಚಿ 10 ಮತ್ತು ಜಿಕೆ ವಾಸನ್ ಅವರ ತಮಿಳು ಮಾನಿಲ ಕಾಂಗ್ರೆಸ್ (ಮೂಪನಾರ್) 2 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಟಿಟಿವಿ ದಿನಕರನ್ ಅವರ ಪಕ್ಷ ಎನ್‌ಡಿಎಯಿಂದ 2 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ 32 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಎಐಎಡಿಎಂಕೆ ಮಾಜಿ ನಾಯಕ ಹಾಗೂ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಅವರು ರಾಮನಾಥಪುರಂ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
2019ರ ಚುನಾವಣೆಯಲ್ಲಿ, ಇಬ್ಬರು ದಿಗ್ಗಜರಾದ ಜೆ. ಜಯಲಲಿತಾ ಮತ್ತು ಎಂ. ಕರುಣಾನಿಧಿ ಅವರ ಸಾವಿನ ನಂತರ ತಮಿಳುನಾಡಿನಲ್ಲಿ ಹಲವು ಮಹತ್ವದ ರಾಜಕೀಯ ಬದಲಾವಣೆಗಳು ಸಂಭವಿಸಿದವು. ಕಳೆದ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿ 39 ಸ್ಥಾನಗಳಲ್ಲಿ 38 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಎಐಎಡಿಎಂಕೆ ಕೇವಲ 1 ಸ್ಥಾನ ಪಡೆದು ತೀವ್ರ ಅವಮಾನ ಎದುರಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Sat, 1 June 24